ಮೆಲ್ಬೋರ್ನ್ : ಹತ್ತು ದಿನಗಳ ಹಿಂದೆಯಷ್ಟೇ ಟಿ೨೦ ವಿಶ್ವ ಕಪ್ ಟ್ರೋಫಿ ಎತ್ತಿ ಹಿಡಿದಿದ್ದ ಇಂಗ್ಲೆಂಡ್ ತಂಡ, ಇದೀಗ ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಪಂದ್ಯವೊಂದರಲ್ಲಿ ದಾಖಲೆಯ ಅಂತರದ ರನ್‌ಗಳಿಂದ ಸೋಲುವ ಜತೆಗೆ ಏಕ ದಿನ ಪಂದ್ಯಗಳ ಸರಣಿಯಲ್ಲೂ ವೈಟ್‌ವಾಷ್ ಮಾಡಿಸಿಕೊಂಡಿದೆ. ಪಾಕಿಸ್ತಾನ ತಂಡವನ್ನು ಸೋಲಿಸಿ ಕಪ್ ಎತ್ತಿ ಹಿಡಿದಿದ್ದ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಮಂಗಳವಾರ ನಡೆದ ಸರಣಿಯ ಮೂರನೇ ಹಾಗೂ ಕೊನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ೨೨೧ ರನ್‌ಗಳ ಹೀನಾಯ ಸೋಲಿಗೆ ಒಳಗಾಗಿದೆ. ಮೂರು ಪಂದ್ಯಗಳ ಈ ಹಿಂದಿನ ಎರಡು ಪಂದ್ಯದಲ್ಲಿ ಇಂಗ್ಲೆಂಡ್ ಪರಾಭವಗೊಂಡಿತ್ತು.
ಇಂಗ್ಲೆಂಡ್ ಪಾಲಿಗೆ ಇದು ಏಕ ದಿನ ಮಾದರಿಯಲ್ಲಿ ಅತ್ಯಂತ ದೊಡ್ಡ ಅಂತರದ ಸೋಲಾಗಿದೆ. ೨೦೧೮ರಲ್ಲಿ ಶ್ರೀಲಂಕಾ ತಂಡದ ವಿರುದ್ಧ ಇಂಗ್ಲೆಂಡ್ ೨೧೯ ರನ್‌ಗಳ ಸೋಲಿಗೆ ಒಳಗಾಗಿತ್ತು. ಇದೀಗ ನಾಲ್ಕು ವರ್ಷಗಳ ಬಳಿಕ ಆಸ್ಟ್ತೇಲಿಯಾ ವಿರುದ್ಧ ಸೋತು ತನ್ನದೇ ಕಳಪೆ ದಾಖಲೆಯನ್ನು ಮುರಿದಿದೆ.
ಮೆಲ್ಬೋರ್ನ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನ ಪಡೆದ ಆಸ್ಟ್ರೇಲಿಯಾ ತಂಡ ಮಳೆಯಿಂದ ಬಾಧಿತಗೊಂಡು ೪೮ ಓವರ್‌ಗಳಿಗೆ ಸೀಮಿತಗೊಂಡ ಪಂದ್ಯದಲ್ಲಿ ೫ ವಿಕೆಟ್‌ಗೆ ೩೫೫ ರನ್ ಬಾರಿಸಿತು. ಆರಂಭಿಕ ಬ್ಯಾಟರ್‌ಗಳಾದ ಟ್ರಾವಿಸ್ ಹೆಡ್ (೧೫೨) ಹಾಗೂ ಡೇವಿಡ್ ವಾರ್ನರ್ (೧೦೬) ಶತಕ ಬಾರಿಸುವ ಮೂಲಕ ಮೊದಲ ವಿಕೆಟ್‌ಗೆ ೨೬೯ ರನ್‌ಗಳ ಜತೆಯಾಟ ನೀಡಿದರು. ಹೀಗಾಗಿ ತಂಡ ಬೃಹತ್ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿ ೩೧.೪ ಓವರ್‌ಗಳಲ್ಲಿ ೧೪೨ ರನ್‌ಗಳಿಗೆ ಆಲ್‌ಔಟ್ ಅಯಿತು.
ಆಸ್ಟ್ರೇಲಿಯಾ : ೪೮ ಓವರ್‌ಗಳಲ್ಲಿ ೫ ವಿಕೆಟ್‌ಗೆ ೩೫೫ (ಟ್ರಾವಿಸ್ ಹೆಡ್ ೧೫೨, ಡೇವಿಡ್ ವಾರ್ನರ್ ೧೦೬; ಒಲಿ ಸ್ಟೋನ್ ೮೫ಕ್ಕೆ ೪).
ಇಂಗ್ಲೆಂಡ್: ೩೧. ೪ ಓವರ್‌ಗಳಲ್ಲಿ ೧೪೨ (ಜೇಸನ್ ರಾಯ್ ೩೩, ಜೇಮ್ಸ್ ವಿನ್ಸ್ ೨೨; ಆಡಂ ಜಂಪಾ ೩೧ಕ್ಕೆ೪).
ಇದನ್ನೂ ಓದಿ ವ| PAK VS ENG |ಶೆಫ್ ಜತೆಗೆ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್ ಟೆಸ್ಟ್ ತಂಡ!