Site icon Vistara News

ಎನ್‌ಡಿಎ ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮುಗೆ Z+ ಕೆಟಗರಿ ಭದ್ರತೆ

Droupadi Murmu

ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಕೇಂದ್ರ ಸರ್ಕಾರ ಈಗ Z+ ಕೆಟಗರಿ ಭದ್ರತೆ ನೀಡಿದೆ. ಅದರ ಪ್ರಕಾರ ಇಂದು (ಜೂ.22) ಬೆಳಗ್ಗೆಯಿಂದ ದ್ರೌಪದಿ ಮುರ್ಮು ಕೇಂದ್ರೀಯ ಮೀಸಲು ಪಡೆ (CRPF)ಯಿಂದ ಝಡ್‌ ಪ್ಲಸ್‌ ಭದ್ರತೆ ಪಡೆಯಲಿದ್ದಾರೆ. ದ್ರೌಪದಿ ಮುರ್ಮು ಒಡಿಶಾ ಮೂಲದವರಾಗಿದ್ದು, ಜಾರ್ಖಂಡದ ಮಾಜಿ ರಾಜ್ಯಪಾಲೆ. ಬುಡಕಟ್ಟು ಜನಾಂಗದ ಪ್ರಭಾವಿ ರಾಜಕಾರಣಿಯಾಗಿದ್ದರೂ, ಅಜಾತಶತ್ರು ಎನ್ನಿಸಿಕೊಂಡವರು. ಹಾಗೇ, ರಾಷ್ಟ್ರಪತಿ ಹುದ್ದೆಗೆ ಇವರು ನಿರೀಕ್ಷಿತ ಅಭ್ಯರ್ಥಿಯೇ ಆಗಿದ್ದಾರೆ.

ಎನ್‌ಡಿಒ ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ರಾಜಕೀಯ ಗಣ್ಯರು ಶುಭಕೋರಿದ್ದಾರೆ. ನರೇಂದ್ರ ಮೋದಿ ಟ್ವೀಟ್‌ ಮಾಡಿ, ʼದ್ರೌಪದಿ ಮುರ್ಮು ತಮ್ಮ ಜೀವನವನ್ನು ಸಮಾಜ ಸೇವೆ ಮತ್ತು ಬಡವರ ಕಲ್ಯಾಣಕ್ಕೆ ಮುಡಿಪಾಗಿಟ್ಟವರು. ದೀನ-ದಲಿತರು, ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಆಡಳಿತದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಹಾಗೇ, ಜಾರ್ಖಂಡ ರಾಜ್ಯಪಾಲರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಈ ದೇಶದ ಅತ್ಯುತ್ತಮ ರಾಷ್ಟ್ರಪತಿ ಆಗುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.

ರಾಷ್ಟ್ರಪತಿ ಹುದ್ದೆಗೆ ತಮ್ಮನ್ನು ಆಯ್ಕೆ ಮಾಡುತ್ತಿದ್ದಂತೆ ದ್ರೌಪದಿ ಮುರ್ಮು ಕೂಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ. ʼನಾನೊಬ್ಬಳು ಬುಡಕಟ್ಟು ಜನಾಂಗದ ಮಹಿಳೆ. ನನ್ನನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ ಎಂಬ ಸಣ್ಣ ಕಲ್ಪನೆಯೂ ಇರಲಿಲ್ಲ. ನಿಜಕ್ಕೂ ಅಚ್ಚರಿಯಾಗಿದೆ ಮತ್ತು ಖುಷಿಯಾಗಿದೆ. ನನ್ನಂಥ ಬುಡಕಟ್ಟು ಜನಾಂಗದ ಮಹಿಳೆಯನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡುವ ಮೂಲಕ ಬಿಜೆಪಿ ತನ್ನ ʼಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ʼ ಘೋಷಣೆಗೆ ಬದ್ಧವಾಗಿದೆ ಎಂಬುದನ್ನು ಸಾಕ್ಷೀಕರಿಸಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: President Election | ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು

Exit mobile version