ಕೋಲ್ಕೊತಾ: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ(virat kohli) ಅವರು ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ಏಕದಿನ ಕ್ರಿಕೆಟ್ನ 49 ಶತಕದ ದಾಖಲೆಯನ್ನು ಸರಿಗಟ್ಟಿದರು. ಕೊಹ್ಲಿ ಅವರ ಈ ಶತಕವನ್ನು ಡಿಜಿಟಲ್ ಮಾಧ್ಯಮವೊಂದರಲ್ಲಿ 4.4 ಕೋಟಿ ವೀಕ್ಷಣೆ ಮಾಡಿದ್ದಾರೆ. ಇದೇ ವಿಚಾರವಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಮ್ಮ ಟ್ವಿಟರ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಇದಕ್ಕೆ ಡಿಜಿಟಲ್ ಇಂಡಿಯಾ ಕಾರಣ ಎಂದು ಬರೆದುಕೊಂಡಿದ್ದಾರೆ.
ಕೊಹ್ಲಿ ಅವರ ಈ ಶತಕವನ್ನು ಡಿಜಿಟಲ್ ಮಾಧ್ಯಮದ ಮೂಲಕ ಬರೋಬ್ಬರಿ 4 ಕೋಟಿ 40 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಇದೇ ವಿಚಾರದಲ್ಲಿ ಪೋಸ್ಟ್ ಮಾಡಿರುವ ಅಶ್ವಿನಿ ವೈಷ್ಣವ್, “ಇದು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಹೇಗೆ ಬೆಳೆಯುತ್ತಿದೆ ಎಂಬುದನ್ನು ತೋರಿಸಿದೆ. ಜನರು ಕಡಿಮೆ ದರದ ಡೇಟಾದಿಂದ ಇಂಟರ್ನೆಟ್ ಉಪಯೋಗಿಸುತ್ತಿದ್ದಾರೆ. ಇದು ಭಾರತದ ಡಿಜಿಟಲ್ ಲ್ಯಾಂಡ್‌ಸ್ಕೇಪ್ ಬದಲಾಯಿಸಿದೆ” ಎಂದು ಬರೆದುಕೊಂಡಿದ್ದಾರೆ.
“2011ರ ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನು ಅದೆಷ್ಟೋ ಟೀಮ್ ಇಂಡಿಯಾ ಅಭಿಮಾನಿಗಳು ಟೀವಿ ಶೋರೂಮ್‌ಗಳ, ಹೊಟೇಲ್ಗಳ ಮುಂದೆ ನಿಂತು ವೀಕ್ಷಿಸಿದ್ದರು. ಆದರೆ, ಈಗ ಪಂದ್ಯವನ್ನು ನೋಡಲು ಇಷ್ಟು ಕಷ್ಟ ಪಡಬೇಕಿಲ್ಲ. ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಇದೆ. ಇಲ್ಲೇ ಪಂದ್ಯವನ್ನು ವೀಕ್ಷಿಸುತ್ತಾರೆ. ಡಿಜಿಟಲ್ ಕಾಂತ್ರಿಯಿಂದಾಗಿ ಇಂದು ವಿರಾಟ್ ಕೊಹ್ಲಿಯ ಶತಕವನ್ನೂ ಇಷ್ಟು ಮಂದಿ ಒಂದೇ ಕ್ಷಣದಲ್ಲಿ ವೀಕ್ಷಿಸಲು ಸಾಧ್ಯವಾಯಿತು. ಇದು ಡಿಜಿಟಲ್ ಇಂಡಿಯಾದ ಯಶಸ್ಸಿನ ಸಂಕೇತವಾಗಿದೆ” ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
विराट का शतक
— Ashwini Vaishnaw (@AshwiniVaishnaw) November 5, 2023
और
4.4 करोड़ दर्शक
India enjoys lowest cost of data. #DigitalIndia का कमाल।#INDvSA pic.twitter.com/9QKDKTt2Fl
ಕೋಲ್ಕೊತಾದ ಐತಿಹಾಸಿಕ ಮೈದಾನ ಈಡನ್ ಗಾರ್ಡನ್ಸ್ನಲ್ಲಿ ನಡೆದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಅತ್ಯಂತ ತಾಳ್ಮೆಯುವ ಬ್ಯಾಟಿಂಗ್ ನಡೆಸಿ 121 ಎಸೆತಗಳಿಂದ ಅಜೇಯ 101 ರನ್ ಬಾರಿಸಿದರು. ಅವರ ಈ ಬ್ಯಾಟಿಂಗ್ ಇನಿಂಗ್ಸ್ನಲ್ಲಿ 10 ಬೌಂಡರಿ ದಾಖಲಾಯಿತು. ಹುಟ್ಟುಹಬ್ಬದಂದೆ ಕೊಹ್ಲಿ ಶತಕ ಬಾರಿಸಿದ್ದು ವಿಶೇಷ.
ಸಂಗಕ್ಕರ ದಾಖಲೆ ಪತನ
ಕೊಹ್ಲಿ ಅವರು 101 ರನ್ ಗಳಿಸಿ ವಿಶ್ವಕಪ್ನಲ್ಲಿ ಅತ್ಯಧಿಕ ರನ್ ಗಳಿಸಿದ ಸಾಧಕರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರುವ ಮೂಲಕ ಸಂಗಕ್ಕರ ದಾಖಲೆಯನ್ನು ಮುರಿದಿದ್ದಾರೆ. ಸಂಗಕ್ಕರ ಅವರು 37 ವಿಶ್ವಕಪ್ ಪಂದ್ಯಗಳನ್ನು ಆಡಿ 1532 ರನ್ ಬಾರಿಸಿದ್ದರು. ಇದೀಗ ವಿರಾಟ್ ಕೊಹ್ಲಿ 34* ಪಂದ್ಯಗಳನ್ನು ಆಡಿ 1573* ರನ್ ಬಾರಿಸಿದ್ದಾರೆ.
ಇದನ್ನೂ ಓದಿ Rohit Sharma: ಕೊಹ್ಲಿ ಬಗ್ಗೆ ಟೀಕೆ ಮಾಡಿದವರಿಗೆ ತಕ್ಕ ಉತ್ತರ ನೀಡಿದ ರೋಹಿತ್, ದ್ರಾವಿಡ್
ಪಂದ್ಯ ಗೆದ್ದ ಭಾರತ
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ವಿರಾಟ್ ಕೊಹ್ಲಿಯ ಶತಕ ಮತ್ತು ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 326 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಜೋಶ್ ಮರೆತು 27.1 ಓವರ್ಗಳಲ್ಲಿ 83 ರನ್ ಬಾರಿಸಿ ಸರ್ವಪತನ ಕಂಡಿತು. ಭಾರತ 243 ರನ್ಗಳ ಭರ್ಜರಿ ಗೆಲುವು ಸಾಧಿಸಿತು. ಭಾರತ ಪರ ಜಡೇಜಾ 5 ವಿಕೆಟ್ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಉಳಿದಂತೆ ಮೊಹಮ್ಮದ್ ಸಿರಾಜ್ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಕಿತ್ತರು. ಕಳೆದ ಪಂದ್ಯದಲ್ಲಿ 5 ವಿಕೆಟ್ ಉರುಳಿಸಿದ್ದ ಶಮಿ ಈ ಪಂದ್ಯದಲ್ಲಿ 1 ವಿಕೆಟ್ಗೆ ಸೀಮಿತರಾದರು.