ಜೀಲಾಂಗ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವ ಕಪ್(T20 World Cup)ನ ಮೊದಲ ಸುತ್ತಿನ ಪಂದ್ಯದಲ್ಲಿ ಶ್ರೀಲಂಕಾ 79 ರನ್ಗಳ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಈ ಬಾರಿಯ ವಿಶ್ವ ಕಪ್‌ನಲ್ಲಿ ಶ್ರೀಲಂಕಾ ಗೆಲುವಿನ ಖಾತೆ ತೆರೆದಿದೆ. ಮೊದಲ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಸೋತು ಲಂಕಾ ಪಡೆ ಭಾರೀ ಮುಖಭಂಗಕ್ಕೆ ಒಳಗಾಗಿತ್ತು.
ಯುಎಇ ವಿರುದ್ಧ ಮಂಗಳವಾರ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ 8 ವಿಕೆಟ್ಗೆ 158 ರನ್ ಪೇರಿಸಿತು. ಬಳಿಕ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಯುಎಇ 17.1 ಓವರ್ಗಳಲ್ಲಿ 73 ರನ್‌ಗಳಿಗೆ ಸರ್ವ ಪತನ ಕಂಡಿತು.
ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ಉತ್ತಮ ಆರಂಭ ಪಡೆಯಿತು. ಅಗ್ರ ಕ್ರಮಾಂಕದ ಆಟಗಾರರಾದ ಪಾತುಮ್ ನಿಸ್ಸಾಂಕ ಮತ್ತು ಕುಸಲ್ ಮೆಂಡಿಸ್ ಮೊದಲ ವಿಕೆಟ್ಗೆ 42 ರನ್ ಒಟ್ಟುಗೂಡಿಸಿದರು. ಬಳಿಕ ದ್ವಿತೀಯ ವಿಕೆಟ್ಗೆ ಜತೆಯಾದ ಧನಂಜಯ ಡಿ ಸಿಲ್ವ (33) ಉತ್ತಮ ಪ್ರದರ್ಶನ ತೋರಿದರು. ಆದರೆ ಈ ವಿಕೆಟ್ ಪತನದ ಬಳಿಕ ಲಂಕಾದ ಯಾವ ಆಟಗಾರನು ಎರಡಂಕ್ಕಿ ಮೊತ್ತ ಪೇರಿಸಲು ವಿಫಲರಾದರು. ಲಂಕಾ ಪರ ಪಾತುಮ್ ನಿಸ್ಸಾಂಕ (74) ಅರ್ಧ ಶತಕ ಬಾರಿಸಿದರು. ಯುಎಇ ಪರ ಸ್ಪಿನ್ನರ್ ಕಾರ್ತಿಕ್ ಮೇಯಪ್ಪನ್ ಹ್ಯಾಟ್ರಿಕ್ ವಿಕೆಟ್ ಕಿತ್ತು ಮಿಂಚಿದರು.
ಶ್ರೀಲಂಕಾ ತಂಡ ನೀಡಿದ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಯುಎಇ ತಂಡ ಆರಂಭದಿಂದಲೇ ಆಘಾತಕ್ಕೆ ಒಳಗಾಯಿತು. ಯಾವ ಆಟಗಾರನಿಗೂ ಹೆಚ್ಚು ಹೊತ್ತು ಕ್ರೀಸ್ ಆಕ್ರಮಿಸಲು ಸಾಧ್ಯವಾಗಲೇ ಇಲ್ಲ. ಪರಿಣಾಮ ಕೇವಲ 17.1 ಓವರ್‌ನಲ್ಲಿ ಯುಎಇ 73 ರನ್ ಗಳಿಸಿ ಆಲ್‌ಔಟ್ ಆಯಿತು. ಬೌಲಿಂಗ್‌ನಲ್ಲಿ ಶ್ರೀಲಂಕಾ ಪರ ದುಷ್ಮಂತ ಚಾಮಿರ ಹಾಗೂ ವಾನಿಂದು ಹಸರಂಗ ತಲಾ ಮೂರು ವಿಕೆಟ್ ಪಡೆದು ಮಿಂಚಿದರು.
ಸ್ಕೋರ್ ವಿವರ:
ಶ್ರೀಲಂಕಾ: 20 ಓವರ್ಗಳಲ್ಲಿ 8 ವಿಕೆಟಿಗೆ 158 ( ಪಾತುಮ್ ನಿಸ್ಸಾಂಕ 74, ಧನಂಜಯ ಡಿ ಸಿಲ್ವ 33, ಕಾರ್ತಿಕ್ ಮೇಯಪ್ಪನ್ 19ಕ್ಕೆ 3, ಜಾಹೂರ್ ಖಾನ್ 26ಕ್ಕೆ 2).
ಯುಎಇ: 17.1 ಓವರ್ಗಳಲ್ಲಿ 73ಕ್ಕೆ ಆಲೌಟ್ (ಅಯಾನ್ ಅಫ್ಜಲ್ ಖಾನ್ 19, ಜುನೈದ್ ಸಿದ್ಧಿಕ್ 18, ದುಷ್ಮಂತ ಚಮೀರಾ 15ಕ್ಕೆ 3, ಹಸರಂಗ 8ಕ್ಕೆ 3). ಪಂದ್ಯಶ್ರೇಷ್ಠ: ಪಾತುಮ್ ನಿಸ್ಸಾಂಕ
ಇದನ್ನೂ ಓದಿ | T20 World Cup | ವಿಶ್ವ ಕಪ್‌ನಲ್ಲಿ ಆಡುತ್ತಿರುವ ಪ್ರಮುಖ ಕಿರಿಯ ಆಟಗಾರರು ಯಾರು, ಅವರ ಸಾಧನೆ ಏನು?