ನವ ದೆಹಲಿ: ಮಹಿಳೆಯರು ಕೇವಲ ಮನೆಕೆಲಸ ಮಾಡುತ್ತ, ಗೃಹಿಣಿಯಾರಗಷ್ಟೇ ಉಳಿಯಲು ಸೀಮಿತರಲ್ಲ. ಅವರು ಈ ರಾಷ್ಟ್ರದ ನಿರ್ಮಾತೃರೆಂದು ಪ್ರಧಾನಿ ನರೇಂದ್ರ ಮೋದಿ ಬಲವಾಗಿ ನಂಬುತ್ತಾರೆ ಎಂದು ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿಯಾಗಿರುವ ರುಚಿರಾ ಕಾಂಬೋಜ್ ಹೇಳಿದ್ದಾರೆ. ಇಂದು ವಿಡಿಯೊ ಮೆಸೇಜ್ ನೀಡಿದ ಅವರು ‘ ಪ್ರಸ್ತುತ ನವಭಾರತದಲ್ಲಿ ಮಹಿಳೆಯರು/ಹುಡುಗಿಯರ ಹಿತಕ್ಕಾಗಿ ಆಧುನಿಕ ತಂತ್ರಜ್ಞಾನಗಳ ಬಳಕೆಯನ್ನು ಯಥೇಚ್ಛವಾಗಿ ಮಾಡಲಾಗುತ್ತಿದೆ. ಮಹಿಳೆಯರನ್ನು ಮನೆ ನಿಭಾಯಿಸುವವರನ್ನಾಗಿಯಷ್ಟೇ ಸೀಮಿತವಾಗಿ ನೋಡದೆ, ಅವರನ್ನು ರಾಷ್ಟ್ರ ನಿರ್ಮಾಣ ಮಾಡುವವರೂ ಎಂದು ಪರಿಗಣಿಸುವಂತೆ ಪ್ರಧಾನಿ ಮೋದಿಯವರು ಸ್ಪಷ್ಟವಾಗಿ ಹೇಳಿದ್ದಾರೆ’ ಎಂದು ರುಚಿರಾ ತಿಳಿಸಿದ್ದಾರೆ.
ಇಂದಿನಿಂದ ಪ್ರಾರಂಭವಾಗಿ ಮುಂದಿನ 10 ದಿನಗಳ ಕಾಲದವರೆಗೆ, ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆಯಲಿರುವ ಮಹಿಳಾ ಸ್ಥಿತಿಗತಿ ಮೇಲಿನ ಯುನ್ ಆಯೋಗದ 67ನೇ ಅಧಿವೇಶನದ ಥೀಮ್ ಜತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಹಿಳೆಯರ ಬಗ್ಗೆ ಇರುವ ದೃಷ್ಟಿಕೋನ ಹೊಂದಾಣಿಕೆಯಾಗುತ್ತಿದೆ. ಭಾರತ ಮಹಿಳಾ ಮಾದರಿ ಅಭಿವೃದ್ಧಿಯಿಂದ, ಮಹಿಳಾ ನೇತೃತ್ವದ ಅಭಿವೃದ್ಧಿಯೆಡೆಗೆ ಪಥ ಬದಲಿಸಿದೆ’ ಎಂದು ರುಚಿರಾ ಕಾಂಬೋಜ್ ತಮ್ಮ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್; ಈ ಹುದ್ದೆಗೇರಿದ ದೇಶದ ಪ್ರಥಮ ಮಹಿಳೆ
ನಾವು ಭವಿಷ್ಯಕ್ಕೆ ಸಿದ್ಧರಾಗಬೇಕು ಎಂದರೆ, ನಿರ್ಧಾರ ಕೈಗೊಳ್ಳುವ ಅಧಿಕಾರ ಇರುವ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರಿಗೆ ಪ್ರಾಶಸ್ತ್ರ್ಯ ಸಿಗಬೇಕು. ಪೂರ್ಣವಾಗಿ ಲಿಂಗ ಸಮಾನತೆಯನ್ನು ನಾವು ಸೃಷ್ಟಿಸಬೇಕು. ಯಾವುದೇ ಹಕ್ಕಿ, ಒಂದೇ ರೆಕ್ಕೆಯಲ್ಲಿ ಹಾರಲು ಸಾಧ್ಯವಿಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಅದರಂತೆ ಈ ದೇಶದ ಅಭಿವೃದ್ಧಿ ಪುರುಷರಿಂದ ಮಾತ್ರ ಸಾಧ್ಯವಿಲ್ಲ, ಮಹಿಳೆಯರೂ ಬೇಕು’ ಎಂದು ರುಚಿರಾ ಅವರು ಅಭಿಪ್ರಾಯಪಟ್ಟಿದ್ದಾರೆ.