ಬಸ್ತಾರ್: ಛತ್ತೀಸ್ಗಢ್ನ ಬಸ್ತಾರ್ ಜಿಲ್ಲೆಯ ಛೋಟೆ ಅಂಬಾಲಾ ಎಂಬ ಹಳ್ಳಿಯಲ್ಲಿ ಏಪ್ರಿಲ್ 19ರಂದು ಮದುವೆಮನೆಯೊಂದರಲ್ಲಿ ನಡೆದಿದ್ದ ಆ್ಯಸಿಡ್ ದಾಳಿಗೆ (Acid Attack) ಪ್ರಕರಣಕ್ಕೀಗ ಒಂದು ತಿರುವು ಸಿಕ್ಕಿದೆ. ಅಂದು ವಧು-ವರ ಮತ್ತು ಇತರ 10 ಮಂದಿ ಅತಿಥಿಗಳ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದು ಒಬ್ಬಳು 23 ವರ್ಷದ ಹುಡುಗಿ ಮತ್ತು ಆಕೆ ವರನ ಮಾಜಿ ಪ್ರಿಯತಮೆ ಎಂದು ಹೇಳಲಾಗಿದೆ.
ಏಪ್ರಿಲ್ 19ರಂದು ಛೋಟೆ ಅಂಬಾಲಾದಲ್ಲಿ ದಮೃದ್ಧರ್ ಬಾಘೇಲ್ (25) ಮತ್ತು ಸುನೀತಾ ಕಶ್ಯಪ್ (19) ಎಂಬುವವರ ವಿವಾಹ ನಡೆಯುತ್ತಿತ್ತು. ಸಂಜೆ ಹೊತ್ತಿಗೆ ಮಂಟಪದಲ್ಲಿ ಏನೋ ಶಾಸ್ತ್ರ ನಡೆಯುತ್ತಿದ್ದಾಗ ಒಮ್ಮಲೇ ದ್ರವವೊಂದು ಎರಚಲ್ಪಟ್ಟಿತ್ತು. ವಧು-ವರ ಅಷ್ಟೇ ಅಲ್ಲದೆ, ಮಂಟಪದ ಸುತ್ತ ಕುಳಿತಿದ್ದ ಸುಮಾರು 10 ಮಂದಿಯ ಮೇಲೆ ಈ ಆ್ಯಸಿಡ್ ಬಿದ್ದು ಅವರೆಲ್ಲ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಈ ಕೇಸ್ ನ ತನಿಖೆ ಕೈಗೆತ್ತಿಕೊಂಡ ಪೊಲೀಸರು ಹಲವರನ್ನು ವಿಚಾರಣೆ ನಡೆಸಿ, ಆ ಹಳ್ಳಿಯಲ್ಲಿ ಇದ್ದಿದ್ದ ಎಲ್ಲ ಸಿಸಿಟಿವಿ ಕ್ಯಾಮರಾಗಳನ್ನೆಲ್ಲ ಪರಿಶೀಲನೆ ಮಾಡಿದ್ದರು. ಸಿಕ್ಕ ಪುರಾವೆಗಳ ಆಧಾರದ ಮೇಲೆ 23 ವರ್ಷದ ಒಬ್ಬಳು ಯುವತಿಯನ್ನು ಬಂಧಿಸಿದ್ದಾರೆ. ವರ ದಮೃದ್ಧರ್ ತನ್ನೊಂದಿಗೆ ಪ್ರೀತಿಯಲ್ಲಿ ಇದ್ದು, ಇನ್ನೊಬ್ಬಾಕೆಯನ್ನು ಮದುವೆಯಾಗುತ್ತಿದ್ದಾನೆಂಬ ಕೋಪಕ್ಕೆ ಹೀಗೊಂದು ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದಳು. ಪುರುಷನ ವೇಷದಲ್ಲಿ ಮದುವೆಗೆ ಬಂದು ಆ್ಯಸಿಡ್ ದಾಳಿ ನಡೆಸಿದ್ದಳು ಮತ್ತು ಅದನ್ನವಳು ಪೊಲೀಸರ ಎದುರು ಒಪ್ಪಿಕೊಂಡಿದ್ದಾಳೆ. ದಮೃದ್ಧರ್ ನನ್ನೊಂದಿಗೆ ಹಲವು ವರ್ಷಗಳಿಂದ ರಿಲೇಶನ್ ಶಿಪ್ ನಲ್ಲಿದ್ದ. ಮದುವೆಯಾಗುತ್ತೇನೆ ಎಂದು ಪ್ರಾಮಿಸ್ ಮಾಡಿದ್ದ. ಆದರೆ ಈಗ ಏಕಾಏಕಿ ಬೇರೆಯವಳೊಂದಿಗೆ ಮದುವೆ ನಿಗದಿ ಮಾಡಿಕೊಂಡಿದ್ದ. ಆತ ನನಗೆ ಮೋಸ ಮಾಡಿದ. ಹೀಗಾಗಿ ಕೋಪಕ್ಕೆ ಆ್ಯಸಿಡ್ ದಾಳಿ ನಡೆಸಿದೆ ಎಂದು ಹೇಳಿಕೆ ನೀಡಿದ್ದಾಳೆ.
ಇದನ್ನೂ ಓದಿ: ಮದುವೆ ಮನೆಯಲ್ಲಿ ಕರೆಂಟ್ ಹೋದಾಗ ಆ್ಯಸಿಡ್ನಂಥ ದ್ರವ ಎರಚಿದ ಅಪರಿಚಿತ; ವಧು-ವರ ಸೇರಿ 12 ಮಂದಿಗೆ ಸುಟ್ಟಗಾಯ
ದಮೃದ್ಧರ್ ಮದುವೆ ನಿಶ್ಚಯವಾಗಿದ್ದು ಗೊತ್ತಾಗುತ್ತಿದ್ದಂತೆ ನಾನು ಅವನಿಗೆ ಕರೆ ಮಾಡಿದೆ. ಆದರೆ ಆತ ನನ್ನ ಕರೆ ಸ್ವೀಕರಿಸಲಿಲ್ಲ. ಎಷ್ಟು ಬಾರಿ ಕಾಲ್ ಮಾಡಿದರೂ ಮಾತನಾಡುತ್ತಿರಲಿಲ್ಲ. ನನಗೆ ಸಿಟ್ಟು ಬಂದಿತ್ತು. ಟಿವಿಯಲ್ಲಿ ಕ್ರೈಂ ಪ್ಯಾಟ್ರೋಲ್ ರಿಯಾಲಿಟಿ ಶೋ ನೋಡುತ್ತಿದ್ದಾಗ ಹೀಗೆ ಆ್ಯಸಿಡ್ ದಾಳಿಯ ಐಡಿಯಾ ಬಂತು. ನಾನು ಕೆಲಸ ಮಾಡುತ್ತಿದ್ದ ಮೆಣಸಿನಕಾಯಿ ಹೊಲದಲ್ಲಿ ಆ್ಯಸಿಡ್ ಇತ್ತು. ಅದನ್ನೇ ಕದ್ದು ತೆಗೆದುಕೊಂಡು ಹೋಗಿ ಎರಚಿದೆ. ಅಂದು ಕರೆಂಟ್ ಹೋಗಿದ್ದು ನನಗೆ ಇನ್ನಷ್ಟು ಅನುಕೂಲವಾಯಿತು ಎಂದು ಯುವತಿ ಪೊಲೀಸರ ಎದುರು ಹೇಳಿಕೆ ನೀಡಿದ್ದಾಗಿ ಬಸ್ತಾರ್ ಹೆಚ್ಚುವರಿ ಎಸ್ಪಿ ನಿವೇದಿತಾ ಪಾಲ್ ತಿಳಿಸಿದ್ದಾರೆ. ಅಂದಹಾಗೇ, ಮೆಣಸಿನ ಕಾಯಿ ತೋಟದಲ್ಲಿ ನೀರಾವರಿಗಾಗಿ ಹಾಕುವ ಡ್ರಿಪ್ ಪೈಪ್ಗಳನ್ನೆಲ್ಲ ಸ್ವಚ್ಛಗೊಳಿಸಲು ಆ್ಯಸಿಡ್ ಬಳಕೆ ಮಾಡುತ್ತಾರೆ.