ರಾಜ್ಕೋಟ್ : ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಮ್ನಲ್ಲಿ ಶನಿವಾರ (ಜನವರಿ 7ರಂದು) ಭಾರತದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅಬ್ಬರಿಸಿದ್ದರು. ಗ್ರೌಂಡ್ನ ಮೂಲೆಮೂಲೆಗೂ ಅವರು ಚೆಂಡನ್ನು ಕಳುಹಿಸಿದ್ದರು. ಅವರು ಕ್ರೀಸ್ನಲ್ಲಿ ಇದ್ದಷ್ಟೂ ಹೊತ್ತು ಲಂಕಾ ಬೌಲರ್ಗಳು ಎಲ್ಲಿಗೆ ಚೆಂಡೆಸೆಯುವುದು ಎಂಬ ಗೊಂದಲಕ್ಕೆ ಬಿದಿದ್ದರು. ಅವರ ಬ್ಯಾಟಿಂಗ್ ಅಬ್ಬರ ಆ ಮಟ್ಟಿಗೆ ಇತ್ತು ಹಾಗೂ ಟೀಮ್ ಇಂಡಿಯಾದ ರನ್ ಗ್ರಾಫ್ ಏರುತ್ತಲೇ ಹೋಗಿತ್ತು.
ಸೂರ್ಯಕುಮಾರ್ ಯಾದವ್ ಒಟ್ಟು 51 ಎಸೆತಗಳನ್ನು ಎದುರಿಸಿ 112 ರನ್ ಬಾರಿಸಿದ್ದರು. ಈ ಮೂಲಕ ಅವರು ಲಂಕಾ ವಿರುದ್ಧದ ಸರಣಿಯ ಗೆಲುವಿನ ರೂವಾರಿ ಎನಿಸಿಕೊಂಡರು. ಭಾರತ ತಂಡ ಈ ಪಂದ್ಯದಲ್ಲಿ 91 ರನ್ಗಳ ಭರ್ಜರಿ ವಿಜಯ ಸಾಧಿಸಿದೆ. ಸೂರ್ಯನ ಈ ಅಬ್ಬರಕ್ಕೆ ಕ್ರಿಕೆಟ್ ಜಗತ್ತೇ ಶಹಬ್ಬಾಸ್ ಹೇಳುತ್ತಿದೆ. ಅಂತೆಯೇ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಇನ್ಸ್ಟಾಗ್ರಾಮ್ ಮೂಲಕ ಶುಭಾಶಯ ಹೇಳಿದ್ದರು. ಅದಕ್ಕೆ ಸೂರ್ಯಕುಮಾರ್ ಯಾದವ್ ಪ್ರತಿಕ್ರಿಯಿಸಿದ ರೀತಿ ವಿಭಿನ್ನವಾಗಿತ್ತು.
ಪಂದ್ಯದ ಮುಕ್ತಾಯದ ಬಳಿಕ ನಡೆದ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಮುಗಿದಿ ಕ್ಲಾಕ್ ರೂಮ್ಗೆ ನಿಧಾನವಾಗಿ ಬಂದು ಮೊಬೈಲ್ ಓಪನ್ ಮಾಡಿ ಕೊಹ್ಲಿಗೆ ಪ್ರತಿಕ್ರಿಯೆಕೊಡುವ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ.
ಅಭಿಮಾನಿಗಳಿಗೆ ಕೈ ಕುಲುಕುತ್ತಾ ಡ್ರೆಸಿಂಗ್ ರೂಮ್ಗೆ ಕಾಲಿಟ್ಟ ಸೂರ್ಯಕುಮಾರ್ ಯಾದವ್ ಮೊದಲು ಮೊಬೈಲ್ ನೋಡುತ್ತಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿರಾಟ್ ಕೊಹ್ಲಿ ಪ್ರಶಂಸೆಯ ಮೆಸೇಜ್ ಅವರಿಗೆ ಕಾಣುತ್ತದೆ. ತಕ್ಷಣ ಅವರು ಬಹೂ, ಬಹುತ್ ಸಾರಾ ಪ್ಯಾರ್ ಸೀ ಯು ಸೂನ್ (ಸಹೋದರ ತುಂಬಾ ಪ್ರೀತಿ, ಬೇಗ ಸಿಗೋಣ) ಎಂದು ಬರೆಯುತ್ತಾರೆ.
ಇದನ್ನೂ ಓದಿ | Suryakumar Yadav | ಸೂರ್ಯಕುಮಾರ್ ಯಾದವ್ ಟಿ20 ಶತಕಗಳು