Site icon Vistara News

2036 Olympics | 2036ರ ಒಲಿಂಪಿಕ್ಸ್​ ಆತಿಥ್ಯಕ್ಕೆ ಭಾರತ ಬಿಡ್​ ಸಲ್ಲಿಸಲಿದೆ; ಅನುರಾಗ್​ ಠಾಕೂರ್​ ವಿಶ್ವಾಸ

Anurag Thakur

ನವದೆಹಲಿ: ಪ್ರತಿಷ್ಠಿತ 2036ರ ಒಲಿಂಪಿಕ್ಸ್(2036 Olympics) ಕ್ರೀಡಾಕೂಟದ ಆತಿಥ್ಯ ವಹಿಸಲು ಭಾರತ ದೇಶ ಬಿಡ್ ಸಲ್ಲಿಸಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.

ಒಲಿಂಪಿಕ್ಸ್ ಕ್ರೀಡಾ ಕೂಟದ ಆತಿಥ್ಯ ವಹಿಸುವ ಕುರಿತು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗೆ ಮುಂದಿನ ವರ್ಷ ನೀಲನಕ್ಷೆ ಸಲ್ಲಿಸಲಾಗುವುದು ಎಂದು ಬುಧವಾರ ಅನುರಾಗ್​ ಠಾಕೂರ್​ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. “ಇದುವರೆಗೆ ನಮ್ಮ ದೇಶದಲ್ಲಿ ಒಂದು ಬಾರಿಯೂ ಒಲಿಂಪಿಕ್ಸ್‌ ನಡೆಯದಿರುವುದು ವಿಪರ್ಯಾಸವೇ ಸರಿ. ಆದರೆ ಸರ್ಕಾರ ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡುತ್ತಿದೆ. 2036 ಒಲಿಂಪಿಕ್ಸ್‌ ಕೂಟವನ್ನು ಭಾರತದಲ್ಲಿ ನಡೆಸುವುದಕ್ಕಾಗಿ ಬಿಡ್‌ ಸಲ್ಲಿಸಲು ಯೋಜನೆ ರೂಪಿಸಲಾಗಿದೆ” ಎಂದು ಅನುರಾಗ್ ಠಾಕೂರ್ ಸ್ಪಷ್ಟಪಡಿಸಿದ್ದಾರೆ.

“ಭಾರತ ದೇಶ ಪ್ರಸ್ತುತ ಎಲ್ಲ ರಂಗದಲ್ಲೂ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಹೀಗಿರುವಾಗ ಕ್ರೀಡೆಗಳಲ್ಲಿ ಏಕೆ ಇರಬಾರದು? 2036 ಒಲಿಂಪಿಕ್ಸ್ ಆತಿಥ್ಯ ವಹಿಸಲು ಬಿಡ್ ಸಲ್ಲಿಕೆಗೆ ಗಂಭೀರ ಚರ್ಚೆಯಾಗಿದೆ. ಈ ಹಿಂದೆ ಭಾರತ ಏಷ್ಯನ್​​ ಗೇಮ್ಸ್​ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟಗಳನ್ನು ಆಯೋಜಿಸಿ ಯಶಸ್ಸು ಕಂಡಿದೆ. ಇದೇ ರೀತಿ ಒಲಿಂಪಿಕ್ಸ್​ ಕ್ರೀಡಾ ಕೂಟವನ್ನು ನಡೆಸುವ ವಿಶ್ವಾಸವಿದೆ” ಎಂದು ಅವರು ಹೇಳಿದರು.

ಈಗಾಗಲೇ 2036ರ ಒಲಿಂಪಿಕ್ಸ್​ ಆತಿಥ್ಯದ ಹಕ್ಕು ಪಡೆಯಲು 10 ದೇಶಗಳು ಪೈಪೋಟಿ ನಡೆಸುತ್ತಿದೆ. ಆದಾಗ್ಯೂ ಭಾರತದಲ್ಲಿ ಒಲಿಂಪಿಕ್ಸ್ ನಡೆಸುವ ಸಂಬಂಧ ಇಲ್ಲಿನ ಒಲಿಂಪಿಕ್ಸ್‌ ಸಂಸ್ಥೆಯೊಂದಿಗೆ ಭಾರತ ಸರ್ಕಾರವು ಮುಂಬರುವ ವರ್ಷ ಚರ್ಚೆ ನಡೆಸಲಾಗುತ್ತದೆ. ಈ ಸಭೆಯನ್ನು ಮುಂಬಯಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.

ಅಹಮದಾಬಾದ್​ನಲ್ಲಿ ಒಲಿಂಪಿಕ್ಸ್!
1951, 1982 ರಲ್ಲಿ ದೆಹಲಿಯಲ್ಲಿ ಏಷ್ಯಾ ಕ್ರೀಡೆಗಳು ನಡೆದಿದ್ದವು. ಇದೇ ವೇದಿಕೆಯಲ್ಲಿ 2010ರಲ್ಲಿ ಕಾಮನ್ವೆಲ್ತ್ ಕ್ರೀಡೆಗಳು ಕೂಡ ನಡೆದಿವೆ. ಆದರೆ 2036ರಲ್ಲಿ ಒಲಿಂಪಿಕ್ಸ್ ಆತಿಥ್ಯ ಹಕ್ಕುಗಳು ಭಾರತಕ್ಕೆ ಸಿಕ್ಕರೆ ಈ ಕ್ರೀಡಾಕೂಟವನ್ನು ಗುಜರಾತ್​ನಲ್ಲಿ ನಡೆಸುವುದಾಗಿ ಅನುರಾಗ್ ಠಾಕೂರ್ ಸ್ಪಷ್ಟಪಡಿಸಿದ್ದಾರೆ. ಒಲಿಂಪಿಕ್ಸ್ ನಿರ್ವಹಣೆಗೆ ಹಲವು ಗುಜರಾತಿಗಳು ಆಸಕ್ತಿ ತೋರಿಸಿದ್ದಾರೆ. ಅವರ ಬಳಿ ಮೂಲಭೂತ ಸೌಲಭ್ಯಗಳಿವೆ. ಜತೆಗೆ ಅಂತಾರಾಷ್ಟ್ರೀಯ ಗುಣಮಟ್ಟದ ಮೈದಾನ ವ್ಯವಸ್ಥೆಗಳು ಇಲ್ಲಿ ಇರುವುದರಿಂದ ಈ ನಿರ್ಧಾರ ಮಾಡಲಾಗಿದೆ ಅವರು ಹೇಳಿದರು.

ಇದನ್ನೂ ಓದಿ | INDvsPAK | ರಮೀಜ್‌ ರಾಜಾಗೆ ಖಡಕ್‌ ಉತ್ತರ ಕೊಟ್ಟ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್‌

Exit mobile version