ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ಮೋದಿ ನಿಧನಕ್ಕೆ ಜಾಗತಿಕ ನಾಯಕರು ಸಂತಾಪ ಸೂಚಿಸಿದ್ದಾರೆ. ಹೀರಾಬೆನ್ ಅವರು ಕಳೆದ ಎರಡು ದಿನಗಳ ಹಿಂದೆ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರಿದ್ದರು. ಅವರಿಂದು ಮುಂಜಾನೆ 3.30ರ ಹೊತ್ತಿಗೆ ಕೊನೆಯುಸಿರೆಳೆದಿದ್ದಾರೆ.
ಹೀರಾಬೆನ್ ನಿಧನಕ್ಕೆ ಮೊಟ್ಟಮೊದಲು ಸಂತಾಪ ಸೂಚಿಸಿದ ಜಾಗತಿಕ ನಾಯಕ ಜಪಾನ್ ಪ್ರಧಾನಿ ಫ್ಯುಮಿಯೊ ಕಿಶಿದಾ ಅವರು. ‘ಪ್ರಧಾನಿ ನರೇಂದ್ರ ಮೋದಿಯವರೇ, ನಿಮ್ಮ ಪ್ರೀತಿಯ ತಾಯಿ ನಿಧನರಾದ ವಿಷಯ ಕೇಳಿ ನೋವಾಯಿತು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ’ ಎಂದು ಟ್ವೀಟ್ ಮಾಡಿದ್ದಾರೆ.
ನೇಪಾಳದ ನೂತನ ಪ್ರಧಾನಮಂತ್ರಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಅವರು ಟ್ವೀಟ್ ಮಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರು ನಿಧನರಾದ ಸುದ್ದಿ ಕೇಳಿ ತುಂಬ ದುಃಖವಾಯಿತು. ನರೇಂದ್ರ ಮೋದಿ ಮತ್ತು ಅವರ ಕುಟುಂಬದವರಿಗೆ ಈ ದುಃಖ ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ಹೀರಾಬೆನ್ ಅವರ ಆತ್ಮ ಶಾಂತಿಯಲ್ಲಿ ನೆಲೆಸಲಿ’ ಎಂದು ಬರೆದಿದ್ದಾರೆ.
ಶ್ರೀಲಂಕಾ ಮಾಜಿ ಪ್ರಧಾನಮಂತ್ರಿ ಮಹೀಂದ್ರಾ ರಾಜಪಕ್ಸಾ ಅವರೂ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಹೀರಾಬೆನ್ ನಿಧನದ ಸುದ್ದಿಗೆ ವಿಷಾಧಿಸುತ್ತೇನೆ. ಪ್ರಧಾನಿ ಮೋದಿ ಮತ್ತು ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು ಎಂದು ಹೇಳಿದ್ದಾರೆ. ಇನ್ನುಳಿದಂತೆ ನೇಪಾಳ ಮಾಜಿ ಪ್ರಧಾನಮಂತ್ರಿ ಶೇರ್ ಬಹದ್ದೂರ್ ದೇವುಬಾ, ಭಾರತದಲ್ಲಿರುವ ರಷ್ಯಾ ರಾಯಭಾರಿ ಡೆನಿಸ್ ಅಲಿಪೋವ್, ಭಾರತದ ಜರ್ಮನ್ ರಾಯಭಾರಿ ಫಿಲಿಪ್ ಅಕರ್ಮನ್, ಭಾರತದ ಸಿಂಗಾಪುರ್ ಹೈ ಕಮಿಷನರ್ ಸೈಮನ್ ವಾಂಗ್ ಅವರು ಪ್ರಧಾನಿ ಮೋದಿ ತಾಯಿ ಮರಣಕ್ಕೆ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: Heeraben Modi | ಗಾಂಧಿ ನಗರದಲ್ಲಿ ನಡೆದ ಹೀರಾಬೆನ್ ಮೋದಿ ಅಂತ್ಯಕ್ರಿಯೆ