ಲಕ್ನೋ: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಸಂಪೂರ್ಣವಾಗಿ ಉಚಿತವಾಗಿದೆ. ಆದರೆ ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸಲು ಪೋಷಕರು ಹಣ ತೆರಲೇಬೇಕು. ಅದರಲ್ಲೂ ಇಬ್ಬಿಬ್ಬರು ಮಕ್ಕಳಿದ್ದರೆ ಪೋಷಕರಿಗೆ ಶಾಲೆಯ ಶುಲ್ಕವೇ ದೊಡ್ಡ ಹೊರೆಯಾಗಿಬಿಡುತ್ತದೆ. ಹಾಗಾಗಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಅವರ ಸರ್ಕಾರ (Yogi Government) ಹೊಸದೊಂದು ಸೌಲಭ್ಯ ನೀಡುವುದಕ್ಕೆ ಸಿದ್ಧವಾಗಿದೆ.
ಇದನ್ನೂ ಓದಿ: CM Yogi Adityanath | ಮುಂಬಯಿನಲ್ಲಿ ಉದ್ಯಮಿಗಳು, ಬಾಲಿವುಡ್ ನಿರ್ಮಾಪಕರ ಜತೆ ಸಿಎಂ ಯೋಗಿ ಆದಿತ್ಯನಾಥ್ ಮಾತುಕತೆ
ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರಿಬ್ಬರೂ ಒಂದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೆ, ಅವರಲ್ಲಿ ಒಬ್ಬರ ಶುಲ್ಕವನ್ನು ರಾಜ್ಯ ಸರ್ಕಾರ ಭರಿಸುವುದಾಗಿ ಹೇಳಲಾಗಿದೆ. ಮುಂಬರುವ ಆರ್ಥಿಕ ವರ್ಷದ ಬಜೆಟ್‌ನಲ್ಲಿಯೇ ಈ ಸೌಲಭ್ಯಕ್ಕಾಗಿ ಹಣ ಮೀಸಲಿಡುವುದಾಗಿಯೂ ತಿಳಿಸಲಾಗಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಹಾಗೂ ಬಡವರ ಕಲ್ಯಾಣದ ನಿಟ್ಟಿನಲ್ಲಿ ಈ ಯೋಜನೆ ಆರಂಭಿಸುತ್ತಿರುವುದಾಗಿ ತಿಳಿಸಲಾಗಿದೆ. ಈ ಯೋಜನೆಯಿಂದಾಗಿ ಲಕ್ಷಾಂತರ ಕುಟುಂಬಗಳಿಗೆ ಸಹಾಯವಾಗಲಿದೆ.
ಈಗಾಗಲೇ ಶಿಕ್ಷಣ ಇಲಾಖೆಯು ಇಂಥದ್ದೊಂದು ಯೋಜನೆ ತರುವಂತೆ ಸರ್ಕಾರದಲ್ಲಿ ಮನವಿ ಮಾಡಿದೆ. ಅದನ್ನು ಪರಿಗಣಿಸಿರುವ ಸರ್ಕಾರ ಮೊದಲನೇ ಹಂತದಲ್ಲಿ ಒಂದು ಕೋಟಿ ರೂ. ಅನ್ನು ಇಲಾಖೆಗೆ ನೀಡಲಿದೆ. ನಂತರದ ಹಂತಗಳಲ್ಲಿ ಬೇಡಿಕೆ ಹೆಚ್ಚಿದ್ದರೆ ಹೆಚ್ಚಿನ ಹಣವನ್ನು ಪೂರೈಸಲಾಗುವುದು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: Viral Video | ಯೋಗಿ ಆದಿತ್ಯನಾಥ್‌ಗೆ ಲವ್ ಅಟ್ ಫಸ್ಟ್ ಸೈಟ್! ವೈರಲ್ ಆಗ್ತಿದೆ ವಿಡಿಯೊ
ಅದಷ್ಟೇ ಅಲ್ಲದೆ ರಾಜ್ಯದಲ್ಲಿ ರಸ್ತೆಗಳನ್ನು ಅಭಿವೃದ್ಧಿಗೊಳಿಸಲು ಸರ್ಕಾರ ಚಿಂತಿಸುತ್ತಿದೆ. ಈವರೆಗೆ ಇರುವ ರಸ್ತೆಗಳ ಅಭಿವೃದ್ಧಿಗೆ ಒತ್ತು ಕೊಡಲಾಗುತ್ತಿತ್ತು. ಇನ್ನು ಮುಂದೆ ನೂತನ ರಸ್ತೆಗಳನ್ನೂ ನಿರ್ಮಿಸಲಾಗುವುದು. ಹಾಗೆಯೇ ಜಿಲ್ಲೆಯ ಪ್ರಮುಖ ರಸ್ತೆಗಳು ಹಾಗೂ ಹೆದ್ದಾರಿಗಳನ್ನು ಕನಿಷ್ಠ ಏಳು ಮೀಟರ್ ಅಗಲಕ್ಕೆ ವಿಸ್ತರಿಸಲಾಗುವುದು ಎಂದು ಸರ್ಕಾರಿ ಮೂಲಗಳು ಹೇಳಿವೆ. ತಜ್ಞರ ಪ್ರಕಾರ ಉತ್ತರ ಪ್ರದೇಶದ ಮುಂದಿನ ಆರ್ಥಿಕ ವರ್ಷದ ಬಜೆಟ್ ಸುಮಾರು ಏಳು ಲಕ್ಷ ಕೋಟಿ ರೂ.ನಷ್ಟಿರಲಿದೆ ಎನ್ನಲಾಗಿದೆ.