ಬೆಂಗಳೂರು: 13ನೇ ಆವೃತ್ತಿಯ ಆಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಮುಕ್ತಾಯ ಕಂಡಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭಾರತವನ್ನು ಮಣಿಸಿ ಕಪ್ ಗೆದ್ದಿದೆ. ಇದೀಗ ಕ್ರಿಕೆಟ್ ಅಭಿಮಾನಿಗಳಲ್ಲಿ ಮುಂದಿನ ವಿಶ್ವಕಪ್ ಯಾವಾಗ, ಎಲ್ಲಿ ನಡೆಯಲಿದೆ ಎಂಬ ಚರ್ಚೆ ಶುರುವಾಗಿದೆ.
ಮುಂದಿನ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ 2027ರಲ್ಲಿ ನಡೆಯಲಿದೆ. ಇದು 14ನೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯಾಗಿದೆ. ಐಸಿಸಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದ ಜಂಟಿ ಆತಿಥ್ಯದಲ್ಲಿ ಈ ಟೂರ್ನಿ ನಡೆಯಲಿದೆ. ಒಟ್ಟು 14 ತಂಡಗಳು ಪಾಲ್ಗೊಳ್ಳಲಿವೆ. ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ಟೂರ್ನಿ ನಡೆಯಲಿದೆ.
ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಸಹ-ಆತಿಥೇಯರಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣ ಈ ತಂಡಗಳಿಗೆ ನೇರವಾಗಿ ಅರ್ಹತೆ ಸಿಗಲಿದೆ. ನಮೀಬಿಯಾ ಮೊದಲ ಬಾರಿಗೆ ಪಂದ್ಯಾವಳಿಯ ಆತಿಥ್ಯ ವಹಿಸಿದೆ. ಆದರೆ ಅವರು ಪೂರ್ಣ ಐಸಿಸಿ ಸದಸ್ಯರಲ್ಲದ ಕಾರಣ ಅವರಿಗೆ ನೇರ ಅರ್ಹತೆ ನೀಡಲಾಗಿಲ್ಲ. ಅರ್ಹತಾ ಸುತ್ತಿನ ಪಂದ್ಯವನ್ನು ಆಡಿ ಅರ್ಹತೆ ಗಳಿಸಬೇಕಿದೆ.
ತಂಡಗಳ ಸಂಖ್ಯೆ 14ಕ್ಕೇರಿದೆ. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರ ಎಂಟು ಸ್ಥಾನ ಪಡೆಯುವ ತಂಡಗಳು ನೇರವಾಗಿ ಅರ್ಹತೆ ಪಡೆಯಲಿವೆ. ಉಳಿದ ನಾಲ್ಕು ಸ್ಥಾನಗಳನ್ನು ಕ್ವಾಲಿಫೈಯರ್ ಟೂರ್ನಿಗಳಲ್ಲಿ ಆಡಿ ಅರ್ಹತೆ ಪಡೆಯಬೇಕಿದೆ.
ಇದನ್ನೂ ಓದಿ IND vs AUS : ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ಭಾರತ ತಂಡ ಪ್ರಕಟ
ಗುಂಪು ಹಂತದಲ್ಲಿ ಪಂದ್ಯ
2003ರ ಆವೃತ್ತಿಯ ವಿಶ್ವಕಪ್ನಲ್ಲಿ ಆಡಿದಂತೆ 2027ರ ವಿಶ್ವಕಪ್ನಲ್ಲಿ ಎರಡು ಗುಂಪುಗಳು ಒಳಗೊಂಡಿದೆ. ಒಂದು ಗುಂಪಿಯಲ್ಲಿ ಏಳು ತಂಡಗಳಿರುತ್ತದೆ. ಪ್ರತಿ ಗುಂಪಿನಲ್ಲಿ ಅಗ್ರ ಮೂರು ತಂಡಗಳು ಸೂಪರ್ ಸಿಕ್ಸ್ ಸುತ್ತಿಗೆ ಪ್ರವೇಶಿಸುತ್ತವೆ. ನಂತರ ಅಂತಿಮ ವಿಜೇತರನ್ನು ನಿರ್ಧರಿಸಲು ಸೆಮಿಫೈನಲ್ ಮತ್ತು ಫೈನಲ್‌ಗಳು ನಡೆಯಲಿವೆ. ಗುಂಪು ಹಂತದಲ್ಲಿ, ಪ್ರತಿ ತಂಡವು ತನ್ನ ಗುಂಪಿನಲ್ಲಿರುವ ಇತರ ಎಲ್ಲ ತಂಡಗಳ ವಿರುದ್ಧ ಆಡಬೇಕು.
ಸೋಲು ಕಂಡ ಭಾರತ
ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಬ್ಯಾಟಿಂಗ್ ವೈಫಲ್ಯ ಎದುರಿಸಿದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 240 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 43 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿ ಗೆಲುವು ಸಾಧಿಸಿತು. ಟ್ರಾವಿಸ್ ಹೆಡ್ 137 ರನ್ ಬಾರಿಸಿ ಭಾರತದ ಗೆಲುವನ್ನು ಕಸಿದರು. ಆಸೀಸ್ ಪಾಲಿಗೆ ಗೆಲುವಿನ ರೂವಾರಿ ಎನಿಸಿಕೊಂಡರು.
ತವರು ನೆಲದಲ್ಲಿ ನಡೆದ ವಿಶ್ವ ಕಪ್ ಆವೃತ್ತಿಯಲ್ಲಿ ಟ್ರೋಫಿ ಗೆದ್ದೇ ಗೆಲ್ಲುತ್ತೇವೆ ಎಂಬ ಟೀಮ್ ಇಂಡಿಯಾದ ಹುಮ್ಮಸ್ಸು ಬತ್ತಿ ಹೋಯಿತು. ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ನಡೆದ ಏಕ ದಿನ ವಿಶ್ವ ಕಪ್ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ತಲೆ ಬಾಗಿದ ಟೀಮ್ ಇಂಡಿಯಾದ ಪ್ರಯತ್ನಗಳು ಭಗ್ನವಾಗಿದೆ. 2003ರ ವಿಶ್ವ ಕಪ್ನ ಫೈನಲ್ ಫಲಿತಾಂಶವು ಮತ್ತೊಂದು ಬಾರಿ ಪುನರಾವರ್ತನೆಯಾಗಿದೆ. ಅಂದು ಭಾರತ ತಂಡ ಆಸ್ಟ್ರೇಲಿಯಾ ತಂಡದ ವಿರುದ್ಧವೇ 125 ರನ್ಗಳಿಂದ ಸೋಲು ಕಂಡಿತ್ತು.