Site icon Vistara News

Rahul Gandhi Disqualified : ನಿಮ್ಮ ರೂಲ್ಸ್​ ಗಾಂಧಿ ಫ್ಯಾಮಿಲಿಗೆ ಅನ್ವಯವಾಗಲ್ಲ; ಕಾಂಗ್ರೆಸ್​ ಸಂಸದನ ಕಿಡಿ!

Your rules don't apply to the Gandhi family; Spark of Congress MP!

#image_title

ನವ ದೆಹಲಿ : ದೇಶದ ಸಾಮಾನ್ಯ ನಾಗರಿಕರಿಗಾಗಿ ಮಾಡಿರುವ ಕಾನೂನು ಗಾಂಧಿ ಕುಟುಂಬದವರಿಗೆ ಅನ್ವಯಿಸುವುದಿಲ್ಲ. ಹೀಗಾಗಿ ಸೂರತ್​ ಕೋರ್ಟ್​​ ರಾಹುಲ್​ ಗಾಂಧಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ್ದು ಹಾಗೂ ಸಂಸತ್​ನಿಂದ ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿದ್ದು ಸರಿಯಲ್ಲ ಎಂಬುದಾಗಿ ಕಾಂಗ್ರೆಸ್​ ರಾಜ್ಯ ಸಭಾ ಸದಸ್ಯ ಪ್ರಮೋದ್​ ತಿವಾರಿ ಅಭಿಪ್ರಾಯಪಟ್ಟಿದ್ದಾರೆ.

ನ್ಯೂಸ್ ಏಜೆನ್ಸಿ ಎಎನ್​ಐ ಜತೆ ಮಾತನಾಡಿದ ಅವರು, ರಾಹುಲ್​ ಗಾಂಧಿಯವರು ಗಾಂಧಿ ಕುಟುಂಬಕ್ಕೆ ಸೇರಿದವರಾಗಿರುವ ಕಾರಣ ಅವರನ್ನು ವಿಶೇಷ ನಾಗರಿಕರೆಂದು ಪರಿಗಣಿಸಬೇಕು. ಅವರ ಅಜ್ಜಿ ಹಾಗೂ ತಂದೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಹೀಗಾಗಿ ಕಾನೂನಿನಲ್ಲಿ ಅವರಿಗೆ ಕನಿಷ್ಠ ಶಿಕ್ಷೆ ವಿಧಿಸಬೇಕು. ಬಿಜೆಪಿ ರಾಹುಲ್ ಮೇಲಿನ ಭಯದಿಂದಲೇ ಅವರನ್ನು ಜೈಲಿಗೆ ಕಳುಹಿಸುವ ಪ್ರಯತ್ನ ಮಾಡಿದೆ ಎಂಬುದಾಗಿ ಇದೇ ವೇಳೆ ಆರೋಪಿಸಿದರು.

ಇದನ್ನೂ ಓದಿ : ರಾಹುಲ್ ಗಾಂಧಿ ಅನರ್ಹತೆ ಬೆನ್ನಲ್ಲೇ ವೈರಲ್ ಆಗ್ತಿದೆ ಬಿಜೆಪಿ ನಾಯಕಿ ಖುಷ್ಬು ಹಳೇ ಟ್ವೀಟ್​; ಶಿಕ್ಷೆ ಇಲ್ವಾ ಎನ್ನುತ್ತಿದ್ದಾರೆ ಕಾಂಗ್ರೆಸ್​ ನಾಯಕರು

ರಾಹುಲ್ ಗಾಂಧಿ ಅವರನ್ನು ಸಂಸತ್​ ಸದಸ್ಯತ್ವದಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ಅವರು ಈ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಅವರು ಬಿಜೆಪಿ ಸರಕಾರ ಅದಾನಿ ಹಗರದಲ್ಲಿ ಭಾಗಿಯಾಗಿದೆ. ರಾಹುಲ್ ಗಾಂಧಿ ಅದನ್ನು ಬಯಲುಗೊಳಿಸುತ್ತಾರೆ ಎಂಬ ಭಯದಲ್ಲಿ ಜೈಲಿಗೆ ಕಳುಹಿಸಲು ಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.

ತಿವಾರಿ ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯೆ ಕೊಟ್ಟಿದ್ದು, ಅವರೇನು ದೇಶದ ರಾಜನೇ ಎಂದು ಪ್ರಶ್ನಿಸಿದ್ದಾರೆ. ಪಕ್ಷದ ವಕ್ತಾರ ಶೆಹಜಾದ್ ಪೂನವಾಲಾ ಮಾತನಾಡಿ, ರಾಹುಲ್ ಗಾಂಧಿ ಕಾನೂನಿಗಿಂತ ದೊಡ್ಡವರೇ? ಸಂವಿಧಾನಕ್ಕೂ ಮೀರಿದವರೇ? ರಾಹುಲ್​ ಗಾಂಧಿಗೆ ಹಿಂದುಳಿದ ಜನಾಂಗವನ್ನು ನಿಂದನೆ ಮಾಡುವ ಅವಕಾಶ ಕೊಟ್ಟವರು ಯಾರು ಎಂದು ಅವರು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ ಅನರ್ಹತೆಗೆ ಕಾರಣರಾದವರು ಯಾರು?

ರಾಹುಲ್ ಗಾಂಧಿ ಅವರು ಲೋಕಸಭೆಯಿಂದ ಅನರ್ಹವಾಗಲು(Rahul Gandhi Disqualified) ಕಾರಣವಾದ ಆ ‘ಮೋದಿ’ಯ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ. 2019ರಲ್ಲಿ ಕರ್ನಾಟಕದ ಕೋಲಾರದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ರ್ಯಾಲಿಯೊಂದರಲ್ಲಿ ರಾಹುಲ್ ಗಾಂಧಿ ಅವರು, ಕಳ್ಳರ ಹೆಸರೆಲ್ಲ ಮೋದಿ ಅಡ್ಡಹೆಸರನ್ನು ಏಕೆ ಹೊಂದಿರುತ್ತವೆ ಎಂದು ಪ್ರಶ್ನಿಸಿದ್ದರು. ರಾಹುಲ್ ಗಾಂಧಿ ಅವರು ಹಿಂದುಳಿದ ಸಮುದಾಯಕ್ಕೆ ಅವಮಾನ ಮಾಡಿದ್ದಾರೆಂದು ಆರೋಪಿಸಿ, ಗುಜರಾತ್‌ನ ವ್ಯಕ್ತಿಯೊಬ್ಬರು ರಾಹುಲ್ ಗಾಂಧಿ ಅವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದರು. ಆ ವ್ಯಕ್ತಿಯೇ ‘ಪೂರ್ಣೇಶ್ ಮೋದಿ'(Purnesh Modi). ರಾಹುಲ್ ಅವರು ಲೋಕಸಭೆಯಿಂದ ಅನರ್ಹರಾಗಲು ಇವರೇ ನೇರ ಕಾರಣ!

ಯಾರು ಈ ಪೂರ್ಣೇಶ್ ಮೋದಿ?

57 ವರ್ಷದ ಪೂರ್ಣೇಶ್ ಮೋದಿ ಅವರು ಹಾಲಿ ಶಾಸಕ ಹಾಗೂ ಮಾಜಿ ಸಚಿವರಾಗಿದ್ದಾರೆ. 1965ರ ಅಕ್ಟೋಬರ್ 22ರಂದು ಜನಿಸಿದ್ದಾರೆ. ತಂದೆ ಈಶ್ವರಲಾಲ್ ಛೋಟಾಲಾಲ್ ಮೋದಿ ಮತ್ತು ತಾಯಿ ಹಸುಮತಿಬೆನ್ ಈಶ್ವರಿಲಾಲ್ ಮೋದಿ. ಬಿಕಾಂ ಹಾಗೂ ಕಾನೂನು ಪದವೀಧರರೂ ಹೌದು. ಇವರ ಪತ್ನಿ ಹೆಸರು ಬಿನಾಬೆನ್ ಮೋದಿ.

ಪೂರ್ಣೇಶ್ ಅವರು ಸೂರತ್ ಮೋಧ್ವನಿಕ್ ಸಮಸ್ತ ಪಂಚ್ ಟ್ರಸ್ಟೀ ಕೂಡ ಆಗಿದ್ದಾರೆ. ಜತೆಗೆ ಸಾರ್ವಜನಿಕ ಎಜುಕೇಷನ್ ಸೊಸೈಟಿಯ ಸದಸ್ಯರೂ ಹೌದು. ಸಮಸ್ತ ಗುಜರಾತ್ ಮೋಧ ಮೋದಿ ಸಮಾಜ ಟ್ರಸ್ಟ್ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ವೃತ್ತಿಯಿಂದ ನ್ಯಾಯವಾದಿಯಾಗಿರುವ ಪೂರ್ಣೇಶ್ ಅವರು 1984ರಲ್ಲಿ ಬಿಜೆಪಿಯನ್ನು ಸೇರ್ಪಡೆಯಾದರು. ಬೂತ್ ಮಟ್ಟದಿಂದ ಕಾರ್ಯನಿರ್ವಹಿಸಿದ ಪೂರ್ಣೇಶ್ ಅವರು ಬಳಿಕ ವಾರ್ಡ್‌ ಯುವ ಘಟಕದ ಅಧ್ಯಕ್ಷರಾದರು. 1995ರಲ್ಲಿ ಸೂರತ್ ಸಿಟಿ ಬಿಜೆಪಿ ಕಾರ್ಯಕಾರಿ ಸಮಿತಿಯ ಸದಸ್ಯರಾದರು. 2000 ಮತ್ತು 2005ರ ನಡುವೆ ಪೂರ್ಣೇಶ್ ಅವರು ಮುನ್ಸಿಪಲ್ ಸದಸ್ಯರಾಗಿದ್ದರು.

ಗುಜರಾತ್‌ ವಿಧಾನಸಭೆಗೆ ಆಯ್ಕೆ

ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2013ರಲ್ಲಿ ಸೂರತ್ ವೆಸ್ಟ್ ವಿಧಾನಸಭೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು. 2017ರ ವಿಧಾನಸಭೆ ಚುನಾವಣೆ ವೇಳೆಯೂ ಅವರು ಸೂರತ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಮುಂದೆ 2022ರಲ್ಲಿ ಕಾಂಗ್ರೆಸ್‌ನ ಸಂಜಯ್ ಆರ್ ಶಾ ಅವರನ್ನು ಸೋಲಿಸಿ ಮತ್ತೆ ಸೂರತ್ ಈಸ್ಟ್ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು.

ಇದನ್ನೂ ಓದಿ: Rahul Gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಿಗ್​ ಶಾಕ್​; ಸಂಸದ ಸ್ಥಾನದಿಂದ ಅನರ್ಹ

ರಾಹುಲ್ ಗಾಂಧಿ ಅವರು ಚುನಾವಣಾ ರ್ಯಾಲಿಯಲ್ಲಿ ಮೋದಿ ಸಮುದಾಯದ ವಿರುದ್ಧ ಅಪಮಾನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿ, ಮಾನನಷ್ಟ ಪ್ರಕರಣ ದಾಖಲಿಸಿದ್ದರು. ಸುದೀರ್ಘ ವಿಚಾರಣೆ ನಡೆದು ಸೂರತ್ ಕೋರ್ಟ್ ಅಂತಿಮವಾಗಿ, ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು 2 ವರ್ಷ ಶಿಕ್ಷೆಗೆ ಗುರಿಪಡಿಸಿದೆ.

Exit mobile version