Site icon Vistara News

ಆಸ್ಪತ್ರೆ ಹೊರಗೆ ಪಾರ್ಥ ಚಟರ್ಜಿ ಮೇಲೆ ಚಪ್ಪಲಿ ಎಸೆದ ಮಹಿಳೆ; ಅವನೊಬ್ಬ ಅಯೋಗ್ಯ ಎಂದು ಬೈಗುಳ

Partha Chatterjee

ಕೋಲ್ಕತ್ತ: ಪ್ರಾಥಮಿಕ ಶಾಲಾ ನೇಮಕಾತಿ ಹಗರಣದಲ್ಲಿ ಇ ಡಿಯಿಂದ ಬಂಧಿತರಾಗಿರುವ ಪಶ್ಚಿಮ ಬಂಗಾಳ ಮಾಜಿ ಸಚಿವ ಪಾರ್ಥ ಚಟರ್ಜಿಗೆ ಕೋಲ್ಕತ್ತದ ಆಸ್ಪತ್ರೆಯ ಹೊರಗೆ ಮಹಿಳೆಯೊಬ್ಬರು ಚಪ್ಪಲಿ ಎಸೆದಿದ್ದಾರೆ. ಇಂದು ಪಾರ್ಥ ಚಟರ್ಜಿ ಮತ್ತು ಅವರ ಆಪ್ತೆ ಅರ್ಪಿತಾ ಮುಖರ್ಜಿಯನ್ನು ಇಡಿ ಅಧಿಕಾರಿಗಳು ಕೋಲ್ಕತ್ತದ ಜೊಕಾದಲ್ಲಿರುವ ಇಎಸ್​ಐ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆಂದು ಕರೆದುಕೊಂಡು ಹೋಗಿದ್ದರು. ಆಗ ಆಸ್ಪತ್ರೆ ಆವರಣದಲ್ಲಿ ಮಹಿಳೆಯೊಬ್ಬರು ಪಾರ್ಥ ಚಟರ್ಜಿಯನ್ನು ನೋಡಿ ಕೆಂಡಾಮಂಡಲರಾಗಿದ್ದಾರೆ. ‘ಈ ವ್ಯಕ್ತಿ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾನೆ. ಅದಕ್ಕಾಗಿಯೇ ನಾನು ನನ್ನ ಚಪ್ಪಲಿಯನ್ನು ಅವನೆಡೆಗೆ ಎಸೆದೆ’ ಎಂದು ಹೇಳಿಕೊಂಡಿದ್ದಾರೆ.

ಇ ಡಿ ಅಧಿಕಾರಿಗಳು ಪಾರ್ಥ ಚಟರ್ಜಿಯನ್ನು ಕರೆದುಕೊಂಡು ಹೋಗುತ್ತಿದ್ದಾಗಲೇ ಮಹಿಳೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಅಲ್ಲಿಯೇ ಇದ್ದ ಮಾಧ್ಯಮದವರ ಬಳಿ ಮಾತನಾಡಿದ ಅವರು, ‘ನಾನು ಔಷಧಗಳನ್ನು ಕೊಳ್ಳಲೆಂದು ಇಲ್ಲಿಗೆ ಬಂದಿದ್ದೆ. ಬಡವರ ಕೋಟ್ಯಂತರ ರೂಪಾಯಿ ಹಣ ಕೊಳ್ಳೆ ಹೊಡೆದು ಫ್ಲ್ಯಾಟ್​​ಗಳನ್ನು, ಎಸಿ ಕಾರುಗಳನ್ನು ಖರೀದಿಸಿದ ಇಂಥವರೆಲ್ಲ ಜನನಾಯಕರು ಎನ್ನಿಸಿಕೊಳ್ಳಲು ಯೋಗ್ಯರಲ್ಲ. ಪಾರ್ಥ ಚಟರ್ಜಿಯನ್ನು ಹಗ್ಗದಿಂದ ಕಟ್ಟಿ, ರಸ್ತೆಯ ಮೇಲೆ ಎಳೆಯಬೇಕು. ನನ್ನ ಚಪ್ಪಲಿಯನ್ನು ಆತನಿಗೆ ಎಸೆದಿದ್ದೇನೆ. ಮತ್ತೆ ಅದನ್ನು ಮುಟ್ಟುವುದಿಲ್ಲ. ಹಾಗೇ, ಬರಿಗಾಲಲ್ಲೇ ವಾಪಸ್ ಮನೆಗೆ ಹೋಗುತ್ತೇನೆ’ ಎಂದಿದ್ದಾರೆ.

‘ನಂದಲ್ಲ’, ‘ನನ್ನದೂ ಅಲ್ಲ !’
ಜುಲೈ 23ರಿಂದ ಪಾರ್ಥ ಚಟರ್ಜಿಯ ಆಪ್ತೆ ಅರ್ಪಿತಾ ಮುಖರ್ಜಿ ಮನೆಗಳನ್ನು ರೇಡ್​ ಮಾಡುತ್ತಿರುವ ಇಡಿ ಈಗಾಗಲೆ 50 ಕೋಟಿ ರೂಪಾಯಿಗೂ ಅಧಿಕ ಹಣ ವಶಪಡಿಸಿಕೊಂಡಿದೆ. ಆದರೆ ಇವ್ಯಾವವೂ ನನ್ನದಲ್ಲ ಎಂದು ಅರ್ಪಿತಾ ಇಡಿ ಅಧಿಕಾರಿಗಳ ಎದುರು ಹೇಳಿದ್ದಾರೆ. ಈ ಹಣ ಪಾರ್ಥ ಅವರಿಗೇ ಸೇರಿದ್ದು. ಅದನ್ನೆಲ್ಲ ನನ್ನ ಮನೆಯಲ್ಲಿ ಇಡುತ್ತಿದ್ದರು. ಎಷ್ಟು ಹಣ ಇದೆ ಎಂಬುದು ನನಗೆ ಗೊತ್ತಿಲ್ಲ. ಪಾರ್ಥ ಚಟರ್ಜಿ ಅನುಯಾಯಿಗಳು ಹಣ ತಂದು ಇಡುವಾಗ ನಾನು ಮನೆಯಲ್ಲಿ ಇರುತ್ತಿರಲಿಲ್ಲ. ಹಣವಿರುವ ಕೋಣೆಗಳಿಗೆ ನನಗೆ ಪ್ರವೇಶವೂ ಇರಲಿಲ್ಲ ಎಂದು ಹೇಳಿದ್ದಾರೆ. ಅತ್ತ ಪಾರ್ಥ ಚಟರ್ಜಿ ಕೂಡ ಇಡಿಗೆ ಸಿಕ್ಕಿರುವ ಹಣ ನಂದೂ ಅಲ್ಲ ಎನ್ನುತ್ತಿದ್ದಾರೆ. ಇದೆಲ್ಲ ನನ್ನ ವಿರುದ್ಧ ಮಾಡಲಾದ ಸಂಚು. ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ ಎಂದಿದ್ದಾರೆ. ಒಟ್ಟಾರೆ ಈ ಹಣ ಅರ್ಪಿತಾ ಮುಖರ್ಜಿದೂ ಅಲ್ಲ, ಪಾರ್ಥ ಚಟರ್ಜಿದೂ ಅಲ್ಲ ಎನ್ನುವಂಥ ಉತ್ತರವೇ ಸಿಗುತ್ತಿದೆ.

ಇದನ್ನೂ ಓದಿ: ಹಣವಿದ್ದ ಕೋಣೆಗಳಿಗೆ ನನಗೆ ಪ್ರವೇಶ ಇರಲಿಲ್ಲ; ಇ ಡಿ ಎದುರು ಬಾಯ್ಬಿಟ್ಟ ಅರ್ಪಿತಾ ಮುಖರ್ಜಿ

Exit mobile version