ತ್ರಿಶೂರ್: ಪುರುಷನೊಬ್ಬನನ್ನು ಮಧ್ಯದಾರಿಯಲ್ಲಿ ಥಳಿಸಿದ 11 ಮಹಿಳೆಯರನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಕಳಿಸಿದೆ. ಈ ವ್ಯಕ್ತಿ ತನ್ನ ಪತ್ನಿ, ಮಗ ಮತ್ತು ಇಬ್ಬರು ಸಂಬಂಧಿಕರೊಂದಿಗೆ ಕಾರಿನಲ್ಲಿ ಹೋಗುತ್ತಿದ್ದ. 11 ಮಂದಿ ಮಹಿಳೆಯರ ಗುಂಪು ಕಾರನ್ನು ಅಡ್ಡಗಟ್ಟಿ ಆತನನ್ನು ಮತ್ತು ಪತ್ನಿ, ಮಗ, ಸಂಬಂಧಿಕರನ್ನೆಲ್ಲ ಕಾರಿನಿಂದ ಕೆಳಗೆ ಇಳಿದು, ಮನಬಂದಂತೆ ಥಳಿಸಿತ್ತು. ಇದೀಗ ಅವರೆಲ್ಲರೂ ಕಾರಾಗೃಹ ಪಾಲಾಗಿದ್ದಾರೆ.
ಇಂಥದ್ದೊಂದು ಘಟನೆ ವರದಿಯಾಗಿದ್ದು ಕೇರಳದ ತ್ರಿಶೂರ್ನಿಂದ. ಇಲ್ಲಿನ ಎಂಪರರ್ ಎಮ್ಯಾನ್ಯುಯೆಲ್ ರಿಟ್ರೀಟ್ ಸೆಂಟರ್ ಬಳಿ ಮಹಿಳೆಯರು ಅಟ್ಯಾಕ್ ಮಾಡಿದ್ದರು. ಚಪ್ಪಲಿಯಲ್ಲೂ ಹೊಡೆದಿದ್ದರು. ಶಾಜಿ, ಆತನ ಪತ್ನಿ ಆಶ್ಲಿನ್, ಮಗ ಸಜನ್ ಮತ್ತು ಸಂಬಂಧಿಗಳಾದ ಎಡ್ವಿನ್ ಮತ್ತು ಅನ್ವಿನ್ ಎಂಬುವರು ಥಳಿತಕ್ಕೆ ಒಳಗಾದವರು. ಬಳಿಕ ಪೊಲೀಸರಿಗೆ ದೂರು ನೀಡಿದ್ದರು.
ಇವರಲ್ಲಿ ಶಾಜಿ ಈ ಹಿಂದೆ ಒಂದು ಚರ್ಚ್ನಲ್ಲಿ ಕೆಲಸ ಮಾಡುತ್ತಿದ್ದ. ಯಾವುದೋ ಕಾರಣಕ್ಕೆ ಅಲ್ಲಿ ಕೆಲಸ ಬಿಟ್ಟಿದ್ದ. ಹೀಗೆ ಹೊರಹೋದವನು ಅದೇ ಚರ್ಚ್ನ ಪಾದ್ರಿಯ ಫೋಟೋಗಳನ್ನು ಕೆಟ್ಟದಾಗಿ ಎಡಿಟ್ ಮಾಡಿ, ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದ ಎನ್ನಲಾಗಿದೆ. ಈತನ ವಿರುದ್ಧ ಚರ್ಚ್ ಆಡಳಿತ ಕೂಡ ಆಲೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಪೊಲೀಸರು ತನಿಖೆ ನಡೆಸುತ್ತಿರುವ ಹೊತ್ತಲ್ಲೇ, ಈ ಮಹಿಳೆಯರು ಕಾನೂನು ಕೈಯಿಗೆ ತೆಗೆದುಕೊಂಡಿದ್ದರು. ಕಾರಿನಲ್ಲಿ ಹೋಗುತ್ತಿದ್ದ ಅವನನ್ನು ತಡೆದು, ತಳಿಸಿದ್ದರು. ಆ ವಿಡಿಯೊ ಕೂಡ ಎಲ್ಲ ಕಡೆ ವೈರಲ್ ಆಗಿತ್ತು. ಇದೀಗ ಕೇರಳ ಚಾಲಕುಡಿಯಲ್ಲಿರುವ ನ್ಯಾಯಾಲಯವೊಂದು ಮಹಿಳೆಯರನ್ನು ಜೈಲಿಗೆ ಕಳಿಸಿದೆ.
ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ 2 ತಿಂಗಳು ಮಾತೃತ್ವ ರಜೆ, ಗರ್ಭಪಾತವಾದರೆ 14 ದಿನ ರಜೆ ; ಕೇರಳದಲ್ಲಿ ಪ್ರಥಮ ಪ್ರಯೋಗ!