ನವ ದೆಹಲಿ: ಪ್ರತಿಪಕ್ಷಗಳ ಜಂಟಿ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಇಂದು ನಾಮಪತ್ರ ಸಲ್ಲಿಸಿದ್ದಾರೆ. ೪ ಸೆಟ್‌ಗಳ ನಾಮಪತ್ರವನ್ನು ರಾಷ್ಟ್ರಪತಿ ಚುನಾವಣೆಯ ರಿಟರ್ನಿಂಗ್ ಅಧಿಕಾರಿ ಪಿ.ಸಿ.ಮೋಡಿ ಅವರಿಗೆ ನೀಡಿದರು. ಈ ವೇಳೆ ಎನ್‌ಸಿಪಿ ನಾಯಕ ಶರದ್ ಪವಾರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ, ಜಮ್ಮು-ಕಾಶ್ಮೀರ ನ್ಯಾಶನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ, ಆರ್‌ಎಲ್‌ಡಿಯ ಜಯಂತ್ ಸಿನ್ಹಾ, ಸಿಪಿಐ (ಎಂ) ಪ್ರಮುಖ ಸೀತಾರಾಮ್ ಯೆಚೂರಿ, ಡಿಎಂಕೆಯ ಎ ರಾಜಾ, ಸಿಪಿಐನ ಡಿ.ರಾಜಾ, ತೆಲಂಗಾಣ ರಾಷ್ಟ್ರಸಮಿತಿ ನಾಯಕ ಕೆ.ಟಿ.ರಾಮರಾವ್ (ಸಿಎಂ ಕೆಸಿಆರ್ ಮಗ) ಸೇರಿ ಸುಮಾರು 14ಪಕ್ಷಗಳ ನಾಯಕರು ಹಾಜರಿದ್ದರು.
ಪ್ರತಿಪಕ್ಷಗಳೆಲ್ಲ ಒಟ್ಟಾಗಿ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ 84ವರ್ಷದ ಯಶವಂತ್ ಸಿನ್ಹಾರನ್ನು ಆಯ್ಕೆ ಮಾಡಿದ್ದಾರೆ. ಪ್ರತಿಪಕ್ಷಗಳೊಂದಿಗೆ ಸೇರುವುದೇ ಇಲ್ಲವೆಂದಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಈಗ ನಮ್ಮ ಪಕ್ಷ ಟಿಆರ್‌ಎಸ್ ಬೆಂಬಲ ಯಶವಂತ್ ಸಿನ್ಹಾಗೆ ಎಂದು ಹೇಳಿದ್ದಾರೆ. ಇಷ್ಟೆಲ್ಲದರ ಮಧ್ಯೆ ಆಮ್ ಆದ್ಮಿ ಪಕ್ಷ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷಗಳು ಇನ್ನೂ ತಮ್ಮ ಬೆಂಬಲ ಯಾರಿಗೆಂದು ಹೇಳಿಲ್ಲ ಮತ್ತು ಯಶವಂತ್ ಸಿನ್ಹಾ ನಾಮಪತ್ರ ಸಲ್ಲಿಕೆಗೂ ತಮ್ಮ ಪ್ರತಿನಿಧಿಯನ್ನು ಕಳಿಸಿಲ್ಲ. ಇನ್ನು ಮಾಯಾವತಿಯವರ ಬಹುಜನ ಸಮಾಜ ಪಾರ್ಟಿ ಮತ್ತು ಒಡಿಶಾದ ಬಿಜು ಜನತಾ ದಳ (ಬಿಜೆಡಿ) ಪಕ್ಷಗಳು ತಾವು ಎನ್‌ಡಿಎ ಒಕ್ಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ನೀಡುವುದಾಗಿ ಈಗಾಗಲೇ ಘೋಷಿಸಿಕೊಂಡಿವೆ.
ಎನ್‌ಡಿಎ ಒಕ್ಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೇ ಸಂಖ್ಯಾ ಬಲ ಹೆಚ್ಚಿದ್ದು, ಅವರ ಗೆಲುವು ಖಚಿತ ಎಂದೇ ಹೇಳಲಾಗುತ್ತಿದೆ. ಹೀಗಿದ್ದಾಗ್ಯೂ ಇಂದು ಯಶವಂತ್ ಸಿನ್ಹಾ ಕೂಡ ರಾಜಕೀಯ ದಿಗ್ಗಜರೊಂದಿಗೆ ಬಂದು ನಾಮಪತ್ರ ಸಲ್ಲಿಸುವ ಮೂಲಕ ತಮ್ಮ ಬಲಪ್ರದರ್ಶನ ಮಾಡಿದ್ದಾರೆ. ಈ ಹಿಂದೆ ಮಾತನಾಡಿದ್ದ ಯಶವಂತ್ ಸಿನ್ಹಾ “ರಬ್ಬರ್ ಸ್ಟಾಂಪ್‌ನಂಥ ರಾಷ್ಟ್ರಪತಿ ಆಯ್ಕೆ ಮಾಡಿದರೆ ಏನೂ ಪ್ರಯೋಜನವಿಲ್ಲ. ನಾನು ರಾಷ್ಟ್ರಪತಿಯಾದರೆ, ದ್ರೌಪದಿ ಮುರ್ಮು ಅವರಿಗಿಂತಲೂ ಹೆಚ್ಚು ಸಾಂವಿಧಾನಿಕವಾಗಿ ಇರುತ್ತೇನೆ. ನನಗೆ ಮುರ್ಮು ಅವರೊಂದಿಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಹಾಗಿದ್ದಾಗ್ಯೂ ಈ ದೇಶದ ಸಂವಿಧಾನ ರಕ್ಷಣೆಯಾಗಬೇಕು ಎಂದರೆ ಅವರಿಗಿಂತಲೂ ನಾನೇ ರಾಷ್ಟ್ರಪತಿ ಆಗುವುದು ಉತ್ತಮ” ಎಂದು ಹೇಳಿದ್ದರು.
ಇದನ್ನೂ ಓದಿ: ಎನ್‌ಡಿಎ ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಕೆ; ಪ್ರಧಾನಿ ಮೋದಿ ಉಪಸ್ಥಿತಿ