ಮುಂಬಯಿ: 2011ರಲ್ಲಿ ಭಾರತ ಕ್ರಿಕೆಟ್ ತಂಡ 28 ವರ್ಷಗಳ ಕಾಯುವಿಕೆ ಬಳಿಕ ಏಕ ದಿನ ವಿಶ್ವ ಕಪ್ ಗೆದ್ದಿತ್ತು. ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ ಧೋನಿ (MS Dhoni) ನೇತೃತ್ವದ ಟೀಮ್ ಇಂಡಿಯಾ ವಿಶ್ವ ಕಪ್ ಮುಡಿಗೇರಿಸಿಕೊಂಡಿತ್ತು. ಅದರಲ್ಲೂ ಟೀಮ್ ಇಂಡಿಯಾದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಿಗೆ ಅದು ಸ್ಮರಣೀಯ ಎನಿಸಿಕೊಂಡಿತು. ಇಷ್ಟೆಲ್ಲ ಸಂಭ್ರಮಕ್ಕೆ ಕಾರಣವಾದ ವಿಶ್ವ ಕಪ್ ವಿಜಯದ 12ನೇ ವಾರ್ಷಿಕೋತ್ಸವವನ್ನು ಏಪ್ರಿಲ್ 2ರಂದು ಮುಂಬಯಿಯ ವಾಂಖೆಡೆ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಮುಂಬಯಿ ಕ್ರಿಕೆಟ್ ಅಸೋಸಿಯೇಷನ್ ಈ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ಅಂದಿನ ನಾಯಕ ಮಹೇಂದ್ರ ಸಿಂಗ್ ಧೋನಿಯ ಹಾಜರಿದ್ದರು.
ಏಪ್ರಿಲ್ 7ರಂದು ಮುಂಬಯಿ ಕ್ರಿಕೆಟ್ ಅಸೋಸಿಯೇಷನ್ ಕಾರ್ಯಕ್ರಮ ಆಯೋಜಿಸಿ ಮಹೇಂದ್ರ ಸಿಂಗ್ ಧೋನಿಗೆ ಸನ್ಮಾನ ಮಾಡಿದ್ದಾರೆ. ಅಂದಿನ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ವಿಜಯ ಸಿಕ್ಸರ್ ಬಾರಿಸಿದ್ದರು. ಸಂದರ್ಭದಲ್ಲಿ ದೊಡ್ಡ ಚಿತ್ರವನ್ನು ಧೋನಿಗೆ ಕೊಟ್ಟಿದ್ದಾರೆ ಮುಂಬಯಿ ಕ್ರಿಕೆಟ್ ಅಸೋಸಿಯೇಷನ್ ಪದಾಧಿಕಾರಿಗಳು. ಇದೇ ವೇಳೆ ಸ್ಮರಣಿಕೆಯನ್ನೂ ಕೂಡ ಕೊಟ್ಟಿದ್ದಾರೆ.
ಸ್ಮಾರಕ ನಿರ್ಮಾಣ
ಫೈನಲ್ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗೆ 275 ರನ್ಗಳು ಬೇಕಾಗಿದ್ದವು. ಅಂತೆಯೇ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ 97 ರನ್ ಬಾರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಸೆಹ್ವಾಗ್ ಸೊನ್ನೆಗೆ ಔಟಾಗಿದ್ದರೆ ಸಚಿನ್ ಕೊಡಗೆ 18 ರನ್. ಆದರೆ, ಕೊನೇ ಹಂತದಲ್ಲಿ ಕ್ರೀಸ್ಗೆ ತಳವೂರಿ ಆಡಿದ್ದ ನಾಯಕ ಧೋನಿ ಅಜೇಯ 91 ರನ್ ಬಾರಿಸಿ ಭಾರತದ ಗೆಲುವಿಗೆ ಕಾರಣರಾಗಿದ್ದರು. ಅಂತೆಯೇ ಇನಿಂಗ್ಸ್ನ ಕೊನೇ ಓವರ್ನಲ್ಲಿ ಲಂಕಾ ಬೌಲರ್ ನುವಾನ್ ಕುಲಶೇಖರ ಅವರ ಎಸೆತಕ್ಕೆ ಸಿಕ್ಸರ್ ಬಾರಿಸಿದ್ದರು. ಅದು ಭಾರತದ ವಿಜಯ ರನ್ ಆಗಿತ್ತು. ಈ ಸಿಕ್ಸರ್ ಬಾರಿಸಿದ ಚೆಂಡು ಬಿದ್ದ ಜಾಗದಲ್ಲೀಗ ಸ್ಮಾರಕ ನಿರ್ಮಿಸಲು ಮುಂದಾಗಿ ಮುಂಬಯಿ ಕ್ರಿಕೆಟ್ ಅಸೋಸಿಯೇಷನ್.
ಮೂಲಗಳ ಪ್ರಕಾರ ಚೆಂಡು ಬಿದ್ದ ಜಾಗದಲ್ಲಿನ ನಾಲ್ಕು ಆಸನಗಳನ್ನು ತೆಗೆದು ಅಲ್ಲಿ ಸ್ಮಾರಕ ನಿರ್ಮಿಸುವುದು ಮುಂಬಯಿ ಕ್ರಿಕೆಟ್ ಅಸೋಸಿಯೇಷನ್ ಉದ್ದೇಶವಾಗಿದೆ. ವಾಂಖೆಡೆಯಲ್ಲಿ ಪಂದ್ಯ ನಡೆಯುವ ವೇಳೆ ಆ ಪ್ರದೇಶದ ಆಸನದಲ್ಲಿ ಕುಳಿತುಕೊಳ್ಳುವ ಕ್ರಿಕೆಟ್ ಅಭಿಮಾನಿಗಳಿಗೆ ಸಿಕ್ಸರ್ ಸ್ಮಾರಕ ವೀಕ್ಷಿಸಲು ಅವಕಾಶ ಸಿಗಲಿದೆ.
ಇದನ್ನೂ ಓದಿ : IPL 2023 : ಮುಂಬಯಿ ಇಂಡಿಯನ್ಸ್ ತಂಡ ಸೇರಿಕೊಂಡ ರೀಲಿ ಮೆರಿಡಿತ್
ಮುಂಬಯಿ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕಾಗಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ತಂಡ ಮುಂಬಯಿನಲ್ಲಿದೆ. ಏಪ್ರಿಲ್ 8ರಂದು ಇತ್ತಂಡಗಳ ನಡುವೆ ಪಂದ್ಯ ನಡೆಯಲಿದೆ. ಹೀಗಾಗಿ ಅಭ್ಯಾಸ ನಿರತ ಮಹೇಂದ್ರ ಸಿಂಗ್ ಧೋನಿ ಅವರನ್ನೇ ಕಾರ್ಯಕ್ರಮಕ್ಕೆ ಅತಿಥಿಯಾಗಿ ಕರೆದು ಸನ್ಮಾನ ಮಾಡಿದ್ದಾರೆ ಮುಂಬಯಿ ಕ್ರಿಕೆಟ್ ಅಸೋಸಿಯೇಷನ್ನ ಸದಸ್ಯರು.
ಮುಂಬಯಿ- ಚೆನ್ನೈ ಕಾಳಗ
ಮುಂಬಯಿ ಹಾಗೂ ಚೆನ್ನ ಸೂಪರ್ ಕಿಂಗ್ಸ್ ನಡುವೆ ಶನಿವಾರ ಸಂಜೆ 7.30ಕ್ಕೆ ಮುಂಬಯಿಯ ವಾಂಖೆಡೆಯಲ್ಲಿ ಪಂದ್ಯ ನಡೆಯಲಿದೆ. ಐಪಿಎಲ್ ಇತಿಹಾಸದ ಎರಡು ಬಲಿಷ್ಠ ತಂಡಗಳು ಇವು. ಹಿಂದಿನ ಪಂದ್ಯದಲ್ಲಿ ಲಖನವ ಸೂಪರ್ ಜಯಂಟ್ಸ್ ತಂಡದ ವಿರುದ್ದ 12 ರನ್ಗಳ ವಿಜಯ ಸಾಧಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಹುಮ್ಮಸ್ಸಿನಲ್ಲಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಮುಂಬಯಿ ಇಂಡಿಯನ್ಸ್ ಚೇತರಿಕೆಯ ಹಾದಿಯನ್ನು ಕಂಡುಕೊಳ್ಳುತ್ತಿದೆ. ಧೋನಿ ನೇತೃತ್ವದ ಚೆನ್ನೈ ಹಾಲಿ ಐಪಿಎಲ್ನಲ್ಲಿ ಲಯ ಕಂಡುಕೊಂಡಿದೆ. ಮುಂಬಯಿ ತಂಡ ಜಯದ ಹಾದಿಗೆ ಮರಳು ಯೋಚನೆಯಲ್ಲಿದೆ.