Site icon Vistara News

ಅದೆಷ್ಟೋ ಯುವಕರಿಗೆ ಮದುವೆಯಾಗದ ಸ್ಥಿತಿ ತಂದೊಡ್ಡಿದೆ ಬಿಜೆಪಿ; ಎನ್​ಸಿಪಿ ನಾಯಕ ಶರದ್​ ಪವಾರ್ ಅಸಮಾಧಾನ

After

ಪುಣೆ ಬಿಜೆಪಿ ಸಮಾಜದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ನ್ಯಾಶನಲಿಸ್ಟ್​ ಕಾಂಗ್ರೆಸ್​ ಪಾರ್ಟಿ (NCP) ಮುಖ್ಯಸ್ಥ ಶರದ್​ ಪವಾರ್​​ ಆರೋಪ ಮಾಡಿದ್ದಾರೆ. ಪುಣೆಯಲ್ಲಿ ಆಯೋಜಿಸಲಾಗಿದ್ದ ಎನ್​ಸಿಪಿ ಜನ ಜಾಗರ್ ಯಾತ್ರೆ ಅಭಿಯಾನ ಉದ್ಘಾಟನೆ ಮಾಡಿ ಮಾತನಾಡಿದ ಶರದ್​ ಪವಾರ್ ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರದಲ್ಲಿ ಈಗಿರುವ ಬಿಜೆಪಿ-ಶಿವಸೇನೆ ಶಿಂಧೆ ಬಣ ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಸರ್ಕಾರಗಳು ನಿರುದ್ಯೋಗ ಸೃಷ್ಟಿಸುತ್ತಿವೆ. ಈ ನಿರುದ್ಯೋಗ ಕಾರಣದಿಂದ ಯುವಕರಿಗೆ ಮದುವೆಯಾಗುತ್ತಿಲ್ಲ. ಅವರಿಗೆ ಹೆಣ್ಣು ಸಿಗುತ್ತಿಲ್ಲ ಎಂದು ಶರದ್​ ಪವಾರ್ ವಾಗ್ದಾಳಿ ನಡೆಸಿದರು. ‘ನಾನು ಎಲ್ಲಿಗೋ ಹೋಗುತ್ತಿದ್ದೆ. ಹಳ್ಳಿಯೊಂದರ ಮೂಲೆಯಲ್ಲಿ ಸುಮಾರು 25-30ವರ್ಷ ವಯಸ್ಸಿನ 15-20 ಯುವಕರು ಕುಳಿತಿದ್ದರು. ನಾನು ಅಲ್ಲಿ ನಿಂತು ಅವರ ಬಳಿ ಮಾತನಾಡಿದೆ. ಏನು ಕೆಲಸ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದೆ. ಅದಕ್ಕೆ ಉತ್ತರಿಸಿದ ಯುವಕರು, ನಮಗೆ ಎಲ್ಲೂ ಕೆಲಸ ಸಿಕ್ಕಿಲ್ಲ. ನಮ್ಮಲ್ಲಿ ಕೆಲವರು ಪದವಿಧರರು ಇದ್ದೇವೆ, ಇನ್ನೂ ಕೆಲವರು ಸ್ನಾತಕೋತ್ತರ ಪದವೀಧರರು ಇದ್ದೇವೆ ಎಂದು ಹೇಳಿದರು. ಆಗ ನಾನು, ಮದುವೆ ಆಗಿದೆಯೇ ಎಂದು ಪ್ರಶ್ನಿಸಿದೆ. ‘ಇಲ್ಲ’ ಎಂದು ಉತ್ತರಿಸಿದರು. ಯಾಕೆ ಮದುವೆ ವಯಸ್ಸಾದರೂ ಮದುವೆಯಾಗಿಲ್ಲ ಎಂದು ನಾನು ಕೇಳಿದ್ದಕ್ಕೆ ‘ನಾವು ನಿರುದ್ಯೋಗಿಗಳು, ನಮಗೆ ಹೆಣ್ಣು ಕೊಡಲು ಯಾರೂ ಒಪ್ಪುತ್ತಿಲ್ಲ’ ಎಂದು ಉತ್ತರಿಸಿದರು ಎಂದು ಶರದ್​ ಪವಾರ್​ ಹೇಳಿದರು.

‘ನಮ್ಮ ಮಹಾರಾಷ್ಟ್ರದ ಹಲವು ಹಳ್ಳಿಗಳಲ್ಲಿ ಯುವಕರಿಗೆ ಈ ಸಮಸ್ಯೆ ಕಾಡುತ್ತಿದೆ. ನಿರುದ್ಯೋಗ, ಹಣದುಬ್ಬರ ನೀಗಿಸಲು ಸರ್ಕಾರಗಳು ಕ್ರಮ ಕೈಗೊಳ್ಳುವುದನ್ನು ಬಿಟ್ಟು, ಸಮುದಾಯಗಳು, ಮತಗಳ ಮಧ್ಯೆ ಜಗಳ-ಗಲಭೆ ಸೃಷ್ಟಿಸುವ ಕೆಲಸವನ್ನು ಮಾಡುತ್ತಿವೆ. ಈ ಮೂಲಕ ಜನರ ಗಮನವನ್ನು ತಿರುಗಿಸಲು ಪ್ರಯತ್ನಿಸುತ್ತಿವೆ. ಬಿಜೆಪಿಗೆ ಚುನಾವಣೆ ಸಮಯದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ. ಅದನ್ನು ಮರೆಮಾಚಲು ಗಲಭೆ ಸೃಷ್ಟಿಸುತ್ತಿದೆ ಎಂದು ಶರದ್​ ಪವಾರ್ ಹೇಳಿದರು.

‘ನಮ್ಮ ರೈತರು ಉತ್ಪಾದನೆಯನ್ನು ಹೆಚ್ಚಿಸಿದ್ದರಿಂದ ಈ ದೇಶದ ಹಸಿವಿನ ಸಮಸ್ಯೆ ನೀಗಿಸಲು ಸಾಧ್ಯವಿದೆ. ಆದರೆ ಅಧಿಕಾರದಲ್ಲಿರುವ ಜನರು ರೈತರಿಗೆ ತಕ್ಕ ಪ್ರತಿಫಲ ನೀಡಲು ಸಿದ್ಧರಿಲ್ಲ. ಮಧ್ಯವರ್ತಿಗಳ ಹಿತಕಾಪಾಡುವುದರಲ್ಲೇ ಮಗ್ನರಾಗಿದ್ದಾರೆ. ಸಾಮಾನ್ಯ ಜನರನ್ನು ಬೆಲೆ ಏರಿಕೆ ಎಂಬ ಕೂಪಕ್ಕೆ ತಳ್ಳುತ್ತಿದ್ದಾರೆ’ ಎಂದು ಪವಾರ್​ ಹೇಳಿದರು. ಹಾಗೇ, ‘ಇಂದು ಮಹಾರಾಷ್ಟ್ರದಲ್ಲಿ ಕೈಗಾರಿಕೆಗಳು ನೆಲಕಚ್ಚುತ್ತಿವೆ. ಇಲ್ಲಿದ್ದ ಕೈಗಾರಿಕೆಗಳು ಬೇರೆಡೆಗೆ ಸ್ಥಳಾಂತರ ಆಗುತ್ತಿವೆ. ಉದ್ಯೋಗಾವಕಾಶ ಹೆಚ್ಚಿಸುವ ಹೊಸ ಉದ್ಯಮಗಳ ಸ್ಥಾಪನೆಗೆ ಅವಕಾಶವನ್ನೂ ಸರ್ಕಾರ ಸೃಷ್ಟಿಸಿಕೊಡುತ್ತಿಲ್ಲ’ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: Border Dispute | ಬೆಳಗಾವಿಗೆ ಕಳ್ಳ ಹೆಜ್ಜೆ ಇಟ್ಟ ಶರದ್‌ ಪವಾರ್‌ ಸಹೋದರನ ಪುತ್ರ; ವಿವಿಧ ಕಡೆ ಸಂಚಾರ, ಕನ್ನಡಿಗರ ಆಕ್ರೋಶ

Exit mobile version