Site icon Vistara News

Yakub Memon | ಯಾಕೂಬ್ ಮೆಮನ್ ಸಮಾಧಿ ಸೌಂದರ್ಯೀಕರಣ, ಉದ್ಧವ್ ಕ್ಷಮೆಗೆ ಬಿಜೆಪಿ ಆಗ್ರಹ

Yakub Memon

ಮುಂಬೈ: 1993ರ ಸರಣಿ ಬಾಂಬ್ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ (Yakub Memon) ಸಮಾಧಿ ಸೌಂದರ್ಯಕ್ಕೆ ಸಂಬಂಧಿಸದಂತೆ ವಿವಾದ ಭುಗಿಲೆದ್ದಿದೆ. ಮೆಮನ್ ಸಮಾಧಿಯನ್ನು ಮಾರ್ಬಲ್ ಟೈಲ್ಸ್, ಎಲ್ಇಡಿ ಲೈಟನಿಂಗ್ ಸೇರಿದಂತೆ ಇನ್ನಿತರ ಅಲಂಕಾರಿಕವಾಗಿ ಸಜ್ಜುಗೊಳಿಸಲಾಗಿದೆ. ಈಗ ಈ ವಿಷಯವು ಮಹಾರಾಷ್ಟ್ರದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಉದ್ಧವ್ ಠಾಕ್ರೆ ಅವರು ಸಿಎಂ ಆಗಿದ್ದಾಗಲೇ ಇದು ನಡೆದಿದ್ದು, ಅವರು ಕ್ಷಮೆಯಾಚಿಸಬೇಕೆಂದು ಬಿಜೆಪಿ ಆಗ್ರಹಿಸಿದೆ. ವ್ಯಾಪಕ ವಿರೋಧವು ವ್ಯಕ್ತವಾಗುತ್ತಿದ್ದಂತೆ ಪೊಲೀಸರು, ಸಮಾಧಿಗೆ ಅಳವಡಿಸಲಾಗಿದ್ದ ಎಲ್‌ಇಡಿ ಲೈಟನಿಂಗ್ ವ್ಯವಸ್ಥೆಯನ್ನು ತೆಗೆದು ಹಾಕಿದ್ದಾರೆ.

ಯಾಕೂಬ್ ಮೆಮನ್ ಸಮಾಧಿಯ ಅಲಂಕಾರವನ್ನು ಹೆಚ್ಚಿಸಲಾಗಿದೆ ಎಂದು ಒಪ್ಪಿಕೊಂಡಿರುವ ಜುಮಾ ಮಸೀದಿ ಚೇರ್ಮನ್, ಇದಕ್ಕಾಗಿ ಯಾವುದೇ ಅನುಮತಿಯನ್ನು ಪಡೆದುಕೊಂಡಿರಲಿಲ್ಲ ಎಂದು ತಿಳಿಸಿದ್ದಾರೆ. ಬರಿಯಲ್ ವಕ್ಫ್ ಬೋರ್ಡ್ ವ್ಯಾಪ್ತಿಗೆ ಬರುವ ಬಡಾ ಕಬರಸ್ತಾನ್‌ದಲ್ಲಿ ಯಾಕೂಬ್ ಮೆಮನ್ ಸಮಾಧಿ ಇದೆ.

ಮಹಾರಾಷ್ಟ್ರದಲ್ಲಿ ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಈ ಸಮಾಧಿ ಸುಧಾರಣೆ ನಡೆದಿದೆ. ಯಾಕೂಬ್ ಮೆಮನ್ ಸಮಾಧಿಯನ್ನು ತೀರ್ಥಕ್ಷೇತ್ರವನ್ನಾಗಿ ಪರಿವರ್ತಿಸುತ್ತಿದ್ದರೂ ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಯಾಕೆ ಸುಮ್ಮನಿದ್ದರು ಎಂದು ಬಿಜೆಪಿಯ ನಾಯಕ ರಾಮ್ ಕದಮ್ ಅವರು ಪ್ರಶ್ನಿಸಿದ್ದಾರೆ.

ಪಾಕಿಸ್ತಾನದ ಅಣತಿಯಂತೆ ಮುಂಬೈನ‌ಲ್ಲಿ ಸರಣಿ ಬಾಂಬ್ ಸ್ಫೋಟಿಸಿದ ಯಾಕೂಬ್ ಮೆಮನ್ ಭಯೋತ್ಪಾದಕ. ಇದು ಅವರ (ಉದ್ಧವ್ ಠಾಕ್ರೆ) ಮುಂಬೈನ ಮೇಲಿನ ಪ್ರೀತಿಯಾ, ಇದು ಅವರ ದೇಶಭಕ್ತಿಯಾ? ಶರದ್ ಪವಾರ್, ರಾಹುಲ್ ಗಾಂಧಿ ಮತ್ತು ಉದ್ಧವ್ ಠಾಕ್ರೆ ಅವರು ಮುಂಬೈ ಜನರಿಗೆ ಕ್ಷಮೆಯಾಚಿಸಬೇಕು ಎಂದು ರಾಮ್ ಕದಮ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ | ಉದ್ಧವ್ ಠಾಕ್ರೆಗೆ ಬರ್ತ್​ ಡೇ ವಿಶ್​ ಮಾಡಿದ ಶಿಂಧೆ; ಪದ ಪ್ರಯೋಗದಲ್ಲಿ ಚಾಣಾಕ್ಷತನ ತೋರಿದ ಮುಖ್ಯಮಂತ್ರಿ !

Exit mobile version