ನವ ದೆಹಲಿ: ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ (Bharat Jodo Yatra) ಚಾಲನೆಗೆ ಕೆಲವೇ ತಾಸುಗಳು ಬಾಕಿ ಇವೆ. ದೇಶದಲ್ಲಿನ ಪ್ರಸ್ತುತ ಸಮಸ್ಯೆಗಳು, ಅಂದರೆ ಬೆಲೆ ಏರಿಕೆ, ನಿರುದ್ಯೋಗ, ಜಿಎಸ್ಟಿ ಹೆಚ್ಚಳ ಮತ್ತಿತರ ಸಂಕಷ್ಟಗಳ ಬಗ್ಗೆ ಗಮನ ಹರಿಸಿ, ಜನರೊಂದಿಗೆ ನೇರ ಸಂಪರ್ಕಕ್ಕೆ ಹೋಗಿ ಅವರ ಕುಂದು ಕೊರತೆಗಳನ್ನು ಆಲಿಸುವ ಸಲುವಾಗಿ ಕಾಂಗ್ರೆಸ್ ಈ ಜೋಡೋ ಯಾತ್ರೆ ಹಮ್ಮಿಕೊಂಡಿದೆ. ಇಂದು ಯಾತ್ರೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕನ್ಯಾಕುಮಾರಿಯಲ್ಲಿ ಉದ್ಘಾಟಿಸುವರು. ನಾಳೆ ಅಂದರೆ ಸೆಪ್ಟೆಂಬರ್ 8ರ ಮುಂಜಾನೆಯಿಂದ ಇಲ್ಲಿಂದಲೇ ಕಾಂಗ್ರೆಸ್ ನಾಯಕರು ಪಾದಯಾತ್ರೆ ಪ್ರಾರಂಭ ಮಾಡಲಿದ್ದಾರೆ.
ರಾಹುಲ್ ಗಾಂಧಿ ಈಗಾಗಲೇ ತಮಿಳುನಾಡಿನ ಚೆನ್ನೈನಲ್ಲಿ ಇದ್ದಾರೆ. ಅವರು ಇಂದು ಮುಂಜಾನೆ ಶ್ರೀಪೆರಂಬದೂರಿನಲ್ಲಿರುವ ತಮ್ಮ ತಂದೆ (ರಾಜೀವ್ ಗಾಂಧಿ) ಸ್ಮಾರಕಕ್ಕೆ ಭೇಟಿಯಾಗಿ ಗೌರವ ನಮನ ಸಲ್ಲಿಸಿದರು. ಅಲ್ಲಿ ಇಂದು ಸಂಗೀತದ ಮೂಲಕ ಪ್ರಾರ್ಥನೆ ಆಯೋಜಿಸಲಾಗಿತ್ತು. ರಾಜೀವ್ ಗಾಂಧಿ ಹತ್ಯೆಯಾಗಿದ್ದು ಇದೇ ಶ್ರೀಪೆರಂಬದೂರಿನಲ್ಲಿ. ಅವರ ನೆನಪಿಗಾಗಿ 2003ರಲ್ಲಿ ಇಲ್ಲಿ ಸ್ಮಾರಕ ನಿರ್ಮಾಣವಾಗಿದೆ. ಆದರೆ ರಾಹುಲ್ ಗಾಂಧಿ ಇದೇ ಮೊದಲ ಬಾರಿಗೆ ಅಲ್ಲಿಗೆ ಭೇಟಿ ನೀಡಿದ್ದಾರೆ. ರಾಹುಲ್ ಗಾಂಧಿ ಈಗಾಗಲೇ ಚೆನ್ನೈನಿಂದ ಹೊರಟಿದ್ದು ಮಧ್ಯಾಹ್ನದ ಬಳಿಕ ಕನ್ಯಾಕುಮಾರಿ ತಲುಪಲಿದ್ದಾರೆ. ಅಲ್ಲಿ ರಾಹುಲ್ ಗಾಂಧಿಯನ್ನು ಸ್ವಾಗತಿಸಲು ಭರ್ಜರಿ ಸಿದ್ಧತೆ ನಡೆಯುತ್ತಿದೆ. ಕನ್ಯಾಕುಮಾರಿಯಲ್ಲಿ ಉತ್ಸವ ಸ್ವರೂಪದ ಸನ್ನಿವೇಶ ನಿರ್ಮಾಣವಾಗಿದೆ.
ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘ರಾಜಕೀಯ ದ್ವೇಷ ಮತ್ತು ವಿಭಜನೆ ನೀತಿಯಿಂದಾಗಿಯೇ ನನ್ನ ತಂದೆಯನ್ನು ಕಳೆದುಕೊಂಡೆ. ಈಗ ಅದೇ ಎರಡು ಕಾರಣದಿಂದ ನನ್ನ ಪ್ರೀತಿಯ ದೇಶವನ್ನೂ ಕಳೆದುಕೊಳ್ಳಲು ಸಿದ್ಧನಿಲ್ಲ. ಪ್ರೀತಿ ಎಂಬುದು ದ್ವೇಷವನ್ನು ಗೆಲ್ಲುತ್ತದೆ. ಭಯವನ್ನೂ ಸೋಲಿಸುತ್ತದೆ. ದೇಶದಲ್ಲಿರುವ ಸಮಸ್ಯೆಗಳನ್ನೆಲ್ಲ ನಾವೆಲ್ಲರೂ ಒಗ್ಗಟ್ಟಾಗಿ ಎದುರಿಸುವ ನಂಬಿಕೆಯಿದೆ’ ಎಂದು ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆಯನ್ನು ಟೀಕಿಸಿದ ಅಸ್ಸಾಂ ಸಿಎಂ
ಕಾಂಗ್ರೆಸ್ ಇಂದಿನಿಂದ ಪ್ರಾರಂಭ ಮಾಡಲಿರುವ ಭಾರತ್ ಜೋಡೋ ಯಾತ್ರೆಯನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಟೀಕಿಸಿದ್ದಾರೆ. ಎಎನ್ಐ ಜತೆ ಮಾತನಾಡಿದ ಅವರು, ‘ಭಾರತ ಅಖಂಡವಾಗಿದೆ. ಇಂದು ಒಂದು ರಾಷ್ಟ್ರ. 1947ರಲ್ಲಿ ಕಾಂಗ್ರೆಸ್ ಭಾರತವನ್ನು ಛಿದ್ರಗೊಳಿಸಿತು. ರಾಹುಲ್ ಗಾಂಧಿ ತನ್ನ ತಾತ ಮಾಡಿದ ತಪ್ಪನ್ನು ಅರ್ಥ ಮಾಡಿಕೊಂಡಿದ್ದರೆ, ಅಂದಿನ ಅವರ ತಪ್ಪಿಗಾಗಿ ರಾಹುಲ್ ಗಾಂಧಿ ಪಶ್ಚಾತ್ತಾಪ ಪಡುತ್ತಿದ್ದಿದ್ದರೆ ಈಗ ದೇಶ ವಿಭಜನೆ ಆಗುತ್ತಿದೆ ಎಂದು ಹೇಳಿ ಈ ಜೋಡೋ ಯಾತ್ರೆ ನಡೆಸುತ್ತಿರಲಿಲ್ಲ. ಭಾರತದಲ್ಲಂತೂ ಈ ಯಾತ್ರೆ ಅಗತ್ಯವಿಲ್ಲ. ಬೇಕಿದ್ದರೆ, ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ನಡೆಸಬಹುದು ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: Bharat Jodo Yatra | ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಇಂದಿನಿಂದ ಪ್ರಾರಂಭ; ಸೆ 8ರಿಂದ ಕಾಲ್ನಡಿಗೆ