ಹೈದರಾಬಾದ್: ಅಹ್ಮದಾಬಾದ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಪ್ರೊಫೆಸರ್ ಆಗಿರುವ ದೇವಸ್ಮಿತಾ ಚಕ್ರವರ್ತಿ ಅವರು ಮಾಡಿದ ಒಂದು ಟ್ವೀಟ್ ಚರ್ಚೆಗೆ ಗ್ರಾಸವಾಗಿದೆ. ಅವರ ಟ್ವೀಟ್ ಸಾರಾಂಶ ಹೀಗಿದೆ..‘ಆಂಧ್ರಪ್ರದೇಶದ ವಿಜಯವಾಡದಿಂದ ಹೈದರಾಬಾದ್ಗೆ ಹೊರಟಿದ್ದ ಇಂಡಿಗೊ 6E 7297 ವಿಮಾನದ ಎಕ್ಸಿಟ್ ರೋ ದಲ್ಲಿರುವ ಎಕ್ಸ್ಎಲ್ ಸೀಟ್ (ತುರ್ತು ನಿರ್ಗಮನ ಬಾಗಿಲಲ್ಲಿ ಸೀಟ್ಗಳು) ಮಹಿಳೆಯೊಬ್ಬಳು ಕುಳಿತಿದ್ದರು. ಆದರೆ ಅವರಿಗೆ ಇಂಗ್ಲಿಷ್/ಹಿಂದಿ ಬರುತ್ತಿರಲಿಲ್ಲ. ತೆಲುಗು ಭಾಷೆ ಮಾತ್ರ ಅರ್ಥವಾಗುತ್ತಿತ್ತು. ಹಾಗಾಗಿ ಅವರನ್ನು ಆ ಎಕ್ಸ್ಎಲ್ ಸೀಟಿನಿಂದ ಎಬ್ಬಿಸಿ, ಅದರ ಹಿಂದಿನ 3ಸಿ ಸೀಟ್ಗೆ ಕಳಿಸಲಾಯಿತು. ಇದು ಭಾಷಾ ತಾರತಮ್ಯ ಅಲ್ಲದೆ ಮತ್ತೇನು? ಇಂಗ್ಲಿಷ್ ಬರುವುದಿಲ್ಲ ಎಂಬ ಮಾತ್ರಕ್ಕೆ ಅವರು ಪ್ಲೇನ್ನಲ್ಲಿ ಹಿಂದೆ ಕೂರಬೇಕಾ?..ಭದ್ರತೆ ಕಾರಣದಿಂದ ಮಹಿಳೆಯನ್ನು ಅಲ್ಲಿಂದ ಎಬ್ಬಿಸಿದ್ದೇವೆ ಎಂದು ಫ್ಲೈಟ್ ಅಟೆಂಡೆಂಟ್ ಹೇಳುತ್ತಾರೆ. ಇದನ್ನು ನಂಬಬೇಕಾ?
ಈ ಟ್ವೀಟ್ ಅನೇಕರ ಗಮನಸೆಳೆದಿದೆ. ಭಾಷಾ ತಾರತಮ್ಯವೋ ಅಥವಾ ನಿಜಕ್ಕೂ ಸುರಕ್ಷತೆ ದೃಷ್ಟಿಯಿಂದ ಮಹಿಳೆಯನ್ನು ಹಿಂಬದಿ ಸೀಟ್ಗೆ ಕಳಿಸಲಾಯಿತೋ ಎಂಬುದನ್ನು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಈ ಮಧ್ಯೆ ದೇವಸ್ಮಿತಾ ಚಕ್ರವರ್ತಿ ಟ್ವೀಟ್ಗೆ ತೆಲಂಗಾಣ ಸಚಿವ ಕೆ.ಟಿ. ರಾಮರಾವ್ ಪ್ರತಿಕ್ರಿಯೆ ನೀಡಿ, ‘ಇದು ಭಾಷಾ ತಾರಾತಮ್ಯವೇ ಹೌದು’ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.
“ಪ್ರಾದೇಶಿಕ ಭಾಷೆಗಳಿಗೂ ಗೌರವ ಕೊಡುವುದನ್ನು ಕಲಿಯಿರಿ, ಇಂಗ್ಲಿಷ್/ಹಿಂದಿ ಬರದೆ ಇರುವವರನ್ನೂ ಗೌರವದಿಂದಲೇ ನಡೆಸಿಕೊಳ್ಳಿ ಎಂದು ನಾನು ಇಂಡಿಗೊ ಮ್ಯಾನೇಜ್ಮೆಂಟ್ಗೆ ಮನವಿ ಮಾಡುತ್ತೇನೆ. ಇನ್ನು ಸಂವಹನ ಕಷ್ಟವಾಗುತ್ತದೆ ಎಂಬ ಕಾರಣಕ್ಕೇ ಹೀಗೆ ಮಾಡಿದ್ದೀರಿ ಎಂದಾದರೆ, ಪ್ರಾದೇಶಿಕ ಮಾರ್ಗಗಳಲ್ಲಿ ಸಂಚರಿಸುವ ವಿಮಾನಗಳಲ್ಲಿ ಆಯಾ ರಾಜ್ಯಗಳ, ಪ್ರದೇಶಗಳ ಭಾಷೆ (ಉದಾಹರಣೆಗೆ ತೆಲುಗು, ತಮಿಳು, ಕನ್ನಡ) ಗೊತ್ತಿರುವವರನ್ನೇ ನೇಮಕ ಮಾಡಿಕೊಳ್ಳಿ. ಆಗ ಇಂಥ ಸಮಸ್ಯೆಗಳು ಬರುವುದಿಲ್ಲ’ ಎಂದು ಕೆಟಿಆರ್ ಹೇಳಿದ್ದಾರೆ.
ವಿಮಾನಗಳಲ್ಲಿ ಉಳಿದ ಸೀಟ್ಗಳಿಗೆ ಹೋಲಿಸಿದರೆ ತುರ್ತು ನಿರ್ಗಮನ ಬಾಗಿಲು (ಎಮರ್ಜನ್ಸಿ ಎಕ್ಸಿಟ್) ಇರುವ ಸಾಲಿನಲ್ಲಿ ಸೀಟ್ಗಳು ಚೂರು ಆರಾಮದಾಯಕ ಇರುತ್ತವೆ. ಬೇರೆ ಸೀಟ್ಗಳ ಕೆಳಗೆ ಕಾಲು ಚಾಚಲು ಅಷ್ಟೊಂದು ಅವಕಾಶ ಇರುವುದಿಲ್ಲ. ಆದರೆ ಈ ಎಕ್ಸ್ಎಲ್ ಸೀಟ್ಗಳಲ್ಲಿ ಕಾಲು ಚಾಚಲು ಸ್ಥಳಾವಕಾಶ ಇದ್ದು, ಆರಾಮಾಗಿ ಕುಳಿತುಕೊಳ್ಳಬಹುದು. ಹೀಗಾಗಿ ಇವು ಆರಾಮದಾಯಕ ಸೀಟ್ಗಳು ಎಂದೇ ಪರಿಗಣಿಸಲ್ಪಡುತ್ತವೆ.
ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ‘ಇವು ಎಷ್ಟು ಆರಾಮದಾಯಕ ಸೀಟ್ಗಳೋ ಹಾಗೇ ನಿರ್ಣಾಯಕ ಸೀಟ್ಗಳು. ಪಕ್ಕದಲ್ಲೇ ತುರ್ತು ನಿರ್ಗಮನ ಬಾಗಿಲು ಇರುವುದರಿಂದ ಅಲರ್ಟ್ ಆಗಿ ಇರಬೇಕು. ಯಾಕೆಂದರೆ, ವಿಮಾನಕ್ಕೆ ಏನಾದರೂ ಅಪಾಯ ಎದುರಾಗಿ ಪ್ರಯಾಣಿಕರು ಎಮರ್ಜನ್ಸಿ ಎಕ್ಸಿಟ್ ಆಗಬೇಕಾದ ಪರಿಸ್ಥಿತಿ ಬಂದೊದಗಿದರೆ ವಿಮಾನದ ಪೈಲಟ್ಗಳು ಸಂವಹನ ನಡೆಸುವುದು ಇದೇ ಎಕ್ಸ್ಎಲ್ ಸೀಟಿನಲ್ಲಿ ಕುಳಿತವರ ಜತೆ. ಅಂದರೆ, ಏನು ಮಾಡಬೇಕು? ತುರ್ತು ನಿರ್ಗಮನಕ್ಕೆ ಹೇಗೆ ಸಹಕರಿಸಬೇಕು ಎಂಬಿತ್ಯಾದಿ ಸೂಚನೆಗಳನ್ನು ಇವರಿಗೇ ನೀಡಲಾಗುತ್ತದೆ. ತುರ್ತು ನಿರ್ಗಮನ ಸಾಲಿನಲ್ಲಿರುವ ಸೀಟ್ಗಳಿಗೂ..ವಿಮಾನದ ಪೈಲಟ್ಗಳಿರುವ ಕಾಕ್ ಪೀಟ್ಗಳೂ ಸಂಪರ್ಕ ಕೊಂಡಿ ಇರುತ್ತದೆ. ಹೀಗಾಗಿ ಅಲ್ಲಿ ಕುಳಿತಿರುವ ಪ್ರಯಾಣಿಕರನ್ನು ಬದಲಿಸುವ ಅಧಿಕಾರ ವಿಮಾನ ಸಿಬ್ಬಂದಿಗೆ ಇರುತ್ತದೆ. ಅಲ್ಲಿ ಕುಳಿತವರಿಗೆ ತುರ್ತು ಸಂದರ್ಭ ನಿಭಾಯಿಸುವ ಸಾಮರ್ಥ್ಯ ಇಲ್ಲ ಎಂದೆನಿಸಿದರೆ ಅವರನ್ನು ಬೇರೆಡೆಗೆ ಕಳಿಸಿ, ಮತ್ತೊಬ್ಬರನ್ನು ತಂದು ಕೂರಿಸಿದ್ದು ಈ ಹಿಂದೆಯೂ ಹಲವು ಬಾರಿ ನಡೆದಿದೆ’ -ದೇವಸ್ಮಿತಾ ಚಕ್ರವರ್ತಿ ಮಾಡಿದ ಟ್ವೀಟ್ಗೆ ಪ್ರತಿಕ್ರಿಯೆಯಾಗಿ ಪತ್ರಕರ್ತೆಯೊಬ್ಬರು ಹೀಗೆ ವಿವರಿಸಿದ್ದಾರೆ.
ಆದರೆ ಇನ್ನೊಂದಷ್ಟು ಮಂದಿ ‘ಇದು ನಿಜಕ್ಕೂ ಭಾಷೆ ವಿಚಾರಕ್ಕೆ ಮಾಡಿದ ತಾರತಮ್ಯವೇ ಆಗಿದೆ. ಆಕೆಗೆ ಹಿಂದಿ/ಇಂಗ್ಲಿಷ್ ಬರೋದಿಲ್ಲ ಎಂಬ ಕಾರಣಕ್ಕೆ ಆರಾಮದಾಯಕ ಸೀಟ್ನಿಂದ ಎಬ್ಬಿಸಿ, ಹಿಂದೆ ಕಳಿಸಿದ್ದು ಸರಿಯಲ್ಲ’ ಎಂದೇ ವಾದಿಸಿದ್ದಾರೆ. ಹಿಂದಿ ಭಾಷೆ ಹೇರಿಕೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿರುವ ಹೊತ್ತಲ್ಲಿ ಇದೀಗ ಇಂಡಿಗೋ ವಿವಾದ ಎದ್ದಿದೆ.
ಇದನ್ನೂ ಓದಿ: Vistara-Air India | ವಿಸ್ತಾರ-ಏರ್ ಇಂಡಿಯಾ ವಿಲೀನ? ಶುರುವಾಗಿದೆ ಮಾತುಕತೆ