ನವ ದೆಹಲಿ: ಹರಿಯಾಣದಲ್ಲಿ ಕ್ರೀಡಾ ಸಚಿವರಾಗಿದ್ದ ಸಂದೀಪ್ ಸಿಂಗ್ (Haryana minister Sandeep Singh) ವಿರುದ್ಧ ಕಳೆದ ನಾಲ್ಕು ತಿಂಗಳ ಹಿಂದೆ ಜ್ಯೂನಿಯರ್ ಅಥ್ಲೆಟಿಕ್ಸ್ ಮಹಿಳಾ ಕೋಚ್ (ಮಹಿಳಾ ತರಬೇತಿದಾರರು)ವೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಹೀಗೆ ಲೈಂಗಿಕ ಕಿರುಕುಳದ ಆರೋಪ ಬರುತ್ತಿದ್ದಂತೆ ಸಂದೀಪ್ ಸಿಂಗ್ ಅವರು ತಮ್ಮ ಸಚಿವ ಸ್ಥಾನವನ್ನು ತೊರೆದು, ಕ್ರೀಡಾ ಇಲಾಖೆಯನ್ನು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸುಪರ್ದಿಗೆ ಕೊಟ್ಟಿದ್ದಾರೆ. ‘ನಾನು ಕ್ರೀಡಾ ಸಚಿವರ ಚಂಡಿಗಢ್ನಲ್ಲಿರುವ ನಿವಾಸಕ್ಕೆ ಕಾರ್ಯ ನಿಮಿತ್ತ ಹೋಗಿದ್ದಾಗ ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂಬುದು ಆ ಮಹಿಳಾ ಕೋಚ್ ಆರೋಪವಾಗಿತ್ತು. ದೂರು ದಾಖಲಿಸಿಕೊಂಡ ಚಂಡಿಗಢ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇಷ್ಟೆಲ್ಲದರ ಮಧ್ಯೆ ಈ ಕೇಸ್ನಲ್ಲಿ ಇನ್ನೊಂದು ಬೆಳವಣಿಗೆಯಾಗಿದೆ. ಹರಿಯಾಣ ಮಾಜಿ ಕ್ರೀಡಾ ಸಚಿವ ಸಂದೀಪ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ಮಹಿಳಾ ಕೋಚ್ ಈಗ ಮತ್ತೊಂದು ದೂರು ಕೊಟ್ಟಿದ್ದಾರೆ. ನನ್ನ ಸ್ಕೂಟರ್ಗೆ ಕಾರ್ವೊಂದು ಡಿಕ್ಕಿ ಹೊಡೆಯಿತು. ನಾನು ನನ್ನ ಫ್ರೆಂಡ್ ಜತೆ ಸ್ಕೂಟರ್ನಲ್ಲಿ ಹೋಗುತ್ತಿದ್ದೆ. ಆಗ ಒಂದು ಕಪ್ಪು ಬಣ್ಣದ ಫೋರ್ಡ್ ಎಂಡೀವರ್ ಕಾರು ಬಂದು ಡಿಕ್ಕಿ ಹೊಡೆಯಿತು. ಇದು ಉದ್ದೇಶಪೂರ್ವಕವಾಗಿಯೇ ನಡೆಸಲಾದ ಅಪಘಾತ. ನಾನು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದೇನೆ’ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸರು ಮತ್ತೆ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಇದನ್ನೂ ಓದಿ: 1 ಕೋಟಿ ರೂ. ಆಮಿಷ ಒಡ್ಡುತ್ತಿದ್ದಾರೆ, ದೇಶ ಬಿಡುವಂತೆ ಒತ್ತಾಯ ಮಾಡ್ತಿದ್ದಾರೆ; ಹರಿಯಾಣ ಮಹಿಳಾ ಕೋಚ್ರಿಂದ ಮತ್ತೊಂದು ಆರೋಪ
ಭಾರತೀಯ ಹಾಕಿ ತಂಡದ ಮಾಜಿ ನಾಯಕನೂ ಆಗಿದ್ದ ಸಂದೀಪ್ ಸಿಂಗ್ 2019ರಲ್ಲಿ ಬಿಜೆಪಿ ಸೇರಿ, ಪೆಹೋವಾ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಸಚಿವರಾಗಿದ್ದರು. ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ಮಹಿಳೆ ‘ ನಾನು ಮೊದಲು ಸಚಿವರನ್ನು ನೋಡಿದ್ದು ಜಿಮ್ನಲ್ಲಿ. ಬಳಿಕ ಸಂದೀಪ್ ಸಿಂಗ್ ಅವರು ಇನ್ಸ್ಟಾಗ್ರಾಂ ಮೂಲಕ ನನ್ನನ್ನು ಸಂಪರ್ಕಿಸಿದರು. ‘ನಿಮ್ಮ ರಾಷ್ಟ್ರೀಯ ಆಟಗಳ ಪ್ರಮಾಣಪತ್ರದ ವಿಷಯವಾಗಿ ಸ್ಪಷ್ಟತೆಯಿಲ್ಲ. ಹೀಗಾಗಿ ಒಮ್ಮೆ ಬಂದು ನನ್ನನ್ನು ಭೇಟಿಯಾಗಿ’ ಎಂದು ಮೆಸೇಜ್ ಮಾಡಿದರು. ನಾನು ಕೆಲವು ದಾಖಲೆಗಳೊಂದಿಗೆ ಚಂಡಿಗಢ್ನಲ್ಲಿರುವ ಅವರ ಅಧಿಕೃತ ನಿವಾಸಕ್ಕೆ ತೆರಳಿದೆ. ಆ ಮನೆಯ ಮೂಲೆಯೊಂದರಲ್ಲಿ ಇದ್ದ ಕ್ಯಾಬಿನ್ಗೆ ಸಂದೀಪ್ ಸಿಂಗ್ ನನ್ನನ್ನು ಕರೆದೊಯ್ದರು. ನನ್ನ ಕೈಯಲ್ಲಿದ್ದ ದಾಖಲೆಗಳನ್ನೆಲ್ಲ ಕಿತ್ತುಕೊಂಡು ಪಕ್ಕದ ಟೇಬಲ್ ಮೇಲಿಟ್ಟು, ಅವರ ಕೈಯನ್ನು ನನ್ನ ಪಾದಗಳ ಮೇಲಿಟ್ಟರು. ‘ನಿನ್ನನ್ನು ಮೊದಲ ಸಲ ನೋಡಿದಾಗಲೇ ತುಂಬ ಇಷ್ಟವಾಯ್ತು. ನೀನು ನನ್ನನ್ನು ಸಂತೋಷವಾಗಿಟ್ಟರೆ, ನಾನೂ ನಿನ್ನನ್ನು ತುಂಬ ಸಂತೋಷವಾಗಿ ಇಡುತ್ತೇನೆ’ ಎಂದು ಹೇಳಿದರು. ನನ್ನ ಕಾಲಿನ ಮೇಲಿದ್ದ ಅವರ ಕೈಯನ್ನು ನಾನು ಅಲ್ಲಿಂದ ಕಿತ್ತೆಸೆದೆ. ಆಗ ಅವರು ನನ್ನ ಟಿ ಶರ್ಟ್ ಹರಿದುಹಾಕಿದರು. ನಾನು ಅಳುತ್ತಿದ್ದೆ ಮತ್ತು ಸಹಾಯಕ್ಕಾಗಿ ಯಾಚಿಸಿದೆ. ಅಲ್ಲಿ ಸಂದೀಪ್ ಸಿಂಗ್ ಅವರ ಸಹಾಯಕರು, ಸಿಬ್ಬಂದಿ ವರ್ಗ ಎಲ್ಲ ಇದ್ದರು. ಆದರೆ ಒಬ್ಬರೂ ನನ್ನ ಸಹಾಯಕ್ಕೆ ಬರಲಿಲ್ಲ’ ಎಂದು ಮಹಿಳಾ ಕೋಚ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದರು.