ಮೆಲ್ಬೋರ್ನ್ : ಟಿ೨೦ ವಿಶ್ವ ಕಪ್‌ನಿಂದ ಭಾರತ ತಂಡ ಹೊರ ಬಿದ್ದಿದೆ. ಆದರೆ, ಟೂರ್ನಿಯ ಫೈನಲ್ ಪಂದ್ಯ ಭಾನುವಾರ ನಡೆಯಲಿದ್ದು ಕ್ರಿಕೆಟ್ ಜ್ವರ ಇನ್ನೂ ಕಡಿಮೆಯಾಗಿಲ್ಲ. ಪ್ರಮುಖವಾಗಿ ಕ್ರಿಕೆಟ್ ಜನಕರೆನಿಸಿಕೊಂಡಿರುವ ಇಂಗ್ಲೆಂಡ್ ಹಾಗೂ ಭಾರತದವರಷ್ಟೇ ಕ್ರಿಕೆಟ್ ಪ್ರೇಮಿಗಳನ್ನು ಹೊಂದಿರುವ ಪಾಕಿಸ್ತಾನ ತಂಡ ಫೈನಲ್‌ಗೇರಿದೆ. ಹೀಗಾಗಿ ಜಿದ್ದಾಜಿದ್ದಿನ ಹಣಾಹಣಿ ಖಚಿತ ಹಾಗೂ ಎಮ್‌ಸಿಜಿ ಸ್ಟೇಡಿಯಮ್ ಪ್ರೇಕ್ಷಕರಿಂದ ತುಂಬಿ ತುಳುಕುವುದು ಬಹುತೇಕ ಖಾತರಿ. ಆದರೆ, ಇವರೆಲ್ಲರಿಗೆ ನಿರಾಸೆ ಮೂಡಿಸಲು ಮಳೆರಾಯ ಸಜ್ಜಾಗಿದ್ದಾನೆ ಎಂದು ವರದಿಯಾಗಿದೆ.
ಮೆಲ್ಬೋರ್ನ್‌ನಲ್ಲಿ ಮುಂದಿನ ಭಾನುವಾರ, ಸೋಮವಾರ ಸೇರಿದಂತೆ ಹಲವು ದಿನಗಳ ಕಾಲ ಜೋರು ಮಳೆಯಾಗುವ ಸಾಧ್ಯತೆಗಳಿವೆ ಎಂದು ಅಲ್ಲಿನ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಿಖರವಾಗಿ ಶೇಕಡಾ ೯೫ ಮಳೆ ಸುರಿಯುವ ಸಂಭವವಿದೆ ಎಂದು ಹೇಳುತ್ತಿದೆ. ಸುಮಾರು ೮ರಿಂದ ೨೦ ಮಿಲಿ ಮೀಟರ್ ಮಳೆಯ ನಿರೀಕ್ಷೆ ಮಾಡಲಾಗಿದೆ. ಹೀಗಾಗಿ ಎರಡೂ ದಿನಗಳು ಮಳೆ ಸುರಿದರೆ ಫೈನಲ್ ಪಂದ್ಯ ಕೊಚ್ಚಿ ಹೋಗುವುದು ಗ್ಯಾರಂಟಿ.
ಮುಂದೇನು?
ವಿಶ್ವ ಕಪ್‌ನ ಫೈನಲ್ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿ ಮಾಡಲಾಗಿದೆ. ಅಂದರೆ ಭಾನುವಾರ ಏನಾದರೂ ಕನಿಷ್ಠ ೧೦ ಓವರ್‌ಗಳ ಇನಿಂಗ್ಸ್‌ಗಳನ್ನು ನಡೆಸಲು ಸಾಧ್ಯವಾಗದೇ ಹೋದರೆ ಸೋಮವಾರ ಪಂದ್ಯವನ್ನು ನಡೆಸಬೇಕಾಗುತ್ತದೆ. ಆದರೆ, ಹವಾಮಾನ ಇಲಾಖೆಯ ನಿರೀಕ್ಷೆ ಪ್ರಕಾರ ಸೋಮವಾರವೂ ವರುಣ ದೇವ ಕೃಪೆ ತೋರುವ ಸಾಧ್ಯತೆಗಳು ಇಲ್ಲ. ಐಸಿಸಿ ನಿಯಮದ ಪ್ರಕಾರ ಮೀಸಲು ದಿನದಂದು ಪಂದ್ಯದ ಒಟ್ಟು ಅವಧಿಯನ್ನು ಎರಡು ಗಂಟೆ ವಿಸ್ತರಿಸಲು ಸಾಧ್ಯವಿದೆ. ಇಷ್ಟಾಗಿಯೂ ಆಗದಿದ್ದರೆ ಇತ್ತಂಡಗಳು ಪ್ರಶಸ್ತಿ ಹಂಚಿಕೊಳ್ಳಬೇಕಾಗುತ್ತದೆ.
ವಿಶ್ವ ಕಪ್ ಆರಂಭಗೊಂಡ ಬಳಿಕದಿಂದಲೂ ಮೆಲ್ಬೋರ್ನ್‌ನಲ್ಲಿ ಸತತವಾಗಿ ಮಳೆ ಸುರಿಯುತ್ತಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಇಲ್ಲೇ ನಡೆದಿರುವ ಹೊರತಾಗಿಯೂ ಇಲ್ಲಿ ಆಯೋಜನೆಗೊಂಡಿದ್ದ ಲೀಗ್ ಹಂತದ ಮೂರು ಪಂದ್ಯಗಳು ಮಳೆಯಿಂದ ರದ್ದಾಗಿದ್ದವು. ಆತಿಥೇಯ ಆಸ್ಟ್ರೇಲಿಯಾ ತಂಡ ಗುಂಪು ಹಂತದಿಂದ ಹೊರಕ್ಕೆ ಬೀಳುವುದಕ್ಕೂ ಮಳೆಯೇ ಕಾರಣವಾಗಿತ್ತು.
ಇದನ್ನೂ ಓದಿ ವ| Team India | ವಿಶ್ವ ಕಪ್ ನಿರ್ಗಮನದ ಬಳಿಕ ಟೀಮ್ ಇಂಡಿಯಾ ಕೋಚಿಂಗ್ ಸಿಬ್ಬಂದಿಗೆ ರಜಾ ಕೊಟ್ಟ ಬಿಸಿಸಿಐ!