Site icon Vistara News

Yoga Day 2023: ಎಲ್ಲೆಲ್ಲೂ ಯೋಗ; ಮುಂಜಾನೆಯೇ ‘ಆಸನ’ ಹಾಕಿದ ರಾಷ್ಟ್ರಪತಿ, ರಾಜಕೀಯ ನಾಯಕರು

President Droupadi Murmu

#image_title

ನವ ದೆಹಲಿ: ಇಂದು ದೇಶ-ವಿದೇಶಗಳಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನ (International Yoga Day 2023) ವನ್ನು ಆಚರಿಸಲಾಗುತ್ತಿದೆ. ಪ್ರಧಾನಿ ಮೋದಿ (PM Modi)ಯವರು ಇಂದಿನಿಂದ ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿದ್ದು, ಅವರಿಂದ ವಿಶ್ವಸಂಸ್ಥೆಯಲ್ಲಿ ನಡೆಯುವ ಯೋಗದಿನಾಚರಣೆಯಲ್ಲಿ ಪಾಲ್ಗೊಳ್ಳುವರು. ಇನ್ನು ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಸಚಿವರುಗಳು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಯೋಗದಿನದಲ್ಲಿ ಭಾಗವಹಿಸಿದ್ದಾರೆ. ಅಷ್ಟೇ ಅಲ್ಲ, ಯೋಧರು, ಪೊಲೀಸ್​ ಮತ್ತು ಇನ್ನಿತರ ಭದ್ರತಾ ಸಿಬ್ಬಂದಿ, ಸರ್ಕಾರಿ ಉದ್ಯೋಗಿಗಳು, ವಿವಿಧ ಸಂಘ-ಸಂಸ್ಥೆಗಳು, ಸಾಮಾನ್ಯ ಜನರು ಕೂಡ ಯೋಗವನ್ನು (Yoga Day 2023) ಮಾಡುವ ಮೂಲಕ ಇಂದಿನ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುತ್ತಿದ್ದಾರೆ.

ಇಂದು ರಾಷ್ಟ್ರಪತಿ ಭವನದಲ್ಲಿ ಯೋಗ ಮಾಡಿದ ಫೋಟೋ ಹಂಚಿಕೊಂಡ ರಾಷ್ಟ್ರಪತಿ ದ್ರೌಪದಿ ಮುರ್ಮು ‘ಯೋಗವು ನಮ್ಮ ನಾಗರಿಕತೆಯ ಶ್ರೇಷ್ಠ ಸಾಧನೆಗಳಲ್ಲಿ ಒಂದು. ಭಾರತವು ಜಗತ್ತಿಗೆ ನೀಡಿದ ಅತಿದೊಡ್ಡ ಕೊಡುಗೆ. ಯೋಗ ಎಂಬುದು ದೇಹ ಮತ್ತು ಮನಸಿನ ಮಧ್ಯೆ ಸಮತೋಲನ ಸ್ಥಾಪಿಸುತ್ತದೆ. ಜೀವನದಲ್ಲಿ ಎದುರಾಗುವ ಅದೆಷ್ಟೋ ಸವಾಲುಗಳನ್ನು ಎದುರಿಸಲು ಯೋಗ ನಮ್ಮನ್ನು ಹುರಿಗೊಳಿಸುತ್ತದೆ. ಪ್ರತಿಯೊಬ್ಬರೂ ದೈನಂದಿನ ಬದುಕಿನಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ಹೇಳಿದರು.

ಉಪಾಧ್ಯಕ್ಷ ಜಗದೀಪ್​ ಧನಕರ್​ ಅವರು ಮಧ್ಯಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್​, ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್​ ಅವರೊಂದಿಗೆ ಯೋಗ ಮಾಡಿದರು. ಬಳಿಕ ಯೋಗದಿನಾಚರಣೆಯಲ್ಲಿ ಪಾಲ್ಗೊಂಡವರನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್​ ಅವರು ಇಂದು ಭಾರತೀಯ ನೌಕಾಪಡೆ ಸಿಬ್ಬಂದಿಯೊಂದಿಗೆ, ಕೊಚ್ಚಿಯಲ್ಲಿ ಐಎನ್​​ಎಸ್​ ವಿಕ್ರಾಂತ್​ ಯುದ್ಧ ನೌಕೆಯಲ್ಲಿ ಯೋಗ ಮಾಡಿದರು. ಬಳಿಕ ತಮ್ಮೊಂದಿಗೆ ಯೋಗ ದಿನದಲ್ಲಿ ಪಾಲ್ಗೊಂಡಿದ್ದವರ ಜತೆ ಸಂವಾದ ನಡೆಸಿದರು. ಹಾಗೇ, ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ದೆಹಲಿಯಲ್ಲಿ ಯೋಗ ಮಾಡಿದರು. ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವಿಯಾ ಅವರು ದೆಹಲಿ ಏಮ್ಸ್​​ನಲ್ಲಿ ಆರೋಗ್ಯ ಸಿಬ್ಬಂದಿಯೊಂದಿಗೆ ಯೋಗ ದಿನದಲ್ಲಿ ಪಾಲ್ಗೊಂಡರು. ಸಚಿವ ನಿತಿನ್​ ಗಡ್ಕರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತಿತರ ಗಣ್ಯರು ಕೂಡ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಪಾಲ್ಗೊಂಡರು. ಹಾಗೇ, ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಗಡಿ ಭದ್ರತಾ ಪಡೆ ಸಿಬ್ಬಂದಿ ಯೋಗ ಆಚರಿಸಿದರು. ಸಿಕ್ಕಿಂನಲ್ಲಿ ಕೂಡ ಭಾರತೀಯ ಸೇನೆ ಯೋಧರು ಯೋಗಾಸನ ಮಾಡಿದರು.

ಇಲ್ಲಿದೆ ನೋಡಿ ಗಣ್ಯರ ಯೋಗ ದಿನದ ಫೋಟೋ-ವಿಡಿಯೊಗಳು

Exit mobile version