ಗಯಾನ: ಭಾರತೀಯ ಕ್ರಿಕೆಟಿನ ದಿಕ್ಕನ್ನೇ ಬದಲಿಸಿದ ಈ ಮಹಾ ವಿಜಯಕ್ಕೆ(1983 World Cup) ಮಂಗಳವಾರ 41 ವರ್ಷ ತುಂಬಿತು(1983 WC Win Anniversary). 1983ರ ಜೂ. 25ರಂದು ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ಎರಡು ಬಾರಿಯ ಹಾಲಿ ಚಾಂಪಿಯನ್, ಭಯಾನಕ ವೆಸ್ಟ್ ಇಂಡೀಸ್ ತಂಡವನ್ನು ಫೈನಲ್‌ನಲ್ಲಿ 43 ರನ್ನುಗಳಿಂದ ಉರುಳಿಸಿದ “ಕಪಿಲ್ ಡೆವಿಲ್ಸ್’ ಹೊಸ ಇತಿಹಾಸ ಬರೆದ ಅದ್ಭುತ ಕ್ಷಣವದು. ಈ ಸಂಭ್ರಮಕ್ಕೆ 41 ವರ್ಷ ತುಂಬಿದ ನಿಟ್ಟಿನಲ್ಲಿ ಅಂದಿನ ವಿಶ್ವಕಪ್ ತಂಡದ ಸದಸ್ಯರಾದ ರವಿಶಾಸ್ತ್ರಿ(Ravi Shastri), ಸುನೀಲ್ ಗವಾಸ್ಕರ್(Sunil Gavaskar) ಮತ್ತು ಪ್ರಸ್ತುತ ಬಿಸಿಸಿಐ ಅಧ್ಯಕ್ಷರಾಗಿರುವ ರೋಜರ್ ಬಿನ್ನಿ(Roger Binny) ಅವರು ಹಾಲಿ ಟಿ20 ವಿಶ್ವಕಪ್ ಆಡುತ್ತಿರುವ ಟೀಮ್ ಇಂಡಿಯಾ ಆಟಗಾರರೊಂದಿಗೆ ಸಂಭ್ರಮಾಚರಣನೆ ನಡೆಸಿದ್ದಾರೆ.
ವೆಸ್ಟ್ ಇಂಡೀಸ್ನಲ್ಲಿರುವ ಟೀಮ್ ಇಂಡಿಯಾ ಆಟಗಾರರಾದ ರಿಷಭ್ ಪಂತ್(Rishabh Pant), ಮೊಹಮ್ಮದ್ ಸಿರಾಜ್, ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಸೇರಿ ಕೆಲ ಆಟಗಾರರು ಲೆಜಂಡರಿ ಕ್ರಿಕೆಟಿಗರ ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಕೇಕ್ ಕತ್ತರಿಸಿ ಅಂದಿನ ಚೊಚ್ಚಲ ವಿಶ್ವಕಪ್ ಗೆಲುವನ್ನು ಸಂಭ್ರಮಿಸಿದರು. ಈ ಸುಂದರ ಕ್ಷಣದ ಫೋಟೊವನ್ನು ರವಿಶ್ರಾಸ್ತ್ರಿ ತಮ್ಮ ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟನ್ನು ಐಸಿಸಿ ಕೂಡ ಶೇರ್ ಮಾಡಿದೆ.
ಆ ಕಾಲಕ್ಕೆ ಭಾರತದಲ್ಲಿ ಇನ್ನೂ ಕ್ರಿಕೆಟ್ ಅಷ್ಟಾಗಿ ಖ್ಯಾತಿ ಪಡೆದಿರಲಿಲ್ಲ. ಭಾರತ ತಂಡವೂ ಕೂಡ ಬಲಿಷ್ಠವಾಗಿರಲಿಲ್ಲ. ಕೇವಲ ಲೆಕ್ಕ ಭರ್ತಿಗೆ ಇದ್ದ ತಂಡ ಎಂದು ಎಲ್ಲರಿಂದಲೂ ಅಪಹಾಸ್ಯಕ್ಕೆ ಒಳಗಾಗಿತ್ತು. ಜತೆಗೆ ಭಾರತೀಯ ಆಟಗಾರರಿಗೂ ಇದೊಂದು ವಿದೇಶ ಪ್ರವಾಸ ಎಂಬ ಭಾವನೆ ಇದ್ದಿತ್ತು. ಆದರೆ ಲಂಡನ್ನಲ್ಲಿ ನಡೆದದ್ದೇ ಬೇರೆ.
ಫೈನಲ್‌ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಎದುರಾದಾಗ ಇಡೀ ವಿಶ್ವವೇ ಮತ್ತೊಮ್ಮೆ ವಿಂಡೀಸ್ ಚಾಂಪಿಯನ್ ಆಗಲಿದೆ ಎಂದು ಹೇಳಿದ್ದರು. ಆದರೆ, ಕಪಿಲ್ದೇವ್ ನೇತೃತ್ವದ ಭಾರತ ತಂಡ ಅಸಾಧಾರಣ ಪ್ರದರ್ಶನ ತೋರಿ ಹ್ಯಾಟ್ರಿಕ್ ಹಾದಿಯಲ್ಲಿದ್ದ ವಿಂಡೀಸ್ ತಂಡವನ್ನು ಕಟ್ಟಿಹಾಕಿ ಇತಿಹಾಸ ನಿರ್ಮಿಸಿದರು.
ಇದನ್ನೂ ಓದಿ 1983 World Cup: ಕಪಿಲ್ ಪಡೆಯ ಏಕದಿನ ವಿಶ್ವಕಪ್ ವಿಜಯ ದಿವಸಕ್ಕೆ 40ರ ಸಂಭ್ರಮ
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ 183 ರನ್ಗಳಿಗೆ ಆಲೌಟ್ ಆಯಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ವಿಂಡೀಸ್ಗೆ ಛಲ ಬಿಡದ ಮದನ್ಲಾಲ್ ಮತ್ತು ಮೊಹಿಂದರ್ ಅಮರ್ನಾಥ್(Mohinder Amarnath) ಉತ್ಕೃಷ್ಟ ಮಟ್ಟದ ಬೌಲಿಂಗ್ ನಡೆಸಿ ತಲಾ 3 ವಿಕೆಟ್ ಕೆಡವಿದರು. ಅಂತಿಮವಾಗಿ ಕೆರೆಬಿಯನ್ನರನ್ನು 140 ರನ್ಗೆ ಆಲೌಟ್ ಮಾಡುವ ಮೂಲಕ 43 ರನ್ಗಳಿಂದ ಗೆಲುವು ಸಾಧಿಸಿ ದೇಶಕ್ಕೆ ಮೊದಲ ಏಕದಿನ ವಿಶ್ವಕಪ್ ತಂದುಕೊಟ್ಟರು. ನಾಯಕ ಕಪಿಲ್ದೇವ್ ಅವರು ಲಾರ್ಡ್ಸ್ನಲ್ಲಿ ಕಪ್ ಎತ್ತಿ ಭಾರತದ ವಿಜಯ ಪತಾಕೆ ಹಾರಿಸಿದ್ದರು.
ಅಂದಿನ ಕಪಿಲ್ ಪಡೆಯ ಓರ್ವ ಸದಸ್ಯ ಸಯ್ಯದ್ ಕಿರ್ಮಾನಿ ಹೇಳಿದಂತೆ “ನಮ್ಮ 1983ರ ವಿಶ್ವಕಪ್ ಗೆಲುವು ಮೊದಲ ಪ್ರೀತಿಯಂತೆ, ಯಾವತ್ತೂ ಮರೆಯಲಾಗದ್ದು” ನಿಜಕ್ಕೂ ಈ ಮಾತು ಇಂದಿಗೂ ಮರೆಯಲಾಗದಂತೆ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಕೊಂಡಿದೆ.