Site icon Vistara News

IND vs Pak | ಪಾಕಿಸ್ತಾನ ವಿರುದ್ಧದ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಸೃಷ್ಟಿಸಿದ ಐದು ದಾಖಲೆಗಳಿವು

ind vs pak

ಮೆಲ್ಬೋರ್ನ್‌ : ಪಾಕಿಸ್ತಾನ ವಿರುದ್ಧ ಟಿ೨೦ ವಿಶ್ವ ಕಪ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಭಾರಿಸಿರುವ ಅಜೇಯ ೮೨ ರನ್‌ಗಳು ಅವರಿಗೆ ಗೆಲುವಿನ ಖ್ಯಾತಿ ತಂದುಕೊಟ್ಟಿರುವ ಜತೆಗೆ ಹಲವಾರು ದಾಖಲೆಗಳನ್ನು ಸೃಷ್ಟಿ ಮಾಡುವುದಕ್ಕೆ ನೆರವಾಗಿದೆ. ಸೋಲಿನ ಸುಳಿಯಲ್ಲಿ ಸಿಲುಕಿದ್ದ ಭಾರತ ತಂಡವನ್ನು ಅವರು ಪಾರು ಮಾಡಿದ ರೀತಿಗೆ ವಿಶ್ವ ಕ್ರಿಕೆಟ್‌ನ ಪರಿಣತರೆಲ್ಲರೂ ಕೊಂಡಾಡುತ್ತಿರುವ ನಡುವೆ ಅವರು ಐದು ದಾಖಲೆಗಳನ್ನೂ ತಮ್ಮೆಸರಿಗೆ ಬರೆದುಕೊಂಡಿದ್ದಾರೆ. ಇದರೊಂದಿಗೆ ಅವರು ವಿಶ್ವ ಕ್ರಿಕೆಟ್‌ನ ದಾಖಲೆಗಳ ಸರದಾರ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.

೧) ತಂಡವೊಂದರ ವಿರುದ್ಧ ೫೦೦ ರನ್‌

ವಿರಾಟ್‌ ಕೊಹ್ಲಿ ಈಗ ಟಿ೨೦ ವಿಶ್ವ ಕಪ್‌ನಲ್ಲಿ ತಂಡವೊಂದರ ವಿರುದ್ಧ ೫೦೦ ಪ್ಲಸ್ ರನ್‌ಗಳನ್ನು ಬಾರಿಸಿದ ವಿಶ್ವದ ಮೊದಲ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ಅವರು ಪಾಕಿಸ್ತಾನ ವಿರುದ್ಧ ವಿಶ್ವ ಕಪ್ ಪಂದ್ಯಗಳಲ್ಲಿ ೫೦೧ ರನ್‌ಗಳನ್ನು ಬಾರಿಸಿದ್ದಾರೆ. ಪಂದ್ಯಕ್ಕೆ ಮೊದಲು ಅವರು ೪೧೯ ರನ್‌ಗಳನ್ನು ಪೇರಿಸಿದ್ದರು. ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಅವರ ಮಾಜಿ ಸಹ ಆಟಗಾರ ಹಾಗೂ ದಕ್ಷಿಣ ಆಫ್ರಿಕಾದ ಬ್ಯಾಟರ್‌ ಎಬಿ ಡಿ ವಿಲಿಯರ್ಸ್‌ ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಅವರು ವೆಸ್ಟ್‌ ಇಂಡೀಸ್‌ ವಿರುದ್ಧ ೪೫೮ ರನ್ ಬಾರಿಸಿದ್ದಾರೆ.

ಪಾಕಿಸ್ತಾನ ವಿರುದ್ಧ ೧೧೩ ರನ್‌ ಜತೆಯಾಟ

ಮಧ್ಯಮ ಕ್ರಮಾಂಕದ ಬ್ಯಾಟರ್‌ ಹಾರ್ದಿಕ್ ಪಾಂಡ್ಯ ಜತೆ ವಿರಾಟ್‌ ಕೊಹ್ಲಿ ಬಾರಿಸಿದ ೧೧೩ ರನ್‌ಗಳ ಜತೆಯಾಟ, ಪಾಕ್‌ ವಿರುದ್ಧ ಟಿ೨೦ ಮಾದರಿಯಲ್ಲಿ ಭಾರತ ದಾಖಲಿಸಿದ ಗರಿಷ್ಠ ಮೊತ್ತದ ಜತೆಯಾಟವಾಗಿದೆ. ೨೦೧೨ರಲ್ಲಿ ಮಹೇಂದ್ರ ಸಿಂಗ್‌ ಧೋನಿ ಹಾಗೂ ಯುವರಾಜ್‌ ಸಿಂಗ್‌ ಬಾರಿಸಿದ್ದ ೯೭ ರನ್‌ಗಳ ಜತೆಯಾಟ ಈ ಹಿಂದಿನ ಗರಿಷ್ಠ ಮೊತ್ತವಾಗಿತ್ತು.

ಐಸಿಸಿ ಟೂರ್ನಿಗಳಲ್ಲಿ ಗರಿಷ್ಠ ೫೦ ಪ್ಲಸ್‌ ಸ್ಕೋರ್‌

ವಿರಾಟ್‌ ಕೊಹ್ಲಿ ಈಗ ಐಸಿಸಿ ಟೂರ್ನಿಗಳಲ್ಲಿ ಗರಿಷ್ಠ ೫೦ ಪ್ಲಸ್‌ ಬಾರಿಸಿದ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ೨೦೦೯ರಲ್ಲಿ ಐಸಿಸಿ ಚಾಂಪಿಯನ್‌ಷಿಪ್‌ ಆಡಿದ ಬಳಿಕ ಇಲ್ಲಿಯವರೆಗೆ ಅವರು ಐಸಿಸಿ ಟೂರ್ನಿಯಲ್ಲಿ ೨೪ ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಅವರು ಭಾರತ ತಂಡದ ಲೆಜೆಂಡ್‌ ಸಚಿನ್‌ ತೆಂಡೂಲ್ಕರ್ ಅವರ ದಾಖಲೆ ಮುರಿದಿದ್ದಾರೆ. ಅವರು ೨೩ ಅರ್ಧ ಶತಕಗಳನ್ನು ಬಾರಿಸಿದ್ದರು. ರೋಹಿತ್ ಶರ್ಮ ೨೨ ಅರ್ಧ ಶತಕಗಳನ್ನು ಬಾರಿಸಿದ್ದಾರೆ.

ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ

ವಿರಾಟ್‌ ಕೊಹ್ಲಿ ಪಾಕ್‌ ವಿರುದ್ಧದ ಅಮೋಘ ಇನಿಂಗ್ಸ್‌ಗಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು. ಇದರೊಂದಿಗೆ ಟಿ೨೦ ವಿಶ್ವ ಕಪ್‌ನಲ್ಲಿ ಅವರು ಪಡೆದ ಪಂದ್ಯಶ್ರೇಷ್ಠ ಪುರಸ್ಕಾರ ೧೪ಕ್ಕೇರಿದ್ದು, ಗರಿಷ್ಠ ಪ್ರಶಸ್ತಿ ಪಡೆದ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಅಫಘಾನಿಸ್ತಾನದ ಮೊಹಮ್ಮದ್ ನಬಿ ೧೩ ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಇದ್ದರೆ, ರೋಹಿತ್‌ ಶರ್ಮ ೧೨ ಬಾರಿ ಪ್ರಶಸ್ತಿ ಪಡೆದು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ಗರಿಷ್ಠ ವೈಯಕ್ತಿಕ ರನ್‌ಗಳ ಸಾಧನೆ

ವಿರಾಟ್ ಕೊಹ್ಲಿ ಈಗ ಟಿ೨೦ ಮಾದರಿಯಲ್ಲಿ ಗರಿಷ್ಠ ರನ್‌ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ೧೦೨ ಇನಿಂಗ್ಸ್‌ನಲ್ಲಿ ಆಡಿರುವ ಅವರು ಒಟ್ಟಾರೆ 3,794 ರನ್‌ ಬಾರಿಸಿದ್ದಾರೆ. ೧೩೫ ಇನಿಂಗ್ಸ್‌ಗಳಲ್ಲಿ 3,741 ರನ್‌ ಬಾರಿಸಿರುವ ರೋಹಿತ್‌ ಶರ್ಮ ವಿರಾಟ್‌ಗಿಂತ  53 ರನ್‌ ಹಿಂದಕ್ಕಿದ್ದಾರೆ.

ಇದನ್ನೂ ಓದಿ | IND vs PAK | ಚೇಸ್‌ ಮಾಸ್ಟರ್‌ ವಿರಾಟ್‌ ಕೊಹ್ಲಿಯ ಸಾಮರ್ಥ್ಯ ಮತ್ತೊಮ್ಮೆ ಸಾಬೀತು

Exit mobile version