ಕನ್ನಡತಿ ಧಾರಾವಾಹಿ ಖ್ಯಾತಿಯ ನಟಿ ರಂಜನಿ ರಾಘವನ್ (Ranjani Raghavan) ದೇಶವನ್ನೂ ಸುತ್ತುತ್ತಾರೆ..ಕೋಶವನ್ನೂ ಓದುತ್ತಾರೆ..ಪುಸ್ತಕವನ್ನೂ ಬರೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಪ್ಡೇಟ್ ಕೂಡ ಕೊಡುತ್ತಿರುತ್ತಾರೆ. ಕನ್ನಡತಿ ಧಾರಾವಾಹಿಯಿಂದ ಇವರ ಖ್ಯಾತಿ ಹೆಚ್ಚಿ, ಅಪಾರ ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ. ಇತ್ತೀಚೆಗಷ್ಟೇ ಯುರೋಪ್ಗೆ ಇಂಟರ್ನ್ಯಾಶನಲ್ ಟ್ರಿಪ್ ಹೋಗಿ ಬಂದಿರುವ ರಂಜನಿ ರಾಘವನ್ ಇದೀಗ ಮಧ್ಯಪ್ರದೇಶ ಪ್ರವಾಸದಲ್ಲಿದ್ದಾರೆ. ಅಲ್ಲಿನ ಉಜ್ಜಯಿನಿಗೆ ಭೇಟಿ ನೀಡಿ, ಶ್ರೀ ಮಹಾಕಾಳೇಶ್ವರನ ದರ್ಶನ ಪಡೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇದರ ಫೋಟೋ-ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ.
ಚೂಡಿದಾರ್ ಧರಿಸಿ ದೇಗುಲಕ್ಕೆ ತೆರಳಿರುವ ರಂಜನಿ ರಾಘವನ್ ಹಣೆ ಮೇಲೆ ಮಹಾಕಾಲ ಎಂದು ಬರೆದು, ತ್ರಿಶೂಲದ ಚಿತ್ರವಿರುವ ತಿಲಕ (ತ್ರಿಪುಂಡ್) ಹಾಕಿಕೊಂಡಿದ್ದಾರೆ. ಉಜ್ಜಯಿನಿ ದೇಗುಲದ ಒಂದಷ್ಟು ಚೆಂದನೆಯ ಫೋಟೋ ಪೋಸ್ಟ್ ಮಾಡಿಕೊಂಡು ‘ ಪುರಾಣ ಪ್ರಸಿದ್ಧ ಉಜ್ಜಯಿನಿಯ ಮಹಾಕಾಲೇಶ್ವರ ಜ್ಯೋತಿರ್ಲಿಂಗ ದರ್ಶನ ಮಾಡಿದೆ. ಶಿಪ್ರಾ ನದಿಯ ಆರತಿಯಲ್ಲಿ ಭಾಗಿಯಾಗಿ ಮನಸ್ಸು ಫುಲ್ ಖುಷ್ ಆಗಿದೆ. ಕಾಳಿದಾಸನ “ಮೇಘದೂತ” ಕಾವ್ಯದಲ್ಲಿ ಬರುವ ಉಜ್ಜಯಿನಿಯ ವರ್ಣನೆಯನ್ನ ಬೇರೆ ಲೈಟ್ ಆಗಿ ಓದ್ಕೊಂಡು ಹೋದಿದ್ದೆ, ಹಾಗಾಗಿ ಇನ್ನೂ ಥ್ರಿಲ್ ಆಗೋಯ್ತು!’ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಹಾಗೇ ಶಿಪ್ರಾ ನದಿಯಲ್ಲಿ ತಾವೂ ಆರತಿ ಮಾಡಿದ ಪುಟ್ಟ ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ.
ನಟಿ ರಂಜನಿ ರಾಘವನ್ ಪುಟ್ಟಗೌರಿ ಮದುವೆ ಮೂಲಕ ಹೆಸರು ಮಾಡಿದರು. ಆದರೆ ಕನ್ನಡತಿ ಧಾರಾವಾಹಿ ಅವರಿಗೆ ಖ್ಯಾತಿಯ ಇನ್ನೊಂದು ಆಯಾಮವನ್ನೇ ಪರಿಚಯಿಸಿತು. ಕನ್ನಡ ಶಿಕ್ಷಕಿಯಾಗಿ, ಭುವನೇಶ್ವರಿ ಎಂಬ ಪಾತ್ರ ನಿಭಾಯಿಸಿದ್ದ ರಂಜನಿ ರಾಘವನ್ರನ್ನು ಅಭಿಮಾನಿಗಳು ‘ಭುವಿ’ ಎಂದೇ ಕರೆಯತೊಡಗಿದ್ದಾರೆ. ಭುವಿ ಮತ್ತು ಹರ್ಷಾ ಜೋಡಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ಈ ಧಾರಾವಾಹಿ ಇದೇ ವರ್ಷ ಫೆಬ್ರವರಿಯಲ್ಲಿ ಮುಕ್ತಾಯವಾಗಿದೆ. ಹಾಗಿದ್ದಾಗ್ಯೂ ರಂಜನಿ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿ ಇದ್ದಾರೆ. ಆಗಾಗ ತಮ್ಮ ಜೀವನದ ಅಪ್ಡೇಟ್ಸ್ ಕೊಡುತ್ತಿರುತ್ತಾರೆ. ನಟಿ ರಂಜನಿಗೆ ಇನ್ಸ್ಟಾಗ್ರಾಂನಲ್ಲಿ 1 ಮಿಲಿಯನ್ ಫಾಲೋವರ್ಸ್ ಇದ್ದಾರೆ.