ತೆಲಂಗಾಣ ರಾಜ್ಯ ಸರ್ಕಾರದ ವಿರುದ್ಧ ಆಮರಣಾಂತ ಉಪವಾಸ ಸತ್ಯಾಗ್ರಹ ಕುಳಿತಿದ್ದ ವೈಎಸ್ಆರ್ ತೆಲಂಗಾಣ ಪಾರ್ಟಿ ಮುಖ್ಯಸ್ಥೆ ವೈ.ಎಸ್.ಶರ್ಮಿಳಾರನ್ನು ಭಾನುವಾರ ತಡರಾತ್ರಿ ತೆಲಂಗಾಣ ಪೊಲೀಸರು ಬಂಧಿಸಿ, ಜ್ಯುಬ್ಲಿಹಿಲ್ನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೆಲಂಗಾಣದ ವರಂಗಲ್ ಜಿಲ್ಲೆಯಲ್ಲಿ ಪಾದಯಾತ್ರೆ ನಡೆಸಲು ಶರ್ಮಿಳಾ ಅನುಮತಿ ಕೇಳಿದ್ದರು. ಆದರೆ ರಾಜ್ಯ ಸರ್ಕಾರದ ಗೃಹ ಇಲಾಖೆ ಅವರಿಗೆ ಅನುಮತಿ ಕೊಟ್ಟಿರಲಿಲ್ಲ. ಅನುಮತಿ ನೀಡದೆ ಇದ್ದರೂ ಪಾದಯಾತ್ರೆಗೆ ಮುಂದಾಗಿದ್ದ ವೈಎಸ್ಆರ್ಟಿಪಿಯ ಹಲವು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ವೈ.ಎಸ್.ಶರ್ಮಿಳಾ ಶುಕ್ರವಾರ (ಡಿ.9)ದಿಂದ ತಮ್ಮ ಪಕ್ಷದ ಕಚೇರಿಯಲ್ಲಿಯೇ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು.
ಶರ್ಮಿಳಾ ತನ್ನ ಪಕ್ಷದ ಕಾರ್ಯಕರ್ತರ ಜತೆ ಡಿ.9ರಂದು ವಾರಂಗಲ್ನಲ್ಲಿ ಪಾದಯಾತ್ರೆ ನಡೆಸಲು ತೀರ್ಮಾನಿಸಿದ್ದರು. ಆದರೆ ಪೊಲೀಸರು ಅವಕಾಶ ಕೊಡಲೇಇಲ್ಲ. ಇದರಿಂದ ಆಕ್ರೋಶಗೊಂಡ ಶರ್ಮಿಳಾ ಹೈದರಾಬಾದ್ನ ಟ್ಯಾಂಕ್ ಬಂದ್ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ಪ್ರಾರಂಭ ಮಾಡಿದರು. ಅಲ್ಲಿಗೂ ಧಾವಿಸಿದ ಪೊಲೀಸರು ಆಕೆಯನ್ನು ಅಲ್ಲಿಂದ ಕಳಿಸಿದರು. ಇದರಿಂದ ಮತ್ತಷ್ಟು ಸಿಟ್ಟಾದ ಶರ್ಮಿಳಾ, ಜ್ಯುಬ್ಲಿ ಹಿಲ್ನಲ್ಲಿರುವ ತನ್ನ ಪಕ್ಷದ ಪ್ರಧಾನ ಕಚೇರಿ ಲೋಟಸ್ ಪೌಂಡ್ಗೆ ಬಂದು, ಅಲ್ಲಿಯೇ ಆಮರಣಾಂತ ಉಪವಾಸ ಸತ್ಯಾಗ್ರಹ ಶುರುಮಾಡಿದ್ದರು. ‘ಬಿಜೆಪಿ-ಕಾಂಗ್ರೆಸ್ನವರಿಗೆಲ್ಲ ಪಾದಯಾತ್ರೆಗೆ ಅವಕಾಶ ಕೊಡುತ್ತಾರೆ, ನಮಗೆ ಯಾಕೆ ಕೊಡುವುದಿಲ್ಲ’ ಎಂದು ಅವರು ತಕರಾರು ಎತ್ತಿದ್ದರು.
ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್.ರಾಜಶೇಖರ್ ರೆಡ್ಡಿ ಪುತ್ರಿ, ಈಗಿನ ಮುಖ್ಯಮಂತ್ರಿ ಜಗನ್ರೆಡ್ಡಿ ಸಹೋದರಿಯಾಗಿರುವ ವೈ.ಎಸ್.ಶರ್ಮಿಳಾ 2021ರ ಜುಲೈನಲ್ಲಿ ವೈಎಸ್ಆರ್ ತೆಲಂಗಾಣ ಪಕ್ಷವನ್ನು ಸ್ಥಾಪಿಸಿದ್ದಾರೆ. 2021ರ ಜುಲೈ 8ರಂದು ತನ್ನ ತಂದೆ ರಾಜಶೇಖರ್ ರೆಡ್ಡಿಯವರ ಜನ್ಮದಿನದಂದೇ ಶರ್ಮಿಳಾ ಈ ಪಕ್ಷವನ್ನು ಹುಟ್ಟುಹಾಕಿದ್ದರು. ಅಂದಿನಿಂದಲೂ ಶರ್ಮಿಳಾಗೆ ಅವರ ತಾಯಿ ವೈ.ಎಸ್.ವಿಜಯಲಕ್ಷ್ಮೀ ಬೆಂಬಲವಾಗಿ ನಿಂತಿದ್ದಾರೆ. ಮಗಳು ಪ್ರಾರಂಭಿಸಿದ ಪಕ್ಷಕ್ಕೆ ಸೇರ್ಪಡೆಯಾಗಲೆಂದೇ ಅವರು ತನ್ನ ಪುತ್ರ ಜಗನ್ರೆಡ್ಡಿಯ ವೈಎಸ್ಆರ್ಸಿಪಿಯನ್ನು ತೊರೆದಿದ್ದಾರೆ. ತೆಲಂಗಾಣ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ದುರಾಡಳಿತದ ವಿರುದ್ಧ ಹೋರಾಡುವುದೇ ತಮ್ಮ ಗುರಿ ಎಂದು ವೈ.ಎಸ್.ಶರ್ಮಿಳಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: YS Sharmila | ಆಂಧ್ರ ಸಿಎಂ ಸಹೋದರಿ ಸಹಿತ ಕಾರ್ ಟೋಯಿಂಗ್ ಮಾಡಿದ ಹೈದರಾಬಾದ್ ಪೊಲೀಸರು!