Site icon Vistara News

ತೆಲಂಗಾಣ ಸಿಎಂ ಕೆಸಿಆರ್​​ಗೆ ಶೂ ಗಿಫ್ಟ್​ ಕೊಟ್ಟ ಆಂಧ್ರ ಮುಖ್ಯಮಂತ್ರಿ ಸಹೋದರಿ; ವೈ.ಎಸ್​.ಶರ್ಮಿಳಾ ಹಾಕಿದ ಸವಾಲೇನು?

YS Sharmila Gives Shoes as Gift for Telangana Chief Minister KCR

#image_title

ವೈಎಸ್​ಆರ್​ ತೆಲಂಗಾಣ ಪಾರ್ಟಿ ಅಧ್ಯಕ್ಷೆ ವೈ.ಎಸ್​.ಶರ್ಮಿಳಾ ಅವರು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಅವರಿಗೆ ಒಂದು ಸವಾಲು ಹಾಕಿದ್ದಾರೆ ಮತ್ತು ಒಂದು ಜತೆ ಶೂ ಗಿಫ್ಟ್​ ಕೊಡುವುದಾಗಿ ಹೇಳಿದ್ದಾರೆ. ಹಾಗೇ, ‘ಶೂ ಬಾಕ್ಸ್​​ನಲ್ಲಿ ಬಿಲ್​ ಕೂಡ ಹಾಗೇ ಇಟ್ಟಿದ್ದೇನೆ. ನಿಮಗೆ ಒಮ್ಮೆ ಬೂಟುಗಳ ಅಳತೆ ಸರಿ ಹೊಂದದೆ ಇದ್ದರೆ, ಈ ಬಿಲ್​ ತೋರಿಸಿ, ಬದಲಿಸಿಕೊಳ್ಳಬಹುದು’ ಎಂದು ಹೇಳಿದ್ದಾರೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್​.ಜಗನ್​ ರೆಡ್ಡಿ ಸಹೋದರಿ ವೈ.ಎಸ್​.ಶರ್ಮಿಳಾ ಅವರು ಸಿಎಂ ಕೆಸಿಆರ್​ ವಿರುದ್ಧ ತಿರುಗಿಬಿದ್ದಿದ್ದಾರೆ. ಕೆ.ಚಂದ್ರಶೇಖರ್​​ ಅವರ ವೈಫಲ್ಯಗಳನ್ನು ತಿಳಿಸುವ ಸಲುವಾಗಿಯೇ ತೆಲಂಗಾಣದಲ್ಲಿ ಪ್ರಜಾ ಪ್ರಸ್ಥಾನಂ ಪಾದಯಾತ್ರೆ ಕೂಡ ಹಮ್ಮಿಕೊಂಡಿದ್ದಾರೆ. ಶರ್ಮಿಳಾ ಪಾದಯಾತ್ರೆಗೆ ಕೆಲವು ಕಡೆ ಸರ್ಕಾರ ಅನುಮತಿ ಕೊಟ್ಟಿಲ್ಲ. ಇದು ಹಲವು ಬಾರಿ ಪ್ರತಿಭಟನೆಗೂ ಕಾರಣವಾಗಿದೆ.

ಇದೀಗ ಕೊನೇ ಹಂತದ ಪ್ರಜಾ ಪ್ರಸ್ಥಾನಂ ಪಾದಯಾತ್ರೆ ಪ್ರಾರಂಭಕ್ಕೂ ಮುನ್ನ ಹೈದರಾಬಾದ್​ನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ವೈ.ಎಸ್​.ಶರ್ಮಿಳಾ ‘ನಾನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಅವರಿಗೆ ಒಂದು ಜತೆ ಶೂಗಳನ್ನು ಉಡುಗೊರೆ ಕೊಡುತ್ತಿದ್ದೇನೆ ಮತ್ತು ಒಂದು ಚಾಲೆಂಜ್​ ಮಾಡುತ್ತಿದ್ದೇನೆ. ಮತ್ತೇನಿಲ್ಲ, ಅವರೂ ನನ್ನೊಂದಿಗೆ ಪಾದಯಾತ್ರೆಯಲ್ಲಿ ಸ್ವಲ್ಪ ದೂರ ನಡೆಯಲಿ. ಈ ಶೂ ಧರಿಸಿ ನನ್ನೊಂದಿಗೆ ಮೂರು ಕಿಲೋಮೀಟರ್​​ಗಳಷ್ಟು ದೂರವಾದರೂ ಹೆಜ್ಜೆ ಹಾಕಲಿ. ಆಗಲಾದರೂ ಅವರಿಗೆ ರಾಜ್ಯದ ಜನರ ಸಂಕಷ್ಟ ಅರ್ಥವಾಗುತ್ತದೆಯೆನೋ’ ಎಂದು ಹೇಳಿದ್ದಾರೆ. ಹಾಗೇ, ನಾನು ಕೊಟ್ಟ ಶೂ ಅಳತೆ ಸರಿ ಇಲ್ಲದೆ ಇದ್ದರೆ, ಬದಲಿಸಿಕೊಳ್ಳಿ ಎಂಬ ಸಂದೇಶ ಕೊಟ್ಟು, ಮಾಧ್ಯಮಗಳ ಎದುರು ಶೂ ಪ್ರದರ್ಶಿಸಿದ್ದಾರೆ.

‘ತೆಲಂಗಾಣದಲ್ಲಿ ಕಳೆದ 9ವರ್ಷಗಳಿಂದಲೂ ನಿರಂಕುಶ ಮತ್ತು ಅಸಮರ್ಥ ಆಡಳಿತವಿದೆ. ಈ ಆಡಳಿತದಡಿಗೆ ಆಗಿ ಸಮಾಜದ ಪ್ರತಿವರ್ಗವೂ ನರಳುತ್ತಿದೆ. ರೈತರು, ಯುವಕರು, ಮಹಿಳೆಯರು, ಶಿಕ್ಷಣ ಕ್ಷೇತ್ರ ಸೇರಿ ಪ್ರತಿಯೊಬ್ಬರಿಗೂ ಕೆಸಿಆರ್​ ನೀಡಿದ ಭರವಸೆಯನ್ನು ಈಡೇರಿಸಿಲ್ಲ. ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ರಾಜ್ಯದ ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ನಾನು ಹೇಳುತ್ತಿರುವುದು ಸುಳ್ಳು ಎಂದು ದೃಢಪಡಿಸಿದರೆ, ನಾನು ಕೆಸಿಆರ್​ ಕ್ಷಮೆ ಕೇಳಿ, ರಾಜಕೀಯದಿಂದ ಶಾಶ್ವತವಾಗಿ ನಿವೃತ್ತಿ ಪಡೆದು, ಮನೆಗೆ ಹೋಗುತ್ತೇನೆ. ಹಾಗೊಮ್ಮೆ ಜನರು ಸಂಕಷ್ಟದಲ್ಲಿ ಇರುವುದು ಸಾಬೀತಾದರೆ ಮುಖ್ಯಮಂತ್ರಿ ಕೆಸಿಆರ್​ ಅವರು ರಾಜೀನಾಮೆ ನೀಡಬೇಕು ಎಂದು ಅವರು ಹೇಳಿದ್ದಾರೆ.

Exit mobile version