ಮುಂಬಯಿ: ಟೀಂ ಇಂಡಿಯಾ (Team India) ಮುಂದಿನ ತಿಂಗಳು ವೆಸ್ಟ್ ಇಂಡೀಸ್ ಪ್ರವಾಸ ಮಾಡಲಿದೆ. ಅಲ್ಲಿ ಮೊದಲಿಗೆ ಆತಿಥೇಯ ತಂಡದ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇದು ಮುಂದಿನ ಋತುವಿನ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಮೊದಲ ಸರಣಿಯಾಗಿದೆ. ಟೆಸ್ಟ್ ಸರಣಿಯಲ್ಲಿ ಆಡಲಿರುವ ಭಾರತ ತಂಡಕ್ಕೆ ಐಪಿಎಲ್ ಪ್ರದರ್ಶನದ ಆಧಾರದ ಮೇಲೆ ಹಲವಾರು ಯುವ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಕೆರಿಬಿಯನ್ನಲ್ಲಿ ಅತ್ಯುನ್ನತ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಆಶಯವನ್ನು ಅವರು ಹೊಂದಿದ್ದಾರೆ. ಹಾಗಾದರೆ ಭಾರತದ ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ ತಂಡಕ್ಕೆ ಪಾದಾರ್ಪಣೆ ಮಾಡುವ ಮೂವರು ಆಟಗಾರರು ಯಾರೆಲ್ಲ ಎಂದು ಗಮನಿಸೋಣ.
ಯಶಸ್ವಿ ಜೈಸ್ವಾಲ್
ಐಪಿಎಲ್ 2023ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬ್ಯಾಟರ್ ಯಶಸ್ವಿ ಜೈಸ್ವಾಲ್. ಅವರು ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್. ಅಲ್ಲಿನ ಉತ್ತಮ ಪ್ರದರ್ಶನದ ಆಧಾರದಲ್ಲಿ ಡಬ್ಲ್ಯುಟಿಸಿ ಫೈನಲ್ನಲ್ಲಿ ಭಾರತ ತಂಡದ ಭಾಗವಾಗಿದ್ದರು ಅವರು. ಆದರೆ, ಆಡುವ ಅವಕಾಶ ಪಡೆದಿರಲಿಲ್ಲ. ಐಪಿಎಲ್ 2023ರಲ್ಲಿ ಜೈಸ್ವಾಲ್ 625 ರನ್ ಗಳಿಸಿದ್ದಾರೆ. ಇದು ಐಪಿಎಲ್ ಋತುವಿನಲ್ಲಿ ಅಂತಾರಾಷ್ಟ್ರೀಯ ಪಂದ್ಯವಾಡದ ಆಟಗಾರ ಪೇರಿಸಿದ ಅತಿ ಹೆಚ್ಚು ರನ್. ದೇಶೀಯ ಕ್ರಿಕೆಟ್ನಲ್ಲೂ ಅತ್ಯುತ್ತಮ ರನ್ ಗಳಿಕೆ ಮಾಡಿದ್ದಾರೆ ಅವರು. ಕೆಂಪು-ಚೆಂಡಿನ ಆಟದ ಸ್ವರೂಪದಲ್ಲಿ ತನ್ನ ಪ್ರದರ್ಶನವನ್ನು ಮಂದುವರಿಸಲು ಬಯಸಿದ್ದಾರೆ ಅವರು.
ರಿಂಕು ಸಿಂಗ್
ರಿಂಕು ಸಿಂಗ್ ಭಾರತೀಯ ಕ್ರಿಕೆಟ್ ಕ್ಷೇತ್ರದ ಟಿ20 ಮಾದರಿಯಲ್ಲಿ ಅತ್ಯುತ್ತಮ ಫಿನಿಶರ್ ಎನಿಸಿಕೊಂಡಿದ್ದಾರೆ. ಐಪಿಎಲ್ 2023ರಲ್ಲಿ ಗುಜರಾತ್ ಟೈಟನ್ಸ್ ವಿರುದ್ಧದ ಐಪಿಎಲ್ 2023ರ ಪಂದ್ಯದಲ್ಲಿ ಕೆಕೆಆರ್ ತಂಡಕ್ಕೆ ಸ್ಮರಣೀಯ ಗೆಲುವು ಸಾಧಿಸಲು ನೆರವಾದವರು ಅವರು. ಕೊನೇ ಓವರ್ನ ಐದು ಎಸೆತಗಳಲ್ಲಿ ಐದು ಸಿಕ್ಸರ್ಗಳನ್ನು ಬಾರಿಸಿದ ನಂತರ ರಿಂಕು ಜನಪ್ರಿಯತೆ ಗಳಿಸಿದ್ದಾರೆ. ಯುಪಿ ಮೂಲದ ಬ್ಯಾಟರ್ ದೀರ್ಘ ಸ್ವರೂಪದ ಕ್ರಿಕೆಟ್ನಲ್ಲಿ ಚಾಪು ಮೂಡಿಸಲು ಅವಕಾಶ ಪಡೆಯುವ ಸಾಧ್ಯತೆಗಳಿವೆ.
ಇದನ್ನೂ ಓದಿ : World Cup 2023 : ಒಪ್ಪಂದಕ್ಕೆ ಸಹಿ ಹಾಕಲು ಐಸಿಸಿಯಿಂದ ಕಾಸು ಕೇಳಿದ ಪಾಕ್ ತಂಡ! ಇದೆಂಥಾ ದುರಾಸೆ?
ಮುಖೇಶ್ ಕುಮಾರ್
ಜೈಸ್ವಾಲ್ ಅವರಂತೆಯೇ, ಮುಖೇಶ್ ಕುಮಾರ್ ಭಾರತದ ಡಬ್ಲ್ಯುಟಿಸಿ 2023 ರ ಫೈನಲ್ ತಂಡದಲ್ಲಿ ಮೂವರು ಮೀಸಲು ವೇಗಿಗಳಲ್ಲಿ ಒಬ್ಬರಾಗಿದ್ದರು. ವೇಗಿ ಕಳೆದ ವರ್ಷ ದಕ್ಷಿಣ ಆಫ್ರಿಕಾ ಸರಣಿಗೆ ಭಾರತದ ತಂಡದ ಭಾಗವಾಗಿದ್ದರು. ಭಾರತ ವಿರುದ್ಧ ಶ್ರೀಲಂಕಾ ಮತ್ತು ಮತ್ತು ನ್ಯೂಜಿಲೆಂಡ್ ಸರಣಿಗೆ ಆಯ್ಕೆಯಾಗಿದ್ದರು. ವಿಂಡೀಸ್ ವಿರುದ್ಧ ಪಾದಾರ್ಪಣೆ ಮಾಡುವ ಪ್ರಮುಖ ಪಟ್ಟಿಯಲ್ಲಿ ಮುಖೇಶ್ ಇದ್ದಾರೆ.