ಹೈದರಾಬಾದ್: ಯುವಜನ ಶ್ರಮಿಕ ರೈತು ತೆಲಂಗಾಣ ಪಾರ್ಟಿ (ವೈಎಸ್ಆರ್ಟಿಪಿ) ಮುಖ್ಯಸ್ಥೆ, ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಹೋದರಿ ವೈ.ಎಸ್.ಶರ್ಮಿಳಾ ಅವರನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಬಿಆರ್ಎಸ್ (ಭಾರತೀಯ ರಾಷ್ಟ್ರ ಸಮಿತಿ) ಪಕ್ಷದ, ಮೆಹಬೂಬಾಬಾದ್ ಶಾಸಕ ಶಂಕರ್ ನಾಯ್ಕ್ ವಿರುದ್ಧ ಶರ್ಮಿಳಾ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂಬ ಆರೋಪದಡಿ ಅವರನ್ನು ಬಂಧಿಸಲಾಗಿದೆ. ಶಂಕರ್ ನಾಯ್ಕ್ರನ್ನು ಶರ್ಮಿಳಾ ಅಪಮಾನ ಮಾಡಿದ್ದಾರೆಂದು ಆರೋಪಿಸಿ ಬಿಆರ್ಎಸ್ ಬೆಂಬಲಿಗರು ಮೆಹಬೂಬಾಬಾದ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಅದರ ಬೆನ್ನಲ್ಲೇ ಶರ್ಮಿಳಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೇ, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಇನ್ನಷ್ಟು ಹದಗೆಡದಿರಲಿ ಎಂಬ ಕಾರಣಕ್ಕೆ ಅವರನ್ನು ಹೈದರಾಬಾದ್ಗೆ ಕರೆದೊಯ್ಯಲಾಗಿದೆ.
ತೆಲಂಗಾಣದಲ್ಲಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸುವ ಸಲುವಾಗಿ ವೈ.ಎಸ್.ಶರ್ಮಿಳಾ ರಾಜ್ಯಾದ್ಯಂತ ಪ್ರಜಾ ಪ್ರಸ್ಥಾನಂ ಪಾದಯಾತ್ರೆ ನಡೆಸುತ್ತಿದ್ದಾರೆ. ಹಾಗೇ, ಶನಿವಾರ ಮೆಹಬೂಬಾಬಾದ್ನಲ್ಲಿ ಈ ಯಾತ್ರೆ ನಡೆಸುತ್ತ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ವೈ.ಎಸ್.ಶರ್ಮಿಳಾ ‘ತನ್ನ ಕ್ಷೇತ್ರದ ಜನರಿಗೆ ಉತ್ತಮ ಆಡಳಿತ ಕೊಡದ ಶಾಸಕ ಶಂಕರ್ ನಾಯ್ಕ ಅವರನ್ನು ನಾವು ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ನಮ್ಮನ್ನು ಅತ್ಯಂತ ಕೆಳಮಟ್ಟದ ಭಾಷೆ, ಶಬ್ದಗಳ ಮೂಲಕ ನಿಂದಿಸಿದ್ದಾರೆ. ಭ್ರಷ್ಟಾಚಾರ ಮತ್ತು ಭೂಕಬಳಿಕೆಯ ಹೊರತಾಗಿ ಇನ್ನೇನೂ ಮಾಡದ, ಅಭಿವೃದ್ಧಿ ವಿಚಾರದಲ್ಲಿ ಸಂಪೂರ್ಣ ವಿಫಲರಾದ ಈ ಶಾಸಕ ಮತ್ತು ಇಂಥ ನಾಯಕರನ್ನು ಅದ್ಯಾವ ಶಬ್ದವಿಟ್ಟು ಕರೆಯಬೇಕೋ ನನಗೆ ಅರ್ಥವಾಗುತ್ತಿಲ್ಲ’ ಎಂದು ಹೇಳಿದ್ದರು.
ಇದನ್ನೂ ಓದಿ: ತೆಲಂಗಾಣ ಸಿಎಂ ಕೆಸಿಆರ್ಗೆ ಶೂ ಗಿಫ್ಟ್ ಕೊಟ್ಟ ಆಂಧ್ರ ಮುಖ್ಯಮಂತ್ರಿ ಸಹೋದರಿ; ವೈ.ಎಸ್.ಶರ್ಮಿಳಾ ಹಾಕಿದ ಸವಾಲೇನು?
ಅಷ್ಟೇ ಅಲ್ಲ, ‘ಈ ಶಾಸಕ ಒಬ್ಬ ಲಂಚಕೋರ. ಇದೇ ಕಾರಣಕ್ಕೆ ಕೈಯಲ್ಲಿದ್ದ ಕೆಲಸ ಕಳೆದುಕೊಂಡು, ಬಳಿಕ ಶಾಸಕನಾದ. ಶಾಸಕನಾದ ಮೇಲೆ ಭೂಮಿ ಕಬಳಿಸಿದೆ. ಲಿಕ್ಕರ್, ಗುಟ್ಕಾ, ಮರಳು ಮತ್ತು ಬೆಲ್ಲದ ಮಾಫಿಯಾ ಮಾಡುತ್ತಿದ್ದಾನೆ’ ಎಂದು ವೈ.ಎಸ್.ಶರ್ಮಿಳಾ ಆರೋಪಿಸಿದ್ದರು. ಅದರ ಬೆನ್ನಲ್ಲೇ ಬಿಆರ್ಎಸ್ ಬೆಂಬಲಿಗರು, ಕಾರ್ಯಕರ್ತರು ಪ್ರತಿಭಟನೆ ಶುರು ಮಾಡಿದ್ದರು.