ನವ ದೆಹಲಿ: ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ (Srinivas BV) ವಿರುದ್ಧ, ಯುವ ಕಾಂಗ್ರೆಸ್ ಅಸ್ಸಾಂ ಘಟಕದ ಮುಖ್ಯಸ್ಥೆ ಅಂಕಿತಾ ದತ್ತಾ (Angkita Dutta) ಅವರು ಇಲ್ಲಿದ ದಿಸ್ಪುರ ಪೊಲೀಸ್ ಠಾಣೆಯಲ್ಲಿ ಕಿರುಕುಳದ ದೂರು ನೀಡಿದ್ದಾರೆ. ‘ಶ್ರೀನಿವಾಸ್ ಬಿವಿ ಅವರು ಲಿಂಗ ತಾರತಮ್ಯ ಮಾಡುವವರು, ಕೋಮುವಾದಿ ಮತ್ತು ಮಹಿಳೆಯ ಘನತೆ/ನಮ್ರತೆಗೆ ಧಕ್ಕೆ ತಂದಿದ್ದಾರೆ’ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ‘ನಾನು ಶ್ರೀನಿವಾಸ್ ಬಿವಿ ಅವರಿಂದ ಸತತ ಆರು ತಿಂಗಳಿನಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇನೆ. ಅವರು ನಾನೊಬ್ಬಳು ಮಹಿಳೆ ಎಂಬ ಕಾರಣಕ್ಕೆ ತಾರತಮ್ಯ ಮಾಡುತ್ತಿದ್ದಾರೆ. ಅಶಿಷ್ಟ, ಅಸಂಸ್ಕಾರಯುತ ಪದ ಬಳಕೆ ಮಾಡಿ, ಅನುಚಿತವಾಗಿ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕರಿಗೆ ದೂರು ನೀಡಿದರೆ, ಮುಂದಿನ ಪರಿಣಾಮ ಎದುರಿಸಲು ಸಿದ್ಧರಾಗಬೇಕಾಗುತ್ತದೆ ಎಂಬಂಥ ಬೆದರಿಕೆಯನ್ನೂ ಒಡ್ಡಿದ್ದರು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇತ್ತೀಚೆಗೆ ಛತ್ತೀಸ್ಗಢ್ನ ರಾಯ್ಪುರದಲ್ಲಿ ನಡೆದಿದ್ದ ಕಾಂಗ್ರೆಸ್ ಸರ್ವಸದಸ್ಯರ ಸಮ್ಮೇಳನದಲ್ಲಿ ದೈಹಿಕವಾಗಿಯೂ ದೌರ್ಜನ್ಯ ಎಸಗಿದ್ದಾರೆ ಎಂದು ಅಂಕಿತಾ ದತ್ತಾ ಆರೋಪಿಸಿದ್ದಾರೆ. ‘‘ರಾಯ್ಪುರದಲ್ಲಿ ಕಾಂಗ್ರೆಸ್ನ ಸರ್ವಸದಸ್ಯರ ಸಭೆ ನಡೆದ ವೇಳೆ ಶ್ರೀನಿವಾಸ್ ಬಿವಿ ಅವರು ನನ್ನ ತೋಳನ್ನು ಗಟ್ಟಿಯಾಗಿ ಹಿಡಿದು ನಿಲ್ಲಿಸಿ, ‘ನನ್ನ ಬಗ್ಗೆ ಪಕ್ಷದ ವರಿಷ್ಠರಿಗೆ ದೂರು ನೀಡಿದರೆ ಪರಿಣಾಮ ನೆಟ್ಟಗೆ ಇರುವುದಿಲ್ಲ. ಕಾಂಗ್ರೆಸ್ನಲ್ಲಿ ನಿನಗೆ ಉಳಿಗಾಲ ಇರುವುದಿಲ್ಲ. ನಿನ್ನ ರಾಜಕೀಯ ವೃತ್ತಿ ಜೀವನವನ್ನು ಹಾಳುಮಾಡುತ್ತೇನೆ’ ಎಂದು ಹೆದರಿಸಿದ್ದರು’’ ಎಂದೂ ಅಂಕಿತಾ ದತ್ತಾ ದೂರಿನ ಪ್ರತಿಯಲ್ಲಿ ಬರೆದಿದ್ದಾರೆ. ‘ನನಗೆ ಶ್ರೀನಿವಾಸ್ ಬಿವಿ ಅವರಿಂದ ಆಗುತ್ತಿರುವ ತೊಂದರೆಯನ್ನು ಈಗಾಗಲೇ ವರಿಷ್ಠರ ಗಮನಕ್ಕೆ ತಂದಿದ್ದೇನೆ. ಹಲವು ಬಾರಿ ಧ್ವನಿ ಎತ್ತಿದರೂ ಕಾಂಗ್ರೆಸ್ ಹೈಕಮಾಂಡ್ ಏನೂ ಕ್ರಮ ಕೈಗೊಳ್ಳಲಿಲ್ಲ’ ಎಂಬುದನ್ನೂ ಅಂಕಿತಾ ದತ್ತಾ ಪೊಲೀಸರಿಗೆ ತಿಳಿಸಿದ್ದಾರೆ.
ಇತ್ತೀಚೆಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದ ಅಂಕಿತಾ ದತ್ತಾ, ‘ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ ಮತ್ತು ಉಸ್ತುವಾರಿ ಕಾರ್ಯದರ್ಶಿ ವರ್ಧನ್ ಯಾದವ್ ತಮಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದರು. ಅದರ ಬೆನ್ನಲ್ಲೇ ಕಾಂಗ್ರೆಸ್ನ ಅಸ್ಸಾಂ ಘಟಕ ಈಕೆಗೆ ಶೋಕಾಸ್ ನೋಟಿಸ್ ನೀಡಿತ್ತು. ಪಕ್ಷದ ವರಿಷ್ಠರು ನಿಮ್ಮ ಸಮಸ್ಯೆಯನ್ನು ಪರಿಹಾರ ಮಾಡುವುದಾಗಿ ಹೇಳಿದ್ದರೂ ನೀವು ಹೀಗೆ ಬಹಿರಂಗವಾಗಿ ಹೇಳಲು, ಟ್ವೀಟ್ ಮಾಡಲು ಕಾರಣವೇನು ಎಂದು ಕೇಳಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ನಾಯಕ ದೇವಬ್ರತ ಶೈಕೈ ‘ಆರು ತಿಂಗಳಿಂದ ತನಗೆ ತೊಂದರೆಯಾಗುತ್ತಿದೆ. ಆದರೆ ಎರಡು ದಿನಗಳ ಹಿಂದೆಯಷ್ಟೇ ಅಂಕಿತಾ ದತ್ತಾ ಅವರು ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಭೂಪನ್ ಕುಮಾರ್ ಬೋರಾಹ್ ಅವರಿಗೆ ಈ ಬಗ್ಗೆ ಹೇಳಿದ್ದಾರೆ’ ಎಂದಿದ್ದರು.