ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ಕ್ಕೆ ವಿಶ್ವ ಬ್ಯಾಂಕ್ ಒಟ್ಟು 2,832 ಕೋಟಿ ರೂ.(350 ಮಿಲಿಯನ್ ಡಾಲರ್) ಸಾಲ ನೀಡುವ ಪ್ರಸ್ತಾಪಕ್ಕೆ ವರ್ಲ್ಡ್ ಬ್ಯಾಂಕ್ (World Bank) ಒಪ್ಪಿಗೆ ನೀಡಿದೆ. ಈ ಸಾಲದ ಹಣವನ್ನು ಗುಜರಾತ್, ಆರೋಗ್ಯ ಕ್ಷೇತ್ರದಲ್ಲಿ ವೆಚ್ಚ ಮಾಡಲಿದೆ ಎಂದು ತಿಳಿದು ಬಂದಿದೆ.
ವಿಶ್ವ ಬ್ಯಾಂಕ್ ತನ್ನ ಅಂಗಸಂಸ್ಥೆಯಾದ ಇಂಟರ್‌ನ್ಯಾಷನಲ್ ಬ್ಯಾಂಕ್ ಆಫ್ ರಿಕನ್ಸಟ್ರಕ್ಷನ್ ಆ್ಯಂಡ್ ಡೆವಲಪ್‌ಮೆಂಟ್ (ಐಬಿಆರ್‌ಡಿ) ಮೂಲಕ ಈ ಸಾಲವನ್ನು ಗುಜರಾತ್‌ಗೆ ನೀಡಲಿದೆ. ಹೆಚ್ಚುವರಿ ಅವಧಿ 5 ವರ್ಷ ಸೇರಿದಂತೆ ಒಟ್ಟು 18 ವರ್ಷ ಸಾಲ ಮರು ಪಾವತಿಗೆ ಅವಕಾಶ ನೀಡಲಾಗಿದೆ.
ಗುಜರಾತ್ ಸರ್ಕಾರದ ಸಿಸ್ಟಮ್ಸ್ ರಿಫಾರ್ಮ್ ಎಂಡೇವರ್ಸ್ ಫಾರ್ ಟ್ರಾನ್ಸ್‌ಫಾರ್ಮ್ಡ್ ಹೆಲ್ತ್ ಅಚೀವ್‌ಮೆಂಟ್ ಇನ್ ಗುಜರಾತ್(ಶ್ರೇಷ್ಠ-ಜಿ) ಕಾರ್ಯಕ್ರಮದ ಮೂಲದ ಈ ಸಾಲವನ್ನು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗಾಗಿ ವಿನಿಯೋಗಿಸಲಾಗತ್ತದೆ.
ಗುಜರಾತ್ ತನ್ನ ಜನರಿಗೆ ಸದ್ಯ ಸಂತಾನೋತ್ಪತ್ತಿ, ತಾಯಿತನ, ನವಜಾತ ಶಿಶು, ಮಗು ಮತ್ತು ಹದಿಹರೆಯದವರ ಆರೋಗ್ಯ, ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳು (NCD) ಸೇರಿದಂತೆ ಏಳು ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ. ವಿಶ್ವ ಬ್ಯಾಂಕ್ ಒದಗಿಸುವ ಆರ್ಥಿಕ ಸಾಲವು, ಮಾನಸಿಕ ಆರೋಗ್ಯ ಸೇರಿದಂತೆ ಆರೋಗ್ಯ ಕ್ಷೇತ್ರದ ಇತರ ಭಾಗಗಳಲ್ಲಿ ಸೇವೆಗಳನ್ನು ಹೆಚ್ಚಿಸಲು ಸಹಾಯ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ | Recession in 2023 | ಮುಂದಿನ ವರ್ಷ ಜಗತ್ತಿಗೆ ಆರ್ಥಿಕ ಹಿಂಜರಿತ: ವಿಶ್ವಬ್ಯಾಂಕ್ ಎಚ್ಚರಿಕೆ