ಚೆನ್ನೈ: ಮುಂಬರುವ ೪೪ನೇ ಆವೃತ್ತಿಯ ಚೆಸ್ ಒಲಿಂಪಿಯಾಡ್‌ಗೆ (Chess Olympiad) ಭಾರತ ಆತಿಥ್ಯ ವಹಿಸುತ್ತಿದೆ. ಜುಲೈ ೨೮ರಿಂದ ಆಗಸ್ಟ್ ೧೦ವರೆಗೆ ಜಾಗತಿಕ ಮಟ್ಟದ ಈ ಕೂಟ ನಡೆಯಲಿದೆ. ವಿಶೇಷ ಎಂದರೆ ಆತಿಥೇಯ ಭಾರತ ಈ ಬಾರಿ ಆರು ತಂಡವನ್ನು ಕಣಕ್ಕೆ ಇಳಿಸುತ್ತಿದ್ದು, ಒಟ್ಟಾರೆ ೩೦ ಚೆಟ್ ಪಟುಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಇದು ಭಾರತ ಚೆಸ್ ಇತಿಹಾಸದಲ್ಲಿ ದಾಖಲೆಯಾಗಿದೆ.
ಮಹಾಬಲಿಪುರಮ್‌ನಲ್ಲಿ ಚೆಸ್ ಒಲಿಂಪಿಯಾಡ್ ನಡೆಯಲಿದ್ದು, ದಾಖಲೆಯ ೧೮೭ ದೇಶಗಳು ಪಾಲ್ಗೊಳ್ಳಲಿವೆ. ಇದರಲ್ಲಿ ೧೮೮ ತಂಡಗಳು ಓಪನ್ ವಿಭಾಗ ಹಾಗೂ ೧೬೨ ತಂಡಗಳು ಮಹಿಳಾ ವಿಭಾಗದಲ್ಲಿ ಪಾಲ್ಗೊಳ್ಳಲಿವೆ. ಅಂತೆಯೇ ಭಾರತ ಮೂರು ತಂಡಗಳು ಓಪನ್ ವಿಭಾಗ ಹಾಗೂ ೩ ತಂಡಗಳು ಮಹಿಳಾ ವಿಭಾಗದಲ್ಲಿ ಸ್ಪರ್ಧಿಸಲಿವೆ. ಪ್ರತಿಯೊಂದು ತಂಡದಲ್ಲಿ ೫ ಆಟಗಾರರು ಇರುತ್ತಾರೆ. ಇವರಲ್ಲಿ ನಾಲ್ವರು ಸ್ಪರ್ಧಾಕಣಕ್ಕೆ ಇಳಿಯಬಹುದಾಗಿದೆ.
ಚೆಸ್ ಒಲಿಂಪಿಯಾಡ್ ೧೧ ಸುತ್ತಿನ ಸ್ವಿಸ್ ಲೀಗ್ ಮಾದರಿಯಲ್ಲಿ ನಡೆಯಲಿದೆ. ಓಪನ್ ವಿಭಾಗದಲ್ಲಿ ಸ್ಪರ್ಧಿಸುವ ಭಾರತ ತಂಡಗಳು ೨, ೧೧ ಹಾಗೂ ೧೧ನೇ ಶ್ರೇಯಾಂಕ ಹೊಂದಿದೆ. ಈ ತಂಡಗಳಲ್ಲಿ ಇರುವ ಎಲ್ಲ ಆಟಗಾರರು ಗ್ರ್ಯಾಂಡ್ ಮಾಸ್ಟರ್‌ಗಳು ಎಂಬುದು ವಿಶೇಷ.
ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸುವ ತಂಡಗಳು ೧, ೧೧ ಹಾಗೂ ೧೬ನೇ ಶ್ರೇಯಾಂಕ ಪಡೆದುಕೊಂಡಿವೆ.
ಭಾರತ ತಂಡ ೨೦೧೪ರ ನಾರ್ವೆ ಚೆಸ್ ಒಲಿಂಪಿಯಾಡ್‌ನ ಓಪನ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿತ್ತು. ಅಂತೆಯೇ ೨೦೨೦ರ ಆನ್‌ಲೈನ್ ಒಲಿಂಪಿಯಾಡ್‌ನಲ್ಲಿ ಜಂಟಿಯಾಗಿ ಚಿನ್ನದ ಪದಕ ಬಾಚಿಕೊಂಡಿತ್ತು. ೨೦೨೧ ಆನ್‌ಲೈನ್ ಆವೃತ್ತಿಯಲ್ಲಿ ಕಂಚಿನ ಪದಕಕ್ಕೆ ಭಾಜನವಾಗಿತ್ತು.
ಇದನ್ನೂ ಓದಿ | ಭಾರತದ ಆತಿಥ್ಯದಲ್ಲಿ ನಡೆಯಲಿದೆ Chess Olympiad ಈ ಸ್ಪರ್ಧೆಯ ವಿಶೇಷತೆ ಏನು?