ವಯಸ್ಸಾದರೂ ಮದುವೆ ಆಗದೆ ಇದ್ದರೆ, ವಯಸ್ಸು ಮೀರಿದರೂ ಮದುವೆಯಾಗದೆ ಹಾಗೇ ಉಳಿದವರಿಗೆ ಮತ್ತದೇ ‘ಮದುವೆ’ ಬಗ್ಗೆ ಆಗಾಗ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. ಅದಕ್ಕೆ ಸೆಲೆಬ್ರಿಟಿಗಳೂ ಹೊರತಲ್ಲ. ಅದರಲ್ಲೂ ರಾಹುಲ್ ಗಾಂಧಿ (Rahul Gandhi) ಮದುವೆ ವಿಚಾರವಂತೂ ಆಗಾಗ ಮುನ್ನೆಲೆಗೆ ಒಂದಲ್ಲ ಒಂದು ರೀತಿಯಲ್ಲಿ ಬರುತ್ತದೆ. ಪ್ರತಿ ಸಂದರ್ಶನದಲ್ಲೂ ಇದೊಂದು ಪ್ರಶ್ನೆ ಅವರಿಗೆ ಕಟ್ಟಿಟ್ಟಬುತ್ತಿ ಎಂಬಂತಾಗಿದೆ. ಇತ್ತೀಚೆಗೆ ಇಟಾಲಿಯನ್ ಡೇಲಿ ನ್ಯೂಸ್ಪೇಪರ್ಗೆ ರಾಹುಲ್ ಗಾಂಧಿಯವರು ನೀಡಿದ ಸಂದರ್ಶನದಲ್ಲೂ ಇದೇ ಪ್ರಶ್ನೆ ಎದುರಾಗಿತ್ತು.
ಇಟಾಲಿಯನ್ ಸುದ್ದಿಪತ್ರಿಕೆಯೊಂದು ರಾಹುಲ್ ಗಾಂಧಿಯವರ ಇಂಟರ್ವ್ಯೂ ಮಾಡಿದಾಗ ‘52 ವರ್ಷವಾದರೂ ಇನ್ನೂ ಸಿಂಗಲ್ ಆಗಿರುವುದು ಯಾಕೆ?’ ಎಂಬ ಪ್ರಶ್ನೆ ಕೇಳಿತ್ತು. ಅದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ ‘ನನ್ನ ಮನಸಲ್ಲೂ ಮದುವೆಯಾಗಬೇಕು, ಮಕ್ಕಳನ್ನು ಹೊಂದಬೇಕು ಎಂಬ ಆಸೆ ಹುಟ್ಟಿತ್ತು. ಆದರೆ ಮಾಡಬೇಕಾದ ಹಲವು ಕೆಲಸಗಳು ಇವೆ. ನಾನ್ಯಾಕೆ ಮದುವೆಯಾಗದೆ ಉಳಿದೆ ಎಂಬುದಕ್ಕೆ ಇಂಥದ್ದೇ ಎಂಬ ಒಂದು ನಿರ್ದಿಷ್ಟ ಕಾರಣವೇ ಇಲ್ಲ. ನನಗೆ ಗೊತ್ತೂ ಇಲ್ಲ’ ಎಂದು ಉತ್ತರಿಸಿದ್ದಾರೆ.
ಇದನ್ನೂ ಓದಿ: Rahul Gandhi : ಸ್ಕೈಯಿಂಗ್ ಮಾಡುತ್ತಾ ಎಂಜಾಯ್ ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3500ಕಿಮೀ ದೂರ ‘ಭಾರತ್ ಜೋಡೋ’ ಹೆಸರಿನಲ್ಲಿ ಪಾದಯಾತ್ರೆ ನಡೆಸಿದ್ದಾರೆ. ಇತ್ತೀಚೆಗಷ್ಟೇ ಅವರ ಪಾದಯಾತ್ರೆ ಕಾಶ್ಮೀರದಲ್ಲಿ ಅಂತ್ಯಗೊಂಡಿದೆ. ಡಿಸೆಂಬರ್ನಲ್ಲಿ ಭಾರತ್ ಜೋಡೋ ಯಾತ್ರೆ ಮಧ್ಯೆಯೇ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದ ರಾಹುಲ್ ಗಾಂಧಿ, ಅದರಲ್ಲಿ ಮದುವೆ ಪ್ರಶ್ನೆ ಎದುರಾದಾಗ ‘ನನ್ನ ತಾಯಿ ಸೋನಿಯಾ ಗಾಂಧಿ ಮತ್ತು ನನ್ನ ಅಜ್ಜಿ ಇಂದಿರಾಗಾಂಧಿ ಅವರಿಗೆ ಇರುವ ಗುಣಗಳನ್ನು ಹೊಂದಿರುವವಳು ಸಿಕ್ಕರೆ ಮದುವೆಯಾಗುತ್ತೇನೆ’ ಎಂದಿದ್ದರು. ಹಾಗೇ, ಜನವರಿಯಲ್ಲಿ ಕರ್ಲಿ ಟೇಲ್ಸ್ ಎಂಬ ಯುಟ್ಯೂಬ್ ಚಾನೆಲ್‌ನ ಕಾಮಿಯಾ ಜಾನಿ ಜತೆ ಮಾತುಕತೆ ನಡೆಸಿದ್ದ ರಾಹುಲ್ ಗಾಂಧಿ “ಇವಳೇ ನನ್ನ ಬಾಳ ಸಂಗತಿ, ಇವಳೇ ನನಗೆ ಸರಿಯಾದ ಜೋಡಿ ಎಂದು ಎನಿಸಿದರೆ ಖಂಡಿತವಾಗಿಯೂ ಮದುವೆಯಾಗುತ್ತೇನೆ. ಪ್ರೀತಿಯಿಂದ ಕಾಣುವ ಗುಣ ಹಾಗೂ ಜಾಣತನ ಇರುವವರನ್ನು ಮದುವೆಯಾಗುತ್ತೇನೆ” ಎಂದಿದ್ದರು.