ಕೋಲ್ಕೊತಾ: ಇಪ್ಪತ್ತಾರು ವರ್ಷದ ಯುವತಿಯೊಬ್ಬಳು ತನ್ನ ವೃದ್ಧ ತಾಯಿಯ ಶವದ ಜತೆ ನಾಲ್ಕು ದಿನ ಕಳೆದ ವಿದ್ಯಮಾನ ಕೋಲ್ಕೊತಾದಲ್ಲಿ ನಡೆದಿದೆ. ಕೋಲ್ಕೊತಾದ ತಾಂಗ್ರ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ.
ಮನೆಯಿಂದ ವಾಸನೆ ಬರುತ್ತಿದೆ ಎಂದು ಅಕ್ಕಪಕ್ಕದ ಮನೆಯವರು ದೂರು ನೀಡಿದ ಬಳಿಕ ಪೊಲೀಸರು ಬಾಗಿಲು ಒಡೆದು ನೋಡಿದ್ದಾರೆ. ಒಂದು ಕಡೆ 61 ವರ್ಷದ ತಾಯಿ ಮೃತದೇಹ ಬಿದ್ದುಕೊಂಡಿದ್ದರೆ ಇನ್ನೊಂದು ಕಡೆ, 21 ವರ್ಷದ ಅವಿವಾಹಿತ ಮಗಳು ಪ್ರಜ್ಞೆ ತಪ್ಪಿ ಬಿದ್ದಿದ್ದಳು.
ಇದನ್ನೂ ಓದಿ | ಉಡುಪಿ ಜೋಡಿ ಕೊಲೆ ಭೇದಿಸಿದ ಪೊಲೀಸರು: ಚೆಲುವಿಯ ಸಂಬಂಧಿಯ ಸೆರೆ
ಶವದ ಪ್ರಾಥಮಿಕ ಪರೀಕ್ಷೆ ಪ್ರಕಾರ ತಾಯಿ ಕನಿಷ್ಠ ನಾಲ್ಕೈದು ದಿನಗಳ ಹಿಂದೆ ಮೃತಪಟ್ಟಿರುವ ಸಾಧ್ಯತೆಗಳಿವೆ. ಆದರೆ ಅವರು ಸಹಜವಾಗಿ ಸಾವನ್ನಪ್ಪಿದ್ದಾರೆಯೇ ಅಥವಾ ಬೇರೆ ಯಾವುದಾದರೂ ಕಾರಣದಿಂದ ಮೃತಪಟ್ಟಿದ್ದಾರೆಯೇ ಎನ್ನುವುದು ದೃಢಪಟ್ಟಿಲ್ಲ. ಮೇಲ್ನೋಟಕ್ಕೆ ಇದು ಸಹಜ ಸಾವೆಂಬಂತೆ ಕಂಡುಬರುತ್ತಿದೆ. ಆದರೆ ಕಳೆದ ನಾಲ್ಕು ದಿನಗಳಿಂದ ಯಾರೂ ಹತ್ತಿರವೇ ಬಂದಂತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯರು ಹೇಳುವ ಪ್ರಕಾರ, ತಾಯಿ ಮತ್ತು ಮಗಳು ಕಳೆದ ಕೆಲವು ವರ್ಷಗಳಿಂದ ಶಿಲ್ ಲೇನ್ ರೆಸಿಡೆನ್ಸ್‌ನಲ್ಲಿ ವಾಸಿಸುತ್ತಿದ್ದರು. ಯುವತಿ ತುಂಬಾ ಅಂತರ್ಮುಖಿ ಆಗಿದ್ದು, ತಾಯಿ ಬಿಟ್ಟು ಬೇರೆ ಯಾರ ಜತೆಗೂ ಮಾತನಾಡುತ್ತಿರಲಿಲ್ಲ. ಯುವತಿ ಸ್ವಲ್ಪ ಮಟ್ಟಿಗೆ ಮಾನಸಿಕ ಅಸ್ವಸ್ಥಳೂ ಆಗಿದ್ದಳು ಎನ್ನಲಾಗಿದೆ.
ಆಕೆಯ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಪ್ರಸಕ್ತ ಆಕೆ ಎನ್. ಆರ್. ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಮಾನಸಿಕ ಸ್ಥಿತಿಗತಿ ಬಗ್ಗೆಯೂ ತಪಾಸಣೆ ನಡೆಯುತ್ತಿದೆ.
ಇದನ್ನೂ ಓದಿ | ಶೀನಾ ಬೋರಾ ಕೊಲೆ ಕೇಸ್: ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿಗೆ ಜಾಮೀನು