ರಾಯ್ಪುರ: ಸರಕಾರದ ಹುದ್ದೆಗಳಿಗೆ ನೇಮಕ ಮಾಡುವ ಸಂದರ್ಭದಲ್ಲಿ ನೂರಕ್ಕೆ ನೂರರಷ್ಟು ಮಹಿಳಾ ಮೀಸಲಾತಿ (Women’s Reservation) ನೀಡುವುದು ಅಸಂವಿಧಾನಿಕ ಕ್ರಮ ಎಂದು ಅಭಿಪ್ರಾಯಪಟ್ಟಿರುವ ಛತ್ತೀಸ್ಗಢದ ಹೈಕೋರ್ಟ್, ರಾಜ್ಯ ಸರಕಾರ ಪ್ರೊಫೆಸರ್ಗಳ ಹುದ್ದೆಗೆ ನೀಡಿದ್ದ ಜಾಹೀರಾತನ್ನು ರದ್ದು ಮಾಡಿದೆ. ಸರಕಾರದ ಕ್ರಮವನ್ನು ವಿರೋಧಿಸಿ ಅಭಯ್ ಕುಮಾರ್, ಡಾ. ಅಜಯ್ ತ್ರಿಪಾಠಿ ಹಾಗೂ ಅಲಿಕ್ಸಸ್ ಕ್ಸಲಾಕ್ಸೊ ಎಂಬುವರು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಶನಿವಾರ (ಮಾರ್ಚ್11ರಂದು) ಈ ಬಗ್ಗೆ ತೀರ್ಪು ನೀಡಿದ ಛತ್ತೀಸ್ಗಢ ಹೈಕೋರ್ಟ್ನ ವಿಭಾಗೀಯ ಪೀಠ ಸರಕಾರದ ಕ್ರಮ ಅಸಂವಿಧಾನಿಕ ಎಂದು ಹೇಳಿದೆ.
ಛತ್ತೀಸ್ಗಢದ ಲೋಕ ಸೇವಾ ಆಯೋಗ 2021ರ ಡಿಸೆಂಬರ್ 8ರಂದು ನಾನಾ ವಿಷಯದ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಜಾಹೀರಾತು ನೀಡಿತ್ತು. ಪ್ರಾಧ್ಯಾಪಕರ ಹಾಗೂ ಡೆಮಾನ್ಸ್ಟ್ಟೇಟರ್ (ಬೋಧಕರು) ಹುದ್ದೆಗಳಿಗೆ ಮಹಿಳೆಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಎಂದು ಹೇಳಲಾಗಿತ್ತು. ಇದರನ್ನು ಅರ್ಜಿದಾರರು ವಿರೋಧಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ನೇಮಕ ಪ್ರಕ್ರಿಯೆ ಸಂವಿಧಾನದ ಆಶಯಕ್ಕೆ ವಿರೋಧವಾಗಿದ್ದು, 14 ಮತ್ತು 16ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.
ಇದನ್ನೂ ಓದಿ : BBMP ಮೀಸಲಾತಿ ಎಡವಟ್ಟು: ಸಂಪೂರ್ಣ ವಾರ್ಡ್ ಮಹಿಳಾ ಮೀಸಲು, SCST ಪ್ರಮಾಣ ಕಡಿತ
ಮೆಡಿಕಲ್ ಕಾಲೇಜುಗಳಿಗೆ ಪ್ರಾಧ್ಯಾಪಕರ ಹಾಗೂ ಬೋಧಕರ ನೇರ ನೇಮಕ ಮಾಡುವ ವೇಳೆ ಮಹಿಳೆಯರಿಗೆ ಮಾತ್ರ ಅವಕಾಶ ಎಂದು 2013ರಲ್ಲಿ ಛತ್ತಿಸ್ಗಢ ಸರಕಾರ ವಿಧೇಯಕ ಪಾಸ್ ಮಾಡಿತ್ತು. ಅದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.