ಬೆಂಗಳೂರು: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಗಸ್ಟ್ 24ರಿಂದ 29ರವರೆಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ನಡೆಯಲಿರುವ ಏಷ್ಯಾ ಕಪ್ ಶಿಬಿರಕ್ಕೆ ಸೇರುವ ಮೊದಲು ದೀರ್ಘ ಕಾಲದ ವಿರಾಮ ಪಡೆಯಲಿದ್ದಾರೆ. ಅವರಿಬ್ಬರು ಪ್ರಸ್ತುತ ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಟಿ20 ಸರಣಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಹೀಗಾಗಿ ಅವರು ಏಕದಿನ ಸರಣಿ ಮುಕ್ತಾಯಗೊಂಡ ತಕ್ಷಣ ಭಾರತಕ್ಕೆ ವಾಪಸಾಗಿದ್ದಾರೆ. ಇದರ ಜತೆಗೆ ಅವರು ದೀರ್ಘ ಕಾಲದ ರಜೆಯನ್ನು ಪಡೆಯಲಿದ್ದಾರೆ.
2024 ರ ಟಿ20ಗೆ ಸಿದ್ದತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ. ಅದಕ್ಕಾಗಿ ರೋಹಿತ್ ಮತ್ತು ಕೊಹ್ಲಿ ಅವರನ್ನು ಟಿ20 ಯೋಜನೆಯ ಭಾಗವಾಗಿ ಪರಿಗಣಿಸುತ್ತಿಲ್ಲ. ಅವರನ್ನು ತಂಡದಿಂದ ಹೊರಕ್ಕೆ ಕೂರಿಸಲಾಗುತ್ತಿದೆ. 2022ರ ಟಿ20 ವಿಶ್ವ ಕಪ್ನಲ್ಲಿ ಭಾರತವನ್ನು ಮುನ್ನಡೆಸಿದ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಮುಂದಿನ ಯೋಜನೆಯ ಟಿ20 ಐ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ.
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿರಾಮದಲ್ಲಿರುವ ವಿಚಾರವನ್ನು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪ್ರಕಟಿಸಿದ್ದಾರೆ. ರೋಹಿತ್ ಶರ್ಮಾ ಗುರುವಾರ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಅವರು ಅದಕ್ಕೆ “ಗುಡ್ ವೈಬ್ಸ್” ಎಂದು ಶೀರ್ಷಿಕೆ ನೀಡಿದ್ದಾರೆ.
ವೆಸ್ಟ್ ಇಂಡೀಸ್ನಿಂದ ಭಾರತಕ್ಕೆ ಮರಳಲು ಗ್ಲೋಬಲ್ ಏರ್ ಚಾರ್ಟರ್ ಸರ್ವೀಸಸ್ ವ್ಯವಸ್ಥೆ ಮಾಡಿದ ಚಾರ್ಟರ್ಡ್ ವಿಮಾನದಲ್ಲಿ ಕುಳಿತಿರುವ ಚಿತ್ರವನ್ನು ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡೂ ಸರಣಿಗಳನ್ನು ಗೆದ್ದ ಟೆಸ್ಟ್ ಮತ್ತು ಏಕದಿನ ತಂಡಗಳ ಭಾಗವಾಗಿದ್ದರು ಅವರು. ಇದೀಗ ಅವರು ಭಾರತಕ್ಕೆ ಹೊರಟಿದ್ದಾರೆ.
ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾ ಕಪ್ಗೆ ಸಜ್ಜಾಗುತ್ತಿರುವ ರೋಹಿತ್ ಮತ್ತು ಕೊಹ್ಲಿ ಶೀಘ್ರದಲ್ಲೇ ಮತ್ತೆ ಆಟಕ್ಕೆ ಮರಳಲಿದ್ದಾರೆ. ವಿಶೇಷವೆಂದರೆ, ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಸೇರಿದಂತೆ ಇತರ ಹಿರಿಯ ಸದಸ್ಯರೊಂದಿಗೆ ಇವರಿಬ್ಬರು ಐರ್ಲೆಂಡ್ ಸರಣಿಯಲ್ಲಿ ಪಾಲ್ಗೊಳ್ಳುವುದಿಲ್ಲ. ಭಾರತ ಮತ್ತು ಐರ್ಲೆಂಟ್ ಸರಣಿ ಆಗಸ್ಟ್ 18 ರಿಂದ 23 ರವರೆಗೆ ಡಬ್ಲಿನ್ನಲ್ಲಿ ನಡೆಯಲಿದೆ.
ಇದನ್ನೂ ಓದಿ : Asia Cup 2023 : ಸೋಮವಾರದೊಳಗೆ ಏಷ್ಯಾ ಕಪ್ಗೆ ತಂಡ ಪ್ರಕಟ