Site icon Vistara News

ಚೊಚ್ಚಲ ಏಕದಿನ ಪಂದ್ಯದಲ್ಲೇ ದಾಖಲೆ ಬರೆದ ಬಡಗಿಯ ಮಗಳು

Amanjot Kaur

ಮಿರ್ಪುರ್​: ಮೊಹಾಲಿಯ ಬಡಗಿಯೊಬ್ಬರ ಮಗಳಾಗಿರುವ ಅಮನ್‌ಜೋತ್‌ ಕೌರ್​(Amanjot Kaur) ಚೊಚ್ಚಲ ಏಕದಿನ ಪಂದ್ಯದಲ್ಲೇ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಪದಾರ್ಪಣ ಪಂದ್ಯದಲ್ಲೇ ಕಡಿಮೆ ರನ್​ ನೀಡಿ ಅತ್ಯಧಿಕ ವಿಕೆಟ್​ ಕಿತ್ತ ಭಾರತದ ಮಹಿಳಾ ತಂಡದ ಎರಡನೇ ಆಟಗಾರ್ತಿ ಎಂಬ ಹಿರಿಗೆಮೆ ಪಾತ್ರರಾಗಿದ್ದಾರೆ.

ಮಿರ್ಪುರದ ಶೇರ್‌ ಎ ಬಾಂಗ್ಲಾ ನ್ಯಾಶನಲ್‌ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಬಾಂಗ್ಲಾದೇಶ(Bangladesh Women vs India Women, 1st ODI) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಮೋಘ ಬೌಲಿಂಗ್​ ಪ್ರದರ್ಶನ ತೋರಿದ ಅಮನ್‌ಜೋತ್‌ ಒಟ್ಟು 9 ಓವರ್​ ಬೌಲಿಂಗ್​ ನಡೆಸಿ 2 ಮೇಡನ್​ ಸಹಿತ 31 ರನ್​ ವೆಚ್ಚದಲ್ಲಿ 4 ವಿಕೆಟ್​ ಕಬಳಿಸಿದರು. ಈ ಮೂಲಕ ಪದಾರ್ಪಣ ಪಂದ್ಯದಲ್ಲೇ ಹೆಚ್ಚು ವಿಕೆಟ್​ ಪಡೆದ ಎರಡನೇ ಭಾರತೀಯ ಆಟಗಾರ್ತಿ ಎನಿಸಿಕೊಂಡರು. ಇದಕ್ಕೂ ಮುನ್ನ 1987 ರಲ್ಲಿ ಭಾರತೀಯ ಆಟಗಾರ್ತಿ ಪೂರ್ಣಿಮಾ ಚೌಧರಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಚೊಚ್ಚಲ ಪಂದ್ಯದಲ್ಲಿ 8 ಓವರ್​ಗಳಲ್ಲಿ 21 ರನ್​ಗೆ 5 ವಿಕೆಟ್ ಕಬಳಿಸಿದ್ದರು.

ಇದೇ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಹಿಳಾ ಟಿ20 ತ್ರಿಕೋನ ಕ್ರಿಕೆಟ್‌ ಸರಣಿಯಲ್ಲಿ ಭಾರತ ಟಿ20 ತಂಡಕ್ಕೆ ಅಮನ್‌ಜೋತ್‌ ಕೌರ್ ಪದಾರ್ಪಣೆ ಮಾಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಈ ಪಂದ್ಯದಲ್ಲಿ ಅಮನ್‌ಜೋತ್‌ ಅಮೋಘ ಬ್ಯಾಟಿಂಗ್‌(30 ಎಸೆತಗಳಿಂದ 40 ರನ್) ಸಾಹಸ ನಡೆಸಿ ಪದಾರ್ಪಣ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದರು. ಈ ಬಾರಿ ಡಬ್ಲ್ಯುಪಿಎಲ್​ನಲ್ಲಿಯೂ ಅವರು ಮುಂಬೈ ಇಂಡಿಯನ್ಸ್​ ಪರ ಶ್ರೇಷ್ಠ ಪ್ರದರ್ಶನ ತೋರಿದ್ದರು.

ಇದನ್ನೂ ಓದಿ WPL 2023 : ಸೇಡು ತೀರಿಸಿಕೊಂಡ ಡೆಲ್ಲಿ ಪಡೆ, ಮುಂಬಯಿ ವಿರುದ್ಧ 9 ವಿಕೆಟ್​ ಸುಲಭ ಜಯ

ಬಾಂಗ್ಲಾ ವಿರುದ್ಧ ಅಮನ್‌ಜೋತ್‌ 4 ವಿಕೆಟ್​ ಕಬಳಿಸಿದರೂ ಭಾರತ ತಂಡ ಬ್ಯಾಟಿಂಗ್​ ವಿಭಾಗದಲ್ಲಿ ವೈಫಲ್ಯ ಕಂಡು 40 ರನ್​ಗಳ ಸೋಲು ಕಂಡಿತು. ಈ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆಯಿತು. ಆದರೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯವನ್ನು 44 ಓವರ್​ಗೆ ಸೀಮಿತಗೊಳಿಸಲಾಯಿತು. ಮಳೆ ನಿಂತ ಬಳಿಕ ಬ್ಯಾಟಿಂಗ್​ ನಡೆಸಿದ ಬಾಂಗ್ಲಾ 43 ಓವರ್​ಗಳಲ್ಲಿ 152ರನ್​ಗೆ ಆಲೌಟಾಯಿತು. ಸುಲಭ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡದ ಆಟಗಾರ್ತಿಯರು ಪೆವಿಲಿಯನ್​ ಪರೇಡ್​ ನಡೆಸಿ 35.5 ಓವರ್​ಗಳಲ್ಲಿ ಕೇವಲ 113 ರನ್​ಗಳಿಸಲಷ್ಟೇ ಶಕ್ತವಾಯಿತು.

ಸ್ಟಾರ್​ ಆಟಗಾರ್ತಿ ಸ್ಮೃತಿ ಮಂಧಾನ(Smriti Mandhana) ಅವರು ಟಿ20 ಸರಣಿಯಲ್ಲಿ ಅನುಭವಿಸಿದ ಘೋರ ಬ್ಯಾಟಿಂಗ್​ ವೈಫಲ್ಯ ಈ ಪಂದ್ಯದಲ್ಲಿಯೂ ಮುಂದುವರಿಯಿತು. ಕೇವಲ 11 ರನ್​ಗೆ ಸೀಮಿತರಾದರು. ಈ ಮೊತ್ತಕ್ಕೆ 12 ಎಸೆತ ತೆಗೆದುಕೊಂಡರು. ಯಾಸ್ತಿಕಾ ಭಾಟಿಯಾ ಕೂಡ 15 ರನ್​ ಗಳಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದರು. 2 ವರ್ಷಗಳ ಬಳಿಕ ಆಡಲಿಳಿದ ಪ್ರಿಯಾ ಪೂನಿಯಾ(Priya Punia) ಕೂಡ ಬ್ಯಾಟಿಂಗ್​ ಪ್ರದರ್ಶನ ತೋರ್ಪಡಿಸುವಲ್ಲಿ ಎಡವಿದರು. ಅವರ ಗಳಿಕೆ 10 ರನ್​ಗೆ ಕೊನೆಗೊಂಡಿತು. ಉಭಯ ತಂಡಗಳ ನಡುವಣ ದ್ವಿತೀಯ ಏಕದಿನ ಪಂದ್ಯ ಜುಲೈ 19ರಂದು ಇದೇ ಸ್ಟೇಡಿಯಂನಲ್ಲಿ ನಡೆಯಲಿದೆ. ಸರಣಿ ಜೀವಂತವಾಗಿಡಬೇಕಿದ್ದರೆ ಹರ್ಮನ್​ಪ್ರೀತ್​ ಕೌರ್​ ಬಳಗಕ್ಕೆ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

Exit mobile version