Site icon Vistara News

ಇಂದು ವಿಶ್ವ ಚದುರಂಗದಾಟದ ದಿನ (International Chess Day); ಈ ದಿನ ಚೆಸ್​ ಸ್ಪರ್ಧಿಗಳಿಗೆ ವಿಶೇಷ

international chess day

ವಿವೇಕ್​ ಮಹಾಲೆ ಶಿವಮೊಗ್ಗ

ಚೆಸ್, ಅತ್ಯಂತ ಹಳೆಯ ಮತ್ತು ಅತ್ಯಂತ ಜನಪ್ರಿಯ ಬೋರ್ಡ್ ಆಟಗಳಲ್ಲಿ ಒಂದು. 6ನೇ ಶತಮಾನದಲ್ಲಿ ಭಾರತದಲ್ಲಿ ಮೊದಲು ಚೆಸ್ ಕಾಣಿಸಿಕೊಂಡಿತು ಎಂದು ಹೇಳಲಾಗುತ್ತದೆ. ಆನಂತರ 10 ನೇ ಶತಮಾನದ ವೇಳೆಗೆ ಏಷ್ಯಾದಿಂದ ಮಧ್ಯಪ್ರಾಚ್ಯ ಮತ್ತು ಯುರೋಪ್​ಗೆ ಹರಡಿತು. ಕನಿಷ್ಠ 15 ನೇ ಶತಮಾನದಿಂದಲೂ ಅದರ ಜನಪ್ರಿಯತೆಯಿಂದಾಗಿ ಚೆಸ್ ಅನ್ನು ರಾಯಲ್ ಗೇಮ್ ಎಂದು ಕರೆಯಲಾಗುತ್ತದೆ. ನಿಯಮ ಮತ್ತು ಸೆಟ್ ವಿನ್ಯಾಸವು 19ನೇ ಶತಮಾನದ ಆರಂಭದಲ್ಲಿ ನಿಧಾನವಾಗಿ ವಿಕಸನಗೊಂಡಿತು. 20ನೇ ಶತಮಾನದಲ್ಲಿ ವೃತ್ತಿಪರ ಮತ್ತು ರಾಜ್ಯ- ಪ್ರಾಯೋಜಿತ ಆಟಗಾರರು ಅಧಿಕೃತವಾಗಿ ಗುರುತಿಸಲ್ಪಟ್ಟು ಚೆಸ್ ಆಸಕ್ತಿಯಲ್ಲಿ ಸ್ಫೋಟಕ ಬೆಳವಣಿಗೆ ಕಂಡಿತು. 

ಐರೋಪ್ಯ ದೇಶಗಳಲ್ಲಿ ಚೆಸ್ ಹೆಚ್ಚು ಪ್ರಚಲಿತದಲ್ಲಿದೆ. ಆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಚೆಸ್ ಆಟಕ್ಕೆ ಮರ್ಯಾದೆ ಕಮ್ಮಿ. ಆದರೆ, ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ವಿಶ್ವನಾಥನ್ ಆನಂದ್ ಅವರಿಂದ ಭಾರತದಲ್ಲಿ ಚೆಸ್ ಜನಪ್ರಿಯತೆ ಗಳಿಸಿತು. ಬಹುತೇಕ ರಾಷ್ಟ್ರಗಳಲ್ಲಿ ಚೆಸ್ ಆಟವನ್ನು ಪಠ್ಯದಲ್ಲಿ ಅಳವಡಿಸುವ ಮೂಲಕ ಮಕ್ಕಳಲ್ಲಿ ಚೆಸ್ ಬಗ್ಗೆ ಆಸಕ್ತಿ ಮೂಡಿಸುವ ಪ್ರಯತ್ನ ನಡೆದಿದೆ. ನಮ್ಮ ದೇಶದಲ್ಲಿ ಗುಜರಾತ್ ಮತ್ತು ತಮಿಳುನಾಡು ರಾಜ್ಯಗಳ ಶಾಲೆಗಳಲ್ಲಿ ಚೆಸ್ ಕಡ್ಡಾಯಗೊಳಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಚೆಸ್ ಸ್ಪರ್ಧೆ ಆಯೋಜಿಸಿ ಪ್ರೋತ್ಸಾಹಿಸಲಾಗುತ್ತಿದೆ. ಆದರೆ, ಈ ಆಟವನ್ನು ಶಾಲೆಗಳಿಗೆ ಕಡ್ಡಾಯಗೊಳಿಸುವ ಶಿಕ್ಷಣ ಸಚಿವರ ಭರವಸೆ ಇನ್ನೂ ಈಡೇರಿಲ್ಲ.

ಚೆಸ್ ಆಟದಲ್ಲಿ ಅತ್ಯುನ್ನತ ಪದವಿ ಅಂದ್ರೆ ಗ್ರ್ಯಾಂಡ್ ಮಾಸ್ಟರ್. ರಷ್ಯಾದಲ್ಲಿ ಅತಿ ಹೆಚ್ಚು 256 ಗ್ರ್ಯಾಂಡ್ ಮಾಸ್ಟರ್​ಗಳಿದ್ದರೆ, ಭಾರತದಲ್ಲಿ ಇದರ ಸಂಖ್ಯೆ ಇನ್ನೂ ಮೂರಂಕಿ ದಾಟಿಲ್ಲ. ಕರ್ನಾಟಕದಲ್ಲಿ ಗ್ರ್ಯಾಂಡ್ ಮಾಸ್ಟರ್ ಗಳ ಸಂಖ್ಯೆ ಎರಡಂಕಿ ದಾಟಿಲ್ಲ. ಇದಕ್ಕೆ ಕಾರಣ, ಚೆಸ್ ಕಲಿಸಲು ಅಚ್ಚುಕಟ್ಟಾದ ಒಂದು ಸಂಸ್ಥೆ ಇಲ್ಲದಿರುವುದು, ಬೆನ್ನು ತಟ್ಟುವ ಪ್ರಾಯೋಜಕರೂ ಇಲ್ಲ. ಇಂಥ ಪರಿಸ್ಥಿತಿಯಲ್ಲೂ ಅಗೊಮ್ಮೆ, ಈಗೊಮ್ಮೆ ಅಲ್ಲಲ್ಲಿ ಪ್ರಕಾಶಿಸುತ್ತಿದ್ದಾರೆ.

1956ರಲ್ಲಿ ಮಾಸ್ಕೊದಲ್ಲಿ ನಡೆದ 12ನೇ ಚೆಸ್ ಒಲಿಂಪಿಯಾಡ್ ನಲ್ಲಿ ಮೊದಲ ಬಾರಿ ಭಾಗವಹಿಸಿದ್ದ ಭಾರತ, ಪ್ರಸಕ್ತ ಸಾಲಿನ ಒಲಿಂಪಿಯಾಡ್ ಆತಿಥ್ಯ ವಹಿಸುತ್ತಿರುವುದು ಭಾರತದ ಚೆಸ್ ಕ್ಷೇತ್ರಕ್ಕೆ ಬಹುದೊಡ್ಡ ಹಿರಿಮೆ. 44ನೇ ಚೆಸ್ ಒಲಿಂಪಿಯಾಡ್ ಈ ಬಾರಿ ತಮಿಳುನಾಡಿನ ಮಹಾಬಲಿಪುರಂನಲ್ಲಿ ಜುಲೈ 28 ರಿಂದ ಆಗಸ್ಟ್ 10 ರವರೆಗೆ ನಡೆಯಲಿದೆ. 10 ವರ್ಷಗಳ ಹಿಂದೆ 2012ರಲ್ಲಿ ಚೆನ್ನೈ ನಲ್ಕಿ 14ನೇ ಅಂಧ ಚೆಸ್ ಒಲಿಂಪಿಯಾಡ್ ಯಶಸ್ವಿಯಾಗಿ ಸಂಘಟಿಸಲಾಗಿತ್ತು.

ಚೆಸ್ ಜಗತ್ತಿಗೆ ವಿಶ್ವನಾಥನ್ ಆನಂದ್ , ಕೊನೆರು ಹಂಪಿ, ನಿಹಾಲ್ ಸರಿನ್ , ವೈಶಾಲಿ ರಮೇಶಬಾಬು,ಪ್ರದ್ಯುಮ್ನ ನಂತಹ ಶ್ರೇಷ್ಠ ಆಟಗಾರರನ್ನು ಭಾರತ ನೀಡಿದೆ.

ಇದನ್ನೂ ಓದಿ | ​​Commonwealth Games ಕೂಟದಲ್ಲಿ ಪದಕ ಗೆಲ್ಲಲು ಕ್ರೀಡಾಪಟುಗಳಿಗೆ ಟಿಪ್ಸ್‌ ಕೊಟ್ಟ ಪ್ರಧಾನಿ ಮೋದಿ

Exit mobile version