ನವ ದೆಹಲಿ: ಅದೇನೋ, ಒಂದರ ಬಳಿಕ ಮತ್ತೊಂದು ಎಂಬಂತೆ ವಿಮಾನದಲ್ಲಿ ಪ್ರಯಾಣಿಕರ ಅಶಿಸ್ತಿನ ನಡುವಳಿಕೆಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ ಏರ್ ಇಂಡಿಯಾ ವಿಮಾನದಲ್ಲಿ ಶಂಕರ್ ಮಿಶ್ರಾ ಎಂಬಾತ, ಕುಡಿದ ಅಮಲಿನಲ್ಲಿ ತನ್ನ ಸಹಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಸದ್ಯ ಶಂಕರ್ ಮಿಶ್ರಾ ಪೊಲೀಸ್ ಕಸ್ಟಡಿಯಲ್ಲೇ ಇದ್ದಾನೆ. ಈಗ ವಿಸ್ತಾರ ಏರ್ಲೈನ್ಸ್ನ ವಿಮಾನವೊಂದರಲ್ಲಿ ಮಹಿಳೆಯೊಬ್ಬರು ಕುಡಿದು, ಅತಿರೇಕದ ವರ್ತನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಅಬುಧಾಬಿಯಿಂದ ಸೋಮವಾರ ತಡರಾತ್ರಿ 2.30ರ ಹೊತ್ತಿಗೆ ಟೇಕ್ ಆಫ್ ಆಗಿ ಮುಂಬಯಿಗೆ ಬರುತ್ತಿದ್ದ ವಿಸ್ತಾರ ಏರ್ಲೈನ್ಸ್ನ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ 45 ವರ್ಷದ ಇಟಾಲಿಯನ್ ಮಹಿಳೆಯೊಬ್ಬಳು ಕಂಠಪೂರ್ತಿ ಕುಡಿದು ಹೇಗೇಗೋ ಆಡುತ್ತಿದ್ದಳು. ಆಕೆಯನ್ನು ನಿಯಂತ್ರಿಸಲು ಬಂದ ವಿಮಾನ ಸಿಬ್ಬಂದಿಗೆ ಗುದ್ದಿದ್ದಲ್ಲದೆ, ಮತ್ತೊಬ್ಬರ ಮೇಲೆ ಉಗುಳಿದ್ದಾಳೆ. ಅಷ್ಟೇ ಅಲ್ಲ, ತನ್ನ ಬಟ್ಟೆಯನ್ನು ಕಳಚಿ, ಅರೆನಗ್ನಾವಸ್ಥೆಯಲ್ಲಿ ಇಡೀ ವಿಮಾನದ ತುಂಬ ಓಡಾಡಿದ್ದಾಳೆ ಎಂದು ವರದಿಯಾಗಿದೆ
ಸೋಮವಾರ ಘಟನೆ ನಡೆದಿದ್ದು, ಮಹಿಳೆಯ ಹೆಸರು ಪಾವೊಲಾ ಪೆರುಸಿಯೊ ಎಂದು ಗುರುತಿಸಲಾಗಿದೆ. ಈಕೆ ವಿಮಾನದ ಎಕಾನಮಿ ಕ್ಲಾಸ್ನಲ್ಲಿ ಕುಳಿತಿದ್ದಳು. ಆದರೆ ಮಾರ್ಗ ಮಧ್ಯೆ ಏಕಾಏಕಿ ಬ್ಯುಸಿನೆಸ್ ಕ್ಲಾಸ್ಗೆ ಹೋಗಿ ಕುಳಿತಿದ್ದಾಳೆ. ಅದನ್ನು ನೋಡಿದ ವಿಮಾನ ಸಿಬ್ಬಂದಿ ಹೋಗಿ ಗಲಾಟೆ ತೆಗೆದಳು. ಅಷ್ಟೇ ಅಲ್ಲ, ಅವರ ಮೇಲೆ ಹಲ್ಲೆಯನ್ನೂ ಮಾಡಿದ್ದಾಳೆ. ಮಹಿಳೆ ಬಗ್ಗೆ ವಿಮಾನ ಸಿಬ್ಬಂದಿ ಪೊಲೀಸರಿಗೆ ದೂರು ಕೊಟ್ಟ ಹಿನ್ನೆಲೆಯಲ್ಲಿ ಮುಂಬಯಿಯಲ್ಲಿ ಆಕೆ ಇಳಿಯುತ್ತಿದ್ದಂತೆ ಸಾಹರ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇಷ್ಟೆಲ್ಲದರ ಮಧ್ಯೆ, ಮಹಿಳೆಯದೇನೂ ತಪ್ಪಿಲ್ಲ. ವಿಮಾನದಲ್ಲಿ ಸೇವೆ ಅತ್ಯಂತ ಕೆಟ್ಟದಾಗಿತ್ತು ಎಂದು ಮಹಿಳೆ ವಿಸ್ತಾರ ಏರ್ಲೈನ್ಸ್ ವಿರುದ್ಧ ದೂರು ಕೊಡಲು ನಿರ್ಧರಿಸಿದ್ದಾಳೆ ಎಂದು ಆಕೆಯ ಪರ ವಕೀಲರು ತಿಳಿಸಿದ್ದಾರೆ.
ಇದನ್ನೂ ಓದಿ: Shankar Mishra Case | ಮಹಿಳೆ ಮೇಲೆ ಮೂತ್ರ ವಿಸರ್ಜನೆ, ಶಂಕರ್ ಮಿಶ್ರಾ 4 ತಿಂಗಳು ವಿಮಾನ ಸಂಚಾರ ನಿಷೇಧ