ಪುಣೆ : ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಶ್ರೀಲಂಕಾ (INDvsSL) ತಂಡ 206 ರನ್ಗಳ ಬೃಹತ್ ಮೊತ್ತ ಪೇರಿಸುವ ಮೂಲಕ ಭಾರತದ ಬೌಲಿಂಗ್ ವಿಭಾಗದ ದೌರ್ಬಲ್ಯ ಪ್ರಕಟಗೊಂಡಿತು. ಅದರಲ್ಲೂ ಪ್ರಮುಖ ಬೌಲರ್ ಎನಿಸಿಕೊಂಡಿದ್ದ ಅರ್ಶ್ದೀಪ್ ಸಿಂಗ್ (Arshdeep Singh) ಒಟ್ಟಾರೆ ನಾಲ್ಕು ನೋ ಬಾಲ್ ಎಸೆದು ದುಬಾರಿ ಎನಿಸಿಕೊಂಡರು. ಅವರು ಎರಡು ಓವರ್ಗಳ ತಮ್ಮ ಸ್ಪೆಲ್ನಲ್ಲಿ 37 ರನ್ ನೀಡಿ ದುಬಾರಿ ಎನಿಸಿಕೊಂಡರು. ಅದಕ್ಕಿಂತ ಹೆಚ್ಚಾಗಿ ತಮ್ಮ ಸ್ಪೆಲ್ನ ಮೊದಲ ಓವರ್ನಲ್ಲಿಯೇ ಮೂರು ನೋಬಾಲ್ ಎಸೆಯುವ ಮೂಲಕ ಭಾರತ ಪರ ಈ ಕಳಪೆ ದಾಖಲೆ ಬರೆದರು.
ನಾಯಕ ಹಾರ್ದಿಕ್ ಪಾಂಡ್ಯ ಇನಿಂಗ್ಸ್ನ ಎರಡನೇ ಓವರ್ ಅರ್ಶ್ದೀಪ್ಗೆ ನೀಡಿದರು. ಆ ಓವರ್ನ ಐದನೇ ಎಸೆತ ಹಾಕುವಾಗ ಗೆರೆಗಿಂತ ಮುಂದೆ ಹೆಜ್ಜೆಯಿಟ್ಟರು. ಆ ಬಳಿಕವೂ ಸತತ ಎರಡು ನೋಬಾಲ್ ಎಸೆದರು. ಲಂಕಾ ಬ್ಯಾಟರ್ ಕುಸಾಲ್ ಮೆಂಡಿಸ್ ಅವಕಾಶವನ್ನು ಬಳಸಿಕೊಂಡು ಒಂದು ಸಿಕ್ಸರ್ ಹಾಗೂ ಫೋರ್ ಬಾರಿಸಿದರು. ಈ ಓವರ್ನಲ್ಲಿ ಒಟ್ಟಾರೆ 19 ರನ್ ನೀಡಿದ ಅರ್ಶ್ದೀಪ್ ದುಬಾರಿ ಎನಿಸಿಕೊಂಡರು.
ಇನಿಂಗ್ಸ್ನ 19ನೇ ಓವರ್ನಲ್ಲೂ ಅರ್ಶ್ದೀಪ್ ಮತ್ತೆ ನೋಬಾಲ್ ಎಸೆಯುವ ಮೂಲಕ ಭಾರತೀಯ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಆ ಓವರ್ನ ಐದನೇ ಎಸೆತ ಮತ್ತೆ ನೋ ಬಾಲ್. ಅವರು ಹಾಕಿದ್ದ ಯಾರ್ಕರ್ ಎಸೆತವನ್ನು ಲಂಕಾ ನಾಯಕ ದಸುನ್ ಶನಕ ಸಿಕ್ಸರ್ಗೆ ಅಟ್ಟಲು ಯತ್ನಿಸಿ ಸೂರ್ಯಕುಮಾರ್ಗೆ ಕ್ಯಾಚಿತ್ತರು. ಶನಕಗೆ ಜೀವದಾನ ಸಿಕ್ಕಿತಲ್ಲದೆ, 22 ಎಸೆತಗಳಲ್ಲಿ 56 ರನ್ ಬಾರಿಸಿದರು. ಈ ಮೂಲಕ ಅರ್ಶ್ದೀಪ್ 9 ಎಸೆತಗಳ ಅಂತರದಲ್ಲಿ ನಾಲ್ಕು ನೋಬಾಲ್ ಕೊಟ್ಟಂತಾಯಿತು.
ಅರ್ಶ್ದೀಪ್ ಸಿಂಗ್ ಟಿ20 ಮಾದರಿಯಲ್ಲಿ ಇದುವರೆಗಿನ 22 ಪಂದ್ಯಗಳಲ್ಲಿ 12 ನೋ ಬಾಲ್ಗಳನ್ನು ನೀಡಿದ್ದಾರೆ. ಎರಡನೇ ಪಂದ್ಯದಲ್ಲಿ ಭಾರತ ತಂಡ ಒಟ್ಟು ಏಳು ನೋಬಾಲ್ ಇತರ ರನ್ಗಳನ್ನು ನೀಡಿದೆ.
ಇದನ್ನೂ ಓದಿ | INDvsSL | ದಸುನ್ ಶನಕ, ಕುಸಲ್ ಮೆಂಡಿಸ್ ಅರ್ಧಶತಕ; ಭಾರತ ತಂಡದ ಗೆಲುವಿಗೆ 207 ರನ್ ಬೃಹತ್ ಸವಾಲು