Site icon Vistara News

ವಿಶ್ವ ಸಂಸ್ಥೆ ಶಾಂತಿಪಾಲನಾ ಪಡೆ ಸೇರಲು ಸೂಡಾನ್​​ ತಲುಪಿದ ಭಾರತೀಯ ಮಹಿಳಾ ತುಕಡಿ; ವಿಡಿಯೊ ಶೇರ್​ ಮಾಡಿದ UNISFA

Women platoon land in Abyei UN Mission

ವಿಶ್ವಸಂಸ್ಥೆ (ಯುಎನ್​​) ಶಾಂತಿಪಾಲನಾ ಪಡೆಗೆ ಸೇರ್ಪಡೆಗೊಳ್ಳಲು ಭಾರತದಿಂದ ಏಕೈಕ ಅತಿದೊಡ್ಡ ಮಹಿಳಾ ತುಕಡಿಯೊಂದು ದಕ್ಷಿಣ ಸೂಡಾನ್​​ನ ಅಬೈಗೆ ತಲುಪಿದೆ. ಅಲ್ಲಿ ಈ ಭಾರತೀಯ ಮಹಿಳಾ ಶಾಂತಿಪಾಲಕ ತಂಡವನ್ನು ಯುಎನ್​​ ಆಯೋಗ ಅತ್ಯಂತ ಆದರದಿಂದ ಸ್ವಾಗತಿಸಿದೆ. ‘ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆ ಕಾಪಾಡುವಲ್ಲಿ ಭಾರತೀಯ ಬೆಟಾಲಿಯನ್​​​ಗಳ ಪಾತ್ರ ಅತ್ಯಂತ ಮಹತ್ವದ್ದು’ ಎಂದು ಯುಎನ್​ ಹೇಳಿದೆ.

ಟ್ವೀಟ್ ಮಾಡಿರುವ ಯುಎನ್​ ಮಿಶನ್,​ ‘ಅಬೈಗಾಗಿ ವಿಶ್ವಸಂಸ್ಥೆ ರಚಿಸಿರುವ ಆಂತರಿಕ ಭದ್ರತಾ ಪಡೆ UNISFA (United Nations Interim Security Force for Abyei)ಗೆ ಇತ್ತೀಚೆಗಷ್ಟೇ ಸೇರ್ಪಡೆಯಾಗಿರುವ ಭಾರತೀಯ ಮಹಿಳಾ ಸೈನಿಕರ ತುಕಡಿ ಈಗಾಗಲೇ ಅಬೈಗೆ ಬಂದು ಇಳಿದಿದೆ. ಸದ್ಯ ಅಬೈ ವಲಯದ ಕೇಂದ್ರ ಭಾಗದಲ್ಲಿರುವ ರುಮ್ಜಾಕ್​ ಮತ್ತು ಡೋಕುರಾದಲ್ಲಿ ಅವರನ್ನು ನಿಯೋಜಿಸಲಾಗಿದೆ’ ಎಂದು ತಿಳಿಸಿದೆ.

ಇತ್ತೀಚಿನ ವರ್ಷಗಳಲ್ಲೇ ಭಾರತದಿಂದ ಆಗಮಿಸಿರುವ ಏಕೈಕ, ಅತಿದೊಡ್ಡ ಮಹಿಳಾ ಶಾಂತಿಪಾಲಕರ ತಂಡ ಇದು. ಅವರನ್ನು ಸ್ವಾಗತಿಸಲು ನಮಗೂ ತುಂಬ ಖುಷಿಯಾಯಿತು. ವಿಶ್ವಸಂಸ್ಥೆಯ ಆದೇಶವನ್ನು ಪಾಲಿಸುವಲ್ಲಿ ಭಾರತ ಎಷ್ಟು ಬದ್ಧವಾಗಿದೆ ಎಂಬುದನ್ನು ಇದು ತೋರಿಸುತ್ತಿದೆ ಎಂದೂ ಯುಎನ್​ ಮಿಶನ್​ ಹೇಳಿದೆ.

ಸದಾ ಆಂತರಿಕ ಗಲಭೆಯಿಂದ ಹಿಂಸಾಚಾರ ಭುಗಿಲೇಳುವ ದಕ್ಷಿಣ ಸೂಡಾನ್​​ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ 2011ರಿಂದಲೂ ಅಸ್ವಿತ್ವದಲ್ಲಿದೆ. ಅಲ್ಲಿ ಶಾಂತಿ ಸ್ಥಾಪನೆಯೇ ಈ ಪಡೆಯ ಪ್ರಮುಖ ಉದ್ದೇಶ. ಭಾರತೀಯ ಸೇನೆ ಲೆಫ್ಟಿನೆಂಟ್​ ಜನರಲ್​ ಮೋಹನ್​ ಸುಬ್ರಹ್ಮಣ್ಯ ಅವರನ್ನು ಈ ಶಾಂತಿ ಪಾಲನಾ ಪಡೆಯ ಕಮಾಂಡರ್​ ಆಗಿ, 2022ರ ಜುಲೈನಲ್ಲಿ ನೇಮಕ ಮಾಡಲಾಗಿತ್ತು. ಈಗೀಗ ಭಾರತದಿಂದ ಹಲವು ಸೈನಿಕರನ್ನು ಕಳಿಸಲಾಗುತ್ತಿದೆ.

ಇದನ್ನೂ ಓದಿ: Anti Naxal Operation | ಸರ್ಜಿಕಲ್​ ಸ್ಟ್ರೈಕ್​​ನಲ್ಲಿ ಸತ್ತಿದ್ದಾನಾ ನಕ್ಸಲ್​ ನಾಯಕ ಹಿದ್ಮಾ? ಮಾವೋವಾದಿ ವಕ್ತಾರೆ ಹೇಳಿದ್ದೇನು?

Exit mobile version