ಹೊಸದಿಲ್ಲಿ: ಉತ್ತರ ಪ್ರದೇಶದ ವಾರಾಣಸಿ ಜ್ಞಾನವಾಪಿ ಮಸೀದಿ ವಿವಾದ ಜೋರಾಗಿರುವಂತೆಯೇ ಪಂಜಾಬ್‌ನ ಪಟಿಯಾಲದ ರಾಜಪುರದ ಮಂದಿರ-ಮಸೀದಿ ಗದ್ದಲ ಶುರುವಾಗಿದೆ. ಇಲ್ಲಿನ ಸಿಕ್ಖರಿಗೆ ಸೇರಿದ ಗುರುದ್ವಾರದ ಯಾತ್ರಿ ನಿವಾಸವನ್ನು ಮುಸ್ಲಿಂ ಸಮುದಾಯದವರು ಬಲವಂತವಾಗಿ ವಶಪಡಿಸಿಕೊಂಡು ಮಸೀದಿಯಾಗಿ ಪರಿವರ್ತಿಸಿದ್ದಾರೆ ಎಂದು ಸಿಖ್ ಮತ್ತು ಹಿಂದೂ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ.
ಆದರೆ ಮುಸ್ಲಿಂ ಸಮುದಾಯ ಈ ಆರೋಪವನ್ನು ನಿರಾಕರಿಸಿದ್ದು, ಗುಂಜನ್‌ವಾಲಾ ಮೊಹಲ್ಲಾದಲ್ಲಿರುವ ಈ ಮಸೀದಿ ಸ್ವಾತಂತ್ರ್ಯಪೂರ್ವ ಕಾಲದ್ದಾಗಿದ್ದು, ಯಾವುದೇ ಅತಿಕ್ರಮಣ ನಡೆದಿಲ್ಲ ಎಂದಿದೆ.
ಸ್ಥಳೀಯರು ಹೇಳುವುದೇನು?
ಸ್ಥಳೀಯರು ಹೇಳುವ ಪ್ರಕಾರ, 2017ರವರೆಗೂ ಈ ವಿವಾದಿತ ಜಾಗದಲ್ಲಿ ಎರಡು ಸಿಖ್ ಕುಟುಂಬಗಳು ವಾಸಿಸುತ್ತಿದ್ದವು. 2016ರಲ್ಲಿ ವಕ್ಫ್ ಬೋರ್ಡ್ ಈ ಜಾಗ ತನ್ನದು ಎಂಬ ವಾದ ಮುಂದಿಟ್ಟಿತು. ಬಳಿಕ ಬಲವಂತವಾಗಿ ಕುಟುಂಬಗಳನ್ನು ಹೊರಗೆ ಹಾಕಲಾಯಿತು. ಮುಂದಿನ ಅವಧಿಯಲ್ಲಿ ಈ ಪ್ರದೇಶ ನಿಧಾನವಾಗಿ ಮಸೀದಿಯಾಗಿ ಪರಿವರ್ತನೆಯಾಯಿತು. ಮೊದಲು ಬುರುಜುಗಳನ್ನು ನಿರ್ಮಿಸಲಾಯಿತು. ಬಳಿಕ ಹಸಿರು ಬಣ್ಣ ಬಳಿಯಲಾಯಿತು. ಮಾತ್ರವಲ್ಲ, ಈ ಜಾಗದಲ್ಲಿದ್ದ ಸಿಖ್ ಸಮುದಾಯಕ್ಕೆ ಸಂಬಂಧಿಸಿದ ಎಲ್ಲ ಸಂಕೇತಗಳನ್ನು ಕಿತ್ತು ಹಾಕಲಾಯಿತು.
Explainer: ಜ್ಞಾನವಾಪಿ ಮಸೀದಿ ಕೊಳದಲ್ಲಿ ಶಿವಲಿಂಗ, ಮಂದಿರ ಪರ ಇನ್ನೊಂದು ಪುರಾವೆ?
ಮುಸ್ಲಿಮರು ಹೇಳುವುದೇನು?
ಮುಸ್ಲಿಂ ಸಮುದಾಯ ಹೇಳುವ ಪ್ರಕಾರ, ಈ ಮಸೀದಿ 1947ಕ್ಕೂ ಮೊದಲು ಇತ್ತು. ಇತ್ತೀಚೆಗೆ ಇದರ ಜೀರ್ಣೋದ್ಧಾರ ಕಾರ್ಯ ಮಾತ್ರ ಮಾಡಲಾಗಿದೆ.
ಜಿಲ್ಲಾಡಳಿತ ಹೇಳುವುದೇನು?
ಹರಿಯಾಣ ಮತ್ತು ಉತ್ತರ ಪ್ರದೇಶದಿಂದ ಬಂದಿರುವ ಜನರು ಪ್ರದೇಶದಲ್ಲಿ ಶಾಂತಿ ಕದಡುತ್ತಿದ್ದಾರೆ ಎಂದು ಸ್ಥಳೀಯರು ಆಪಾದಿಸಿದ್ದಾರೆ. ಹೀಗಾಗಿ, ವಿವಾದಿತ ಪ್ರದೇಶದ ಸುತ್ತ ಬಿಗಿ ಭದ್ರತೆಯನ್ನು ಆಯೋಜಿಸಲಾಗಿದೆ. ಎರಡೂ ಕಡೆಯವರು ತಮ್ಮ ವಾದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ನೀಡುವಂತೆ ಜಿಲ್ಲಾಡಳಿತ ಸೂಚಿಸಿದೆ.
“ಎರಡೂ ಕಡೆಯ ವಾದಗಳನ್ನು ಆಲಿಸಿದ್ದೇವೆ. ಹಿಂದೂ ಮತ್ತು ಸಿಕ್ಖರ ಪ್ರಕಾರ ಇದು ದೇವಾಲಯಕ್ಕೆ ಸಂಬಂಧಿಸಿದ ಯಾತ್ರಿ ನಿವಾಸ. ಆದರೆ, ಮುಸ್ಲಿಮರು ಇದನ್ನು ಮಸೀದಿ ಎಂದು ವಾದಿಸುತ್ತಿದ್ದಾರೆ. ದಾಖಲೆಗಳನ್ನು ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಹಿಮಾಂಶು ಗುಪ್ತಾ ಹೇಳಿದ್ದಾರೆ.
ವಿಶ್ವ ಹಿಂದೂ ಪರಿಷತ್ ಕಳೆದ ಏಪ್ರಿಲ್‌ನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ ದೊಡ್ಡ ಪ್ರತಿಭಟನೆಯನ್ನು ಆಯೋಜಿಸಿತ್ತು.
ಜ್ಞಾನವಾಪಿಯಲ್ಲಿ ಕಂಡ ಶಿವಲಿಂಗಕ್ಕೆ ರಕ್ಷಣೆ, ಮುಸ್ಲಿಂ ಪ್ರಾರ್ಥನೆಗೂ ಅಡ್ಡಿಯಿಲ್ಲ: ಸುಪ್ರೀಂ