ಬೆಂಗಳೂರು : ರಕ್ಷಣಾ ವಿಭಾಗದ ವೈಫಲ್ಯಕ್ಕೆ ಬೆಲೆ ತೆತ್ತ ತಮಿಳ್ ತಲೈವಾಸ್ ತಂಡ ಪ್ರೊ ಕಬಡ್ಡಿ ಲೀಗ್‌ನ ೯ನೇ ಆವೃತ್ತಿಯ ೧೬ನೇ ಪಂದ್ಯದಲ್ಲಿ ಯು ಮುಂಬಾ ತಂಡದ ವಿರುದ್ಧ ೩೯-೩೨ ಅಂಕಗಳ ಅಂತರದಿಂದ ಸೋಲು ಕಂಡಿತು. ಇದರೊಂದಿಗೆ ಸತತ ಎರಡನೇ ಸೋಲಿಗೆ ಒಳಗಾಯಿತು. ಮೊದಲ ಪಂದ್ಯದಲ್ಲಿ ಟೈ ಸಾಧನೆ ಮಾಡಿಕೊಂಡಿದ್ದ ತಮಿಳ್ ತಂಡ ಕೇವಲ ೫ ಅಂಕಗಳನ್ನು ಮಾತ್ರ ಸಂಪಾದಿಸಿಕೊಂಡಿದೆ. ಅತ್ತ ಮುಂಬಾ ಬಳಗ ಸತತ ಎರಡನೇ ಜಯ ಸಾಧಿಸಿ ೧೦ ಅಂಕಗಳನ್ನು ಪಡೆದುಕೊಂಡಿತು.
ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯ ಮೊದಲಾರ್ಧದಲ್ಲಿ ತಮಿಳ್ ತಲೈವಾಸ್ ತಂಡ ಉತ್ತಮ ಪ್ರದರ್ಶನ ನೀಡಿತು. ಹೀಗಾಗಿ ಮುನ್ನಡೆಯ ಹಾದಿಯಲ್ಲಿ ಸಾಗಿತು. ಆದರೆ, ಪ್ರಥಮಾರ್ಧದ ಕೊನೇ ಹಂತದಲ್ಲಿ ಯು ಮುಂಬಾ ತಂಡ ತಿರುಗೇಟು ನೀಡಲು ಆರಂಭಿಸಿತು. ಆದಾಗ್ಯೂ ತಲೈವಾಸ್ ತಂಡ ೧೬- ೧೫ ಅಂಕಗಳ ಮುನ್ನಡೆಯನ್ನು ಉಳಿಸಿಕೊಂಡಿತ್ತು.
ದ್ವಿತೀಯಾರ್ಧದ ಆರಂಭದಿಂದಲೇ ಮೇಲು ಗೈ ಸಾಧಿಸಿದ ಮುಂಬಾ ಬಳಗ ಸತತವಾಗಿ ಅಂಕಗಳನ್ನು ಸಂಪಾದಿಸಿತು. ತಮಿಳ್ ತಂಡವನ್ನು ಎರಡು ಬಾರಿ ಆಲ್‌ಔಟ್ ಮಾಡುವ ಜತೆಗೆ ಒಟ್ಟಾರೆ ೨೪ ಅಂಕಗಳನ್ನು ಗಳಿಸಿತು. ಈ ಅವಧಿಯಲ್ಲಿ ತಮಿಳ್ ತಲೈವಾಸ್ ತಂಡಕ್ಕೆ ಕೇವಲ ೧೬ ಅಂಕಗಳನ್ನು ಮಾತ್ರ ಕ್ರೋಡೀಕರಿಸಲು ಸಾಧ್ಯವಾಯಿತು.
ಮುಂಬಾ ಬಳಗದ ಪರ ಗುಮನ್ ಸಿಂಗ್(೧೨), ಆಶಿಶ್ (೧೦) ಸೂಪರ್‌೧೦ ಸಾಧನೆ ಮಾಡಿದರು. ಜೈ ಭಗವಾನ್ ಕೂಡ ೮ ಅಂಕಗಳನ್ನು ತಂದುಕೊಟ್ಟರು. ತಲೈವಾಸ್ ಪರ ನರೇಂದರ್ (೧೫) ಸೂಪರ್ ೧೦ ಸಾಧನೆ ಮಾಡಿದ ಹೊರತಾಗಿಯೂ ಉಳಿದ ಆಟಗಾರರಿಂದ ಸೂಕ್ತ ನೆರವು ಲಭಿಸಲಿಲ್ಲ.