Site icon Vistara News

ಹಿಮಚ್ಛಾದಿತ ಪರ್ವತಗಳ ನಡುವೆ 56 ಗಂಟೆಗಳಲ್ಲಿ 430 ಕಿ.ಮೀ cycling, ಮಹಿಳೆಯಿಂದ ಗಿನ್ನಿಸ್‌ ದಾಖಲೆ

cycling

ಬೆಂಗಳೂರು: ಬಾಲ್ಯದಿಂದ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವರಿಗೂ ೪೦ ವರ್ಷವೆಂದರೆ ನಿವೃತ್ತಿಯ ವಯಸ್ಸೇ. ಇನ್ನು ಮಹಿಳೆಯರಲ್ಲಂತೂ ಮದುವೆ, ಮಕ್ಕಳು ಎನ್ನುವಷ್ಟರಲ್ಲಿ ಬಾಹ್ಯ ಜಗತ್ತಿನಿಂದ ವಿಮುಖರಾಗುವವರೇ ಹೆಚ್ಚು. ಆದರೆ ಪುಣೆಯ ಚಿನಕುರುಳಿ ಮಹಿಳೆಯೊಬ್ಬರು ಸೈಕ್ಲಿಸ್ಟ್‌ ಲೇಹ್‌ನಿಂದ ಮನಾಲಿವರೆಗಿನ ಕ್ಲಿಷ್ಟಕರ ರಸ್ತೆಗಳಲ್ಲಿ ಅತಿ ಕಡಿಮೆ ಸಮಯದಲ್ಲಿ ಏಕಾಂಗಿಯಾಗಿ ಸೈಕಲ್‌ ಓಡಿಸಿ ಗಿನ್ನಿಸ್‌ ದಾಖಲೆಗೆ ಪಾತ್ರರಾಗಿದ್ದಾರೆ.

ಮೋಟಾರ್‌ ವಾಹನದ ಮೂಲಕವೇ ೧೨ ಗಂಟೆ ತಗುಲುವ ಈ ರಸ್ತೆಯನ್ನು ಅವರು ೫೬.೧೩ ಗಂಟೆಗಳಲ್ಲಿ ಸಾಗುವ ಮೂಲಕ ಇದುವರೆಗೆ ಯಾರೂ ಮಾಡದ ಸಾಧನೆಗೆ ಪಾತ್ರರಾಗಿದ್ದಾರೆ. ಅಂದಹಾಗೆ, ೪೫ ವರ್ಷ ವಯಸ್ಸಿನ ಪ್ರೀತಿ ಮಾಸ್ಕೆ ಹೆಸರಿನ ಈ ಕ್ರೀಡಾಪಟು ಎರಡು ಮಕ್ಕಳ ತಾಯಿ.

ಪ್ರೀತಿಯ ಸೈಕ್ಲಿಂಗ್‌ ಸಾಹಸಕ್ಕೆ ಗಡಿ ರಸ್ತೆ ಸಂಸ್ಥೆಯ (ಬಿಆರ್‌ಒ) ಮುಖ್ಯ ಎಂಜಿನಿಯರ್‌ ಬ್ರಿಗೇಡಿಯರ್‌ ಗೌರವ್‌ ಕರ್ಕಿ ಅವರು ಜೂನ್‌ ೨೨ರಂದು ಲೇಹ್‌ನಲ್ಲಿ ಹಸಿರು ನಿಶಾನೆ ತೋರಿದ್ದರು. ಮುಂದೆ ಮನಾಲಿವರೆಗಿನ ೪೩೦ ಕಿ.ಮೀ ರಸ್ತೆಯನ್ನು ೫೫ ತಾಸು ೧೩ ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದಾರೆ. ಈ ಮಾರ್ಗವು ಸಮುದ್ರ ಮಟ್ಟಕ್ಕಿಂತ ೮೦೦೦ ಮೀ. ಎತ್ತರದಲ್ಲಿದ್ದು, ಉಸಿರಾಟಕ್ಕೆ ಆಮ್ಲಜನಕದ ಕೊರತೆಯೂ ಇರುತ್ತದೆ. ಇಂಥ ಜಾಗದಲ್ಲಿ ಸೈಕಲ್ ಮೂಲಕ ಹತ್ತಿಳಿದಿದ್ದರಿಂದ ಈ ದಾರಿ ಅತಿ ಕ್ಲಿಷ್ಟವಾಗಿತ್ತು ಎಂದು ವಿಶ್ಲೇಷಕರು ಪರಿಗಣಿಸಿದ್ದಾರೆ. ಮಾತ್ರವಲ್ಲ, ದೇಶದ ೬೦೦೦ ಕಿ.ಮೀ ದೂರದ (ಮುಂಬಯಿ- ಚೆನ್ನೈ- ಕೋಲ್ಕೊತಾ- ನವ ದೆಹಲಿ- ಮುಂಬಯಿ) ಸ್ವರ್ಣ ಚತುಷ್ಪಥವನ್ನು ಅತಿ ವೇಗವಾಗಿ, ಅಂದರೆ ೨೪ ದಿನಗಳು ಮತ್ತು ಆರು ತಾಸಿನಲ್ಲಿ ಪೂರ್ಣಗೊಳಿಸಿದ ಮಹಿಳೆಯೆಂಬ ಗಿನ್ನಿಸ್‌ ದಾಖಲೆಗೂ ಪಾತ್ರರಾಗಿದ್ದಾರೆ. ದೀರ್ಘ ಸೈಕ್ಲಿಂಗ್‌ನಲ್ಲಿ ಹಲವಾರು ದಾಖಲೆಗಳು ಅವರ ಹೆಸರಿನಲ್ಲಿವೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಪ್ರೀತಿ ”ಆರೋಗ್ಯ ಸಮಸ್ಯೆಯಿಂದ ಹೊರಬರುವುದಕ್ಕಾಗಿ ನಾನು ಸೈಕಲ್‌ ಹೊಡೆಯಲು ಆರಂಭಿಸಿದ್ದೆ. ನನಗಾಗ ೪೦ ವರ್ಷ ವಯಸ್ಸು. ಇದು ನನ್ನಿಂದ ಸಾಧ್ಯವಾಗಿದೆ ಎಂದರೆ ಯಾವುದೇ ಮಹಿಳೆಯಿಂದಲೂ ಸಾಧ್ಯವಾದೀತು,” ಎಂದು ಹೇಳಿದ್ದಾರೆ. ಲೇಹ್‌- ಮನಾಲಿ ರಸ್ತೆಯ ೪೩೦ ಕಿ.ಮೀ ಪೂರ್ಣಗೊಳಿಸಲು ೬೦ ತಾಸುಗಳ ಗಡುವು ಗಿನ್ನಿಸ್‌ ದಾಖಲೆಯ ಅಧಿಕಾರಿಗಳು ನೀಡಿದ್ದರು. ಆದರೂ ೫೫ ತಾಸುಗಳಲ್ಲಿ ಸಾಧಿಸಲು ಸಾಧ್ಯವಾಗಿದೆ. ಎತ್ತರದ ಕಣಿವೆಗಳನ್ನು ದಾಟುವಾಗ ಉಸಿರಾಟದ ಸಮಸ್ಯೆಯಿಂದಾಗಿ ಎರಡು ಬಾರಿ ಕೃತಕ ಆಮ್ಲಜನಕ ತೆಗೆದುಕೊಳ್ಳುವಂತಾಯಿತು,” ಎಂದು ಪ್ರೀತಿ ತಿಳಿಸಿದ್ದಾರೆ.

ಅತಿಯಾದ ಗಾಳಿ, ಹಿಮ, ಉಷ್ಣತೆಯಂಥ ತೀರಾ ಪ್ರತಿಕೂಲ ಹವಾಮಾನವನ್ನೂ ಎದುರಿಸಿ ಅವರು ಈ ಸಾಧನೆ ಮಾಡಿದ್ದಾರೆ. ಬಿಆರ್‌ಒ ನಮಗೆ ಉತ್ತಮ ಸಹಕಾರ ನೀಡಿದೆ. ಉಪಗ್ರಹ ಸಂಪರ್ಕಿತ ಫೋನ್‌ ಮತ್ತು ವೈದ್ಯಕೀಯ ಸೌಲಭ್ಯ ಹೊಂದಿರುವ ಎರಡು ಸುಸಜ್ಜಿತ ವಾಹನಗಳನ್ನು ನಮ್ಮ ಬೆಂಗಾವಲಿಗೆ ಅವರು ನೀಡಿದ್ದರು ಎಂದು ಪ್ರೀತಿ ಅವರ ತಂಡದಲ್ಲಿದ್ದ ಆನಂದ್‌ ಕನ್ಸಲ್‌ ಹೇಳಿದ್ದಾರೆ.

ಇದನ್ನೂ ಓದಿ: ಸೈಕ್ಲಿಂಗ್ ಎಂದು ಹೋಗಿ ನಾಪತ್ತೆಯಾಗಿದ್ದ ಬಾಲಕರನ್ನ ಕರೆತಂದ ಪೊಲೀಸರು

Exit mobile version