ನಾಲಿಗೆಯಿಲ್ಲದೆ ಮಾತಾಡಲು ಸಾಧ್ಯವಿಲ್ಲ. ನಾಲಿಗೆಯ ತುದಿ ಕತ್ತರಿಸಿ ಹೋದರೂ ಸಾಕು ಸ್ಪಷ್ಟ ಮಾತು ಬಾಯಿಂದ ಹೊರಬರಲಾರದು. ತೊದಲು ಮಾತನಾಡಬೇಕಾಗುತ್ತದೆ. ಅಂಥದ್ದರಲ್ಲಿ ಬ್ರಿಟಿಷ್ ಮಹಿಳೆಯೊಬ್ಬರು ಕ್ಯಾನ್ಸರ್ ಕಾಯಿಲೆಯಿಂದಾಗಿ ಶೇ.90ರಷ್ಟು ನಾಲಿಗೆಯನ್ನು ಕಳೆದುಕೊಂಡರೂ ಸಹಜವಾಗಿ ಮಾತನಾಡುತ್ತಿದ್ದಾರೆ. ಇದು ವೈದ್ಯಲೋಕಕ್ಕೂ ಅಚ್ಚರಿಯೆನಿಸಿದೆ.
ಬ್ರಿಟನ್ನ ಗೆಮ್ಮಾ ವೀಕ್ಸ್ ಎಂಬ 37ವರ್ಷದ ಮಹಿಳೆಗೆ ಕಳೆದ ಆರು ವರ್ಷಗಳ ಹಿಂದೆ ಮೊದಲ ಬಾರಿಗೆ ನಾಲಿಗೆಯ ಒಂದು ಬದಿಯಲ್ಲಿ ಬಿಳಿ ಬಣ್ಣದ ಪ್ಯಾಚ್ ಕಾಣಿಸಿಕೊಂಡಿತು. ಅವರು ಅದನ್ನು ಹಾಗೇ ನಿರ್ಲಕ್ಷಿಸುತ್ತ ಬಂದಿದ್ದರು. ಆದರೆ ಇದೇ ವರ್ಷ ಫೆಬ್ರವರಿಯಲ್ಲಿ ನಾಲಿಗೆಯ ಕುಳಿ ಮತ್ತಷ್ಟು ಹೆಚ್ಚಾಗಿದ್ದಲ್ಲದೆ, ಒಂದೇ ಸಲ ವಿಪರೀತ ನೋವು ಕಾಣಿಸಿಕೊಂಡಿತು. ಆಕೆಗೆ ಏನೇನೂ ತಿನ್ನಲು ಸಾಧ್ಯವಾಗುತ್ತಿರಲಿಲ್ಲ.
ಆಸ್ಪತ್ರೆಗೆ ಹೋದ ಗೆಮ್ಮಾಳನ್ನು ವೈದ್ಯರು ತಪಾಸಣೆ ಮಾಡಿದಾಗ ಬಂದ ವರದಿ ಗೆಮ್ಮಾ ವೀಕ್ ಅವರನ್ನು ದಿಗಿಲುಬಡಿಸಿತ್ತು. ಅವರು ನಾಲ್ಕನೇ ಹಂತದ ನಾಲಿಗೆ ಮತ್ತು ಕುತ್ತಿಗೆ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಗೆಮ್ಮಾ ಕೂಡಲೇ ಸರ್ಜರಿಗೆ ಸಿದ್ಧರಾದರು. ವೈದ್ಯರು ಮೊದಲೇ ಹೇಳಿಬಿಟ್ಟಿದ್ದರು. ‘ನಿಮ್ಮ ನಾಲಿಗೆಯ ಶೇ.90ರಷ್ಟು ಭಾಗವನ್ನು ತೆಗೆದು ಹಾಕಲಾಗುತ್ತದೆ. ಹೀಗಾಗಿ ನೀವು ಮತ್ತೆ ಮಾತನಾಡಲು ಸಾಧ್ಯವಾಗುವುದಿಲ್ಲ’ ಎಂದಿದ್ದರು. ಅದಕ್ಕೆ ಗೆಮ್ಮಾ ಕೂಡ ಮಾನಸಿಕವಾಗಿ ಸಿದ್ಧರಾಗಿದ್ದರು. ಕೇಂಬ್ರಿಜ್‌ನಲ್ಲಿರುವ ಅಡೆನ್‌ಬ್ರೂಕ್ಸ್ ಆಸ್ಪತ್ರೆಯಲ್ಲಿ ಸರ್ಜರಿ ನಡೆದು, ಅವರ ತೋಳಿನಿಂದ ಅಂಗಾಂಶಗಳನ್ನು ತೆಗೆದು ನಾಲಿಗೆಗೆ ಹಾಕಿ ಕಸಿ ಮಾಡಿದ್ದರು. ಈ ಮೂಲಕ ನಾಲಿಗೆ ಮರುಜೋಡಿಸಿದ್ದರು. ಆದರೆ ಮಾತನಾಡಲು ಬರುತ್ತದೆ ಎಂಬ ಭರವಸೆ ಕೊಟ್ಟಿರಲಿಲ್ಲ.
ಇದನ್ನೂ ಓದಿ: Viral Video: ಕಳ್ಳತನದ ಶಂಕೆ; ಮ್ಯಾನೇಜರ್‌ನನ್ನು ಕಂಬಕ್ಕೆ ಕಟ್ಟಿ ಹಾಕಿ, ಹೊಡೆದು ಕೊಂದೇ ಬಿಟ್ಟರು ಪಾಪಿಗಳು!
ಹೀಗೆ ಸರ್ಜರಿಯಾಗಿ ಬೆಡ್ ಮೇಲೆ ಮಲಗಿದ್ದ ಗೆಮ್ಮಾ ಇನ್ನು ತಮಗೆ ಮಾತಾಡುವುದು ಕಷ್ಟ ಎಂದೇ ಭಾವಿಸಿದ್ದರು. ಆದರೆ ಅವರ ಮಗಳು ಮತ್ತು ಫಿಯಾನ್ಸೆ ಆಕೆಯನ್ನು ನೋಡಲೆಂದು ಆಸ್ಪತ್ರೆಗೆ ಬಂದರು. ಗೆಮ್ಮಾಳನ್ನು ಮಾತನಾಡಿಸಿದರು. ಆಗ ಗೆಮ್ಮಾ ಅಚ್ಚರಿಯೆಂಬಂತೆ ‘ಹೆಲೋ’ ಅಂದಿದ್ದಾರೆ. ಹೀಗೆ ಅವರು ಸ್ಪಷ್ಟವಾಗಿ ಮಾತನಾಡಿದ್ದು ವೈದ್ಯರಿಗೂ ಅಚ್ಚರಿ ಮೂಡಿಸಿದೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು ‘ಆಪರೇಶನ್ ಮುಗಿದ ಮೇಲೆ ನಾನು ಮಾತನಾಡಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದೆ. ವೈದ್ಯರೂ ಅದನ್ನೇ ಹೇಳಿದರು. ಆದರೆ ನಾನೀಗ ಸಹಜವಾಗಿ ಮಾತನಾಡುತ್ತಿದ್ದೇನೆ ಎಂದು ಅವರು ಖುಷಿ ವ್ಯಕ್ತಪಡಿಸಿದ್ದಾರೆ. ‘ಆದರೂ ಮೊದಲಿನ ಧ್ವನಿ ನನಗೆ ಇಲ್ಲ ಎಂಬುದು ನನಗೆ ಗೊತ್ತಾಗುತ್ತಿದೆ. ಆದರೆ ಜನರಿಗೆ ನಾನು ಮಾತನಾಡಿದ್ದು ಅರ್ಥವಂತೂ ಆಗುತ್ತಿದೆ’ ಎಂದು ತಿಳಿಸಿದ್ದಾರೆ.