ನಾಗ್ಪುರ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಅಂಪೈರ್ಗೆ ಮಾಹಿತಿ ನೀಡದೇ ಕೈಗೆ ಮುಲಾಮು ಹಚ್ಚಿಕೊಂಡ ಭಾರತ ತಂಡದ ಸ್ಪಿನ್ ಬೌಲರ್ ರವೀಂದ್ರ ಜಡೇಜಾಗೆ (Ravindra Jadeja) ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC) ಶೇಕಡಾ 25 ದಂಡ ವಿಧಿಸಿದೆ. ಜತೆಗೆ ಒಂದು ಡಿಮೆರಿಟ್ ಅಂಕವನ್ನೂ ನೀಡಿದೆ. ಆಸ್ಟ್ರೇಲಿಯಾ ತಂಡದ ಮೊದಲ ಇನಿಂಗ್ಸ್ ವೇಳೆ ಜಡೇಜಾ ಈ ತಪ್ಪು ಮಾಡಿದ್ದಾರೆ. ನೋವು ನಿವಾರಕ ಹಚ್ಚಿಕೊಂಡಿದ್ದು ತಪ್ಪಲ್ಲದಿದ್ದರೂ ಅಂಪೈರ್ಗೆ ಮಾಹಿತಿ ಕೊಡದೇ ಹಚ್ಚಿಕೊಂಡಿರುವುದು ಐಸಿಸಿ ನಿಯಮದ ಉಲ್ಲಂಘನೆ ಎಂದು ಘೋಷಿಸಿರುವ ಐಸಿಸಿ ದಂಡ ಪ್ರಕಟಿಸಿದೆ.
ಸ್ಪಿನ್ನರ್ ಜಡೇಜಾ ಆಸ್ಟ್ರೇಲಿಯಾ ತಂಡದ ವಿರುದ್ಧದ ಮೊದಲ ಇನಿಂಗ್ಸ್ನಲ್ಲಿ 47 ರನ್ಗಳಿಗೆ 5 ವಿಕೆಟ್ ಕಬಳಿಸಿದ್ದರು. ಏತನ್ಮಧ್ಯೆ ಅವರು ಕೈ ಬೆರಳಿನಲ್ಲಿ ಊತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೇಗಿ ಮೊಹಮ್ಮದ್ ಸಿರಾಜ್ ಅವರಿಂದ ನೋವು ನಿವಾರಕ ಮುಲಾಮು ತರಿಸಿಕೊಂಡು ಪಂದ್ಯದ ನಡುವೆ ಹಚ್ಚಿಕೊಂಡಿದ್ದರು. ಇದು ಸಣ್ಣ ಮಟ್ಟಿಗೆ ವಿವಾದಕ್ಕೆ ಕಾರಣವಾಗಿತ್ತು. ಆಸ್ಟ್ರೇಲಿಯಾದ ಮಾಧ್ಯಮಗಳು ಇದು ಬಾಲ್ ಟ್ಯಾಂಪರಿಂಗ್ ಎಂಬರ್ಥದಲ್ಲಿ ವರದಿ ಮಾಡಿದ್ದವು. ಹಿರಿಯ ಆಟಗಾರರು ಅನೇಕರು ಜಡೇಜಾ ಅವರ ನಡೆಯನ್ನು ಟೀಕಿಸಿದ್ದರು.
ದಿನದಾಟ ಮುಕ್ತಾಯಗೊಂಡ ಬಳಿಕ ಮ್ಯಾಚ್ ರೆಫರಿ ನಾಯಕ ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಅವರನ್ನು ಕರೆಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಅದು ನೋವು ನಿವಾರಕ ಎಂಬುದು ಸಾಬೀತಾಗಿದ್ದ ಕಾರಣ ಬಾಲ್ ಟ್ಯಾಂಪರಿಂಗ್ ಆರೋಪದಿಂದ ಕ್ಲೀನ್ ಚಿಟ್ ಕೊಟ್ಟಿತ್ತು. ಎದುರಾಳಿ ಆಸ್ಟ್ರೇಲಿಯಾ ತಂಡವೂ ಈ ಬಗ್ಗೆ ಲಿಖಿತ ದೂರು ಸಲ್ಲಿಸಿರಲಿಲ್ಲ. ಆದರೆ, ಐಸಿಸಿ ನಿಯಮದ ಪ್ರಕಾರ ಆಟದ ನಡುವೆ ಆಟಗಾರ ತನ್ನ ಮೈಗೆ ಯಾವುದೇ ವಸ್ತುವನ್ನು ಹಚ್ಚಿಕೊಳ್ಳುವ ಮೊದಲು ಅಂಪೈರ್ ಗಮನಕ್ಕೆ ತರಬೇಕು ಅಥವಾ ಅವರ ಮುಂದೆಯೇ ಹಚ್ಚಿಕೊಳ್ಳಬೇಕು. ಈ ನಿಯಮ ಪಾಲಿಸುಲ್ಲಿ ಜಡೇಜಾ ಎಡವಿದ್ದರು. ಅದು ತಪ್ಪು ಎಂಬುದಾಗಿ ಐಸಿಸಿ ಹೇಳಿದೆ.
ಇದನ್ನೂ ಓದಿ : INDvsAUS 2023 : ರೋಹಿತ್ ಶತಕ, ಜಡೇಜಾ, ಅಕ್ಷರ್ ಅರ್ಧ ಶತಕ; ಮೊದಲ ಇನಿಂಗ್ಸ್ನಲ್ಲಿ 7 ವಿಕೆಟ್ಗೆ 321 ರನ್ ಬಾರಿಸಿದ ಭಾರತ
ರವೀಂದ್ರ ಜಡೇಜಾ ಅವರು ಐಸಿಸಿ ಕೋಡ್ ಆಫ್ ಕಾಂಡಕ್ಟ್ನ ಆರ್ಟಿಕಲ್ 2.20 ಅನ್ನು ಉಲ್ಲಂಘಿಸಿದ್ದರು. ಇದು ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿದೆ. ಭಾರತ ತಂಡದ ಮ್ಯಾನೇಜ್ಮೆಂಟ್ ಮುಲಾಮು ಹಚ್ಚಿರುವುದನ್ನು ಸ್ಪಷ್ಟಪಡಿಸಿದೆ. ಆದಾಗ್ಯೂ ಅವರು ಅಂಪೈರ್ಗೆ ಮಾಹಿತಿ ನೀಡಬೇಕಾಗಿತ್ತು ಎಂಬುದಾಗಿ ಐಸಿಸಿ ಅಭಿಪ್ರಾಯಪಟ್ಟಿದೆ.