Site icon Vistara News

ಮರುಪ್ರಸಾರವಾಗುತ್ತಿರುವ ಉಪನಿಷದ್‌ ಗಂಗಾ, ಅಂದು ನೋಡದಿದ್ದವರಿಗೆ ಮತ್ತೊಂದು ಅವಕಾಶ!

ನವ ದೆಹಲಿ: ವೇದಾಂತದ ಸಂದೇಶವನ್ನು ಮನೆಮನೆಗೆ,‌ ಮನಮನಕ್ಕೆ ತಲುಪಿಸುವ ಉದ್ದೇಶದ ಉಪನಿಷದ್‌ ಗಂಗಾ ಎಂಬ ಹಿಂದಿ ಧಾರಾವಾಹಿ ಮತ್ತೆ ಮರುಪ್ರಸಾರವಾಗುತ್ತಿದೆ. ಚಿನ್ಮಯ ಮಿಷನ್‌ನ ಸ್ವಾಮಿ ತೇಜೋಮಯಾನಂದರ ಕಲ್ಪನೆಯ, ಚಾಣಕ್ಯ ಧಾರಾವಾಹಿ ಖ್ಯಾತಿಯ ಡಾ.‌ ಚಂದ್ರಪ್ರಕಾಶ್‌ ದ್ವಿವೇದಿಯವರ ರಚನೆ ಹಾಗೂ ನಿರ್ದೇಶನದ ಈ ಧಾರಾವಾಹಿ ಈ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿತ್ತು.

ಈಗ ಮರುಪ್ರಸಾರವಾಗುತ್ತಿರುವ ಉಪನಿಷದ್‌ ಗಂಗಾ ಧಾರಾವಾಹಿಯನ್ನು “ಚಿನ್ಮಯ ಚಾನಲ್‌” ಎಂಬ ಯೂಟ್ಯೂಬ್‌ ಚಾನಲ್‌ನಲ್ಲಿ ವೀಕ್ಷಿಸಬಹುದು.

ಏನಿದು ಉಪನಿಷದ್‌ ಗಂಗಾ?

ಮಹಾಭಾರತ ಹಾಗೂ ರಾಮಾಯಣ ಧಾರವಾಹಿಗಳಂತೆಯೇ ಇದು ಕೂಡ ಭಾರತೀಯ ಪಾರಂಪರಿಕ ಕಥೆಗಳನ್ನು ಆಧರಿಸಿ ರೂಪಿಸಿದಂಥ ಧಾರವಾಹಿ ಇದಾಗಿದೆ. ಪ್ರಾಚೀನ ಭಾರತದ ನಾಟಕದ‌ ಶೈಲಿಯಲ್ಲಿ ನಿರೂಪಿತಗೊಂಡಿರುವ ಇದರಲ್ಲಿ ಉಪನಿಷತ್ತುಗಳ ಮಹತ್ವದ ನೀತಿ ಕಥೆಗಳನ್ನು ಹೇಳಲಾಗಿದೆ. 11 ಮಾರ್ಚ್ 2012ರಿಂದ‌ ಆರಂಭವಾಗಿ ಪ್ರತಿ‌‌‌ ಭಾನುವಾರದಂದು ದೂರದರ್ಶನ ಚಾನೆಲ್‌ನಲ್ಲಿ ಪ್ರಸಾರ‌ಗೊಂಡಿತು. ಒಟ್ಟು 52 ಕಂತುಗಳಲ್ಲಿ ಭಾರತೀಯ ಸಂಸ್ಕೃತಿ, ಇತಿಹಾಸ, ಪರಂಪರೆ ಹಾಗೂ ಜ್ಞಾನದ ಬಗ್ಗೆ ಕಥೆಗಳ ಮೂಲಕ ಬೆಳಕು‌ ಚೆಲ್ಲಿದೆ.

ರಾಜಾ ಹರಿಶ್ಚಂದ್ರ, ಮಹರ್ಷಿ ಯಾಜ್ಞವಲ್ಕ್ಯ, ದಾರಾ ಶಿಖೋ, ಶಂಕರಾಚಾರ್ಯರು, ಮೀರಾಬಾಯಿ ಹೀಗೆ ಪ್ರಾಚೀನ ಭಾರತದ ಮಹನೀಯರ ಜೀವನದ ಘಟನೆಗಳ ಮೂಲಕ ವೇದ, ಕರ್ಮ,‌‌ ಪುರುಷಾರ್ಥಗಳು, ಬಂಧನ, ಮುಕ್ತಿ, ಸೃಷ್ಟಿ ಮುಂತಾದ ಅನೇಕ‌ ತತ್ತ್ವಗಳ ಅರ್ಥವನ್ನು ವಿವರಿಸಲಾಗಿದೆ.

ಸ್ವಾಮೀ ಅದ್ವಯಾನಂದರು ಪ್ರಕಾರ “ಭಾರತೀಯ ಜ್ಞಾನಸಾಗರದ ಪೂರ್ತಿ ಆಳ-ಅಗಲವನ್ನು ಮುಟ್ಟುವ ಪ್ರಯತ್ನವೇ” ಉಪನಿಷದ್‌ ಗಂಗಾ ಧಾರಾವಾಹಿಯ ಜೀವಾಳ.

ಧಾರಾವಾಹಿಗೆ ಸಂದ ಪ್ರಶಸ್ತಿ:

12 ನೇ ನ್ಯಾಷನಲ್‌ ಟೆಲಿ ಅವಾರ್ಡ್ಸ್‌ನಲ್ಲಿ 8 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದು, 3 ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ:
ಉತ್ತಮ ಸಂಭಾಷಣೆ: ಚಂದ್ರಪ್ರಕಾಶ್ ದ್ವಿವೇದಿ
ಉತ್ತಮ ಹಿನ್ನೆಲೆ‌ ಸಂಗೀತ: ಆಮೋದ್ ಭಟ್
ಉತ್ತಮ ಕೋರಿಯೋಗ್ರಫಿ: ಭೂಷಣ್ ಲಕಂದ್ರಿ

ಧಾರಾವಾಹಿಯ ತಾರಾಗಣ:

ವಿಭಿನ್ನವಾದ ಈ ಧಾರಾವಾಹಿಯಲ್ಲಿ ರಂಗಕರ್ಮಿಗಳಾದ ಅನೇಕ ದಿಗ್ಗಜರು ಸೇರಿದಂತೆ ಯುವಪ್ರತಿಭೆಗಳು ಕೂಡ ಅಭಿನಯಿಸಿದ್ದಾರೆ. ಕೆ.‌ಕೆ.‌ ರೈನಾ, ಅಭಿಮನ್ಯು ಸಿಂಗ್, ಝಾ಼ಕಿರ್‌ ಹುಸೇನ್, ದೇವ್ ಖುಬ್ನಾನಿ, ರಸಿಕಾ‌ ದುಗ್ಗಲ್, ಔರೋಶಿಕಾ‌ ದೇವ್, ಹುಮಾ ಕುರೇಷಿ ಹಾಗೂ ಇತರರು ತಾರಗಣದಲ್ಲಿದ್ದಾರೆ.

ಯಾವಾಗ ಮರುಪ್ರಸಾರ?

ಪ್ರತಿ ಗುರುವಾರದಿಂದ ಭಾನುವಾರದವರೆಗೆ ಚಿನ್ಮಯ ಚಾನಲ್‌ ಯೂಟ್ಯೂಬ್‌ನಲ್ಲಿ ಈ ಧಾರಾವಾಹಿ ಪ್ರಸಾರವಾಗಲಿದೆ.

ಇದನ್ನೂ ಓದಿ: ಮಗಳು ಜಾನಕಿ ಧಾರಾವಾಹಿ | ಮುಂದುವರಿದ ಅಧ್ಯಾಯ ಇನ್ನು ನಿಮ್ಮ ಅಂಗೈಯಲ್ಲೆ!

Exit mobile version