ಹೈದರಾಬಾದ್: 50 ವರ್ಷದ ಮಹಿಳೆ ಕೂದಲು ಕತ್ತರಿಸಿಕೊಳ್ಳಲು ಬ್ಯೂಟಿ ಪಾರ್ಲರ್ಗೆ ಹೋಗಿದ್ದರು. ಅವರ ಕೂದಲು ಕಟ್ ಮಾಡುವುದಕ್ಕೂ ಮುನ್ನ ಅದನ್ನು ತೊಳೆಯಲಾಗುತ್ತಿತ್ತು. ಆದರೆ ಇದೇ ವೇಳೆ ಒಂದು ಆಘಾತ ಆಗಿದೆ. ಕೂದಲು ತೊಳೆಯುತ್ತಿದ್ದಾಗಲೇ ಆ ಮಹಿಳೆ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ಕೂದಲು ತೊಳೆಯುವಾಗ ಮಹಿಳೆ ಹಿಂಭಾಗಕ್ಕೆ ಕತ್ತನ್ನು ಬಾಗಿಸಿದ್ದರಿಂದ, ಆಕೆಯ ಮಿದುಳಿಗೆ ರಕ್ತ ಪೂರೈಕೆ ಮಾಡುವ ರಕ್ತನಾಳಗಳ ಮೇಲೆ ಒತ್ತಡ ಬಿದ್ದಿದೆ. ಇದರಿಂದಾಗಿ ಮಿದುಳಿಗೆ ರಕ್ತ ಸರಬರಾಜು ಆಗದೆ ಪಾರ್ಶ್ವವಾಯು ಉಂಟಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹಾಗೇ, ಇದನ್ನು ವೈದ್ಯಕೀಯ ಭಾಷೆಯಲ್ಲಿ ‘ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್’ ಎಂದು ಕರೆಯಲಾಗುವುದು ಎಂದೂ ತಿಳಿಸಿದ್ದಾರೆ.
ಈ ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್ ತುಂಬ ಅಪರೂಪ ಎನ್ನಲಾಗಿದೆ. ಮೊಟ್ಟಮೊದಲು ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದ್ದು 1993ರಲ್ಲಿ, ಯುಎಸ್ನಲ್ಲಿ. ಅದಾದ ಮೇಲೆಯೂ ಐದಾರು ಜನರಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ. ಅದರಲ್ಲೂ ಹೆಚ್ಚಾಗಿ ಕಾಣಿಸಿದ್ದು ಪುರುಷರಲ್ಲಿ. ಹಲವರಲ್ಲಿ ಕುತ್ತಿಗೆ ಭಾಗ ಮಸಾಜ್ ಮಾಡಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಪಾರ್ಶ್ವವಾಯು ಉಂಟಾಗಿದ್ದೂ ಇದೆ.
ಹೀಗೆ ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್ಗೆ ಒಳಗಾದ ಹಲವರಿಗೆ ಚಿಕಿತ್ಸೆ ಕೊಟ್ಟಿರುವ ಸಿಕಂದರಾಬಾದ್ ಕಿಮ್ಸ್ (KIMS)ನ ನರವಿಜ್ಞಾನ ತಜ್ಞ ಡಾ. ಪ್ರವೀಣ್ ಕುಮಾರ್ ಯಾದಾ ಈ ಬಗ್ಗೆ ಮಾತನಾಡಿ, ‘ಕುತ್ತಿಗೆ ಮಸಾಜ್ ಮಾಡುವ ಸಂದರ್ಭದಲ್ಲಿ, ಆ ಮಸಾಜ್ ಮಾಡುವವರು ತಲೆ ಮತ್ತು ಕುತ್ತಿಗೆ ಮೇಲೆ ಅತಿಹೆಚ್ಚು ಒತ್ತಡ ಹೇರಿದಾಗ, ಅಥವಾ ಕುತ್ತಿಗೆಯನ್ನು ತಿರುಗಿಸಿದಾಗ ಈ ಸ್ಟ್ರೋಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗೆ ಅಗತ್ಯಕ್ಕಿಂತ ಹೆಚ್ಚು ಭಾರ ಕುತ್ತಿಗೆ, ತಲೆ ಮೇಲೆ ಬಿದ್ದಾಗ ಮಿದುಳಿಗೆ ರಕ್ತ ಸರಬರಾಜು ಆಗುವುದಿಲ್ಲ. ಹೀಗಾದಾಗಲೇ ಪಾರ್ಶ್ವವಾಯು ಉಂಟಾಗುತ್ತದೆ’ ಎಂದು ಹೇಳಿದ್ದಾರೆ. ಹೀಗೆ ಬ್ಯೂಟಿ ಪಾರ್ಲರ್ಗಳಲ್ಲಿ ಕುತ್ತಿಗೆ, ತಲೆ ಮಸಾಜ್ ಮಾಡುವವರು, ಕೂದಲು ತೊಳೆಯುವವರು ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದೂ ಹೇಳಿದ್ದಾರೆ.
ಈ ಪಾರ್ಶ್ವವಾಯುವಿನ ಲಕ್ಷಣಗಳೆಂದರೆ ತಲೆತಿರುಗುವುದು, ವಾಕರಿಕೆ, ವಾಂತಿ. ಹೈದರಾಬಾದ್ನ ಈ 50 ವರ್ಷದ ಮಹಿಳೆ ಕೂದಲು ತೊಳೆಯುವಾಗಲೂ ಆಕೆಗೆ ಇದೇ ಲಕ್ಷಣಗಳು ಗೋಚರಿಸಿದ್ದವು. ಬಳಿಕ ಆಕೆಯ ಇಡೀ ದೇಹ ಸಮತೋಲನ ಕಳೆದುಕೊಂಡಿತ್ತು. ಪ್ರಾರಂಭದಲ್ಲಿ ಮಹಿಳೆಗೆ ಗ್ಯಾಸ್ಟ್ರಿಕ್ ಸಮಸ್ಯೆ ಇರಬಹುದು ಎಂದು ಗ್ಯಾಸ್ಟ್ರೋಎಂಟರಾಲಜಿಸ್ಟ್ ಬಳಿ ಕರೆದುಕೊಂಡುಹೋಗಲಾಯಿತು. ಆದರೆ ನಂತರ ನರವಿಜ್ಞಾನ ತಜ್ಞರ ಬಳಿ ಕರೆದುಕೊಂಡು ಹೋದಾಗಲೇ ಆಕೆಗೆ ಪಾರ್ಶ್ವವಾಯು ಆಗಿರುವುದು ದೃಢಪಟ್ಟಿದೆ.
ಇದನ್ನೂ ಓದಿ: World stroke day | ಪಾರ್ಶ್ವವಾಯು ಬಗೆಗೆ ಇರಲಿ ಜಾಗೃತಿ: ಸಮಯ ಅಮೂಲ್ಯ