ಗುವಾಹಟಿ : ಭಾರತ ಹಾಗೂ ಪಾಕಿಸ್ತಾನ ನಡುವೆ ಭಾನುವಾರ ನಡೆದ ಹೈವೋಲ್ಟೇಜ್ ವಿಶ್ವ ಕಪ್ ವೇಳೆ ಕ್ರಿಕೆಟ್ ಅಭಿಮಾನಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಅಸ್ಸಾಮ್ನಿಂದ ವರದಿಯಾಗಿದೆ. ಈ ಬಗ್ಗೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅತಿಯಾದ ಒತ್ತಡಕ್ಕೆ ಬಿದ್ದಿರುವುದೇ ಘಟನೆಗೆ ಕಾರಣ ಎಂದು ವೈದ್ಯರ ಹೇಳಿಕೆಯನ್ನು ತನಿಖಾಧಿಕಾರಿಗಳು ಉಲ್ಲೇಖಿಸಿದ್ದಾರೆ.
ಮೃತಪಟ್ಟವರನ್ನು ೩೪ ವರ್ಷದ ಬಿಟು ಗೊಗೊಯ್ ಎಂದು ಗುರುತಿಸಲಾಗಿದೆ. ಅವರು ತಮ್ಮ ಗೆಳೆಯರ ಬಳಗದೊಂದಿಗೆ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಭಾನುವಾರ ನಡೆದ ಪಂದ್ಯವನ್ನು ವೀಕ್ಷಿಸಲು ಸ್ಥಳೀಯ ಚಿತ್ರ ಮಂದಿರವೊಂದಕ್ಕೆ ತೆರಳಿದ್ದರು. ಪಂದ್ಯ ಕುತೂಹಲಕಾರಿ ಘಟ್ಟಕ್ಕೆ ತೆರಳಿದ್ದ ವೇಳೆ ಅವರು ಏಕಾಏಕಿ ಕುಸಿದು ಬಿದಿದ್ದರು. ಜತೆಗಿದ್ದ ಗೆಳೆಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಅತಿಯಾದ ಶಬ್ದ ಹಾಗೂ ಮಾನಸಿಕ ಒತ್ತಡದಿಂದ ಅವರು ಮೃತಪಟ್ಟಿದ್ದಾರೆ ಎಂಬುದಾಗಿ ವೈದ್ಯರು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಿಳಿಸಿದ್ದಾರೆ. ಬಿಟು ಅವರ ಕುಟುಂಬದ ಸದಸ್ಯರು ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದು, ತಮ್ಮ ಮಗ ಆರೋಗ್ಯವಾಗಿದ್ದು ಯಾವುದೇ ರೀತಿಯ ಅಸೌಖ್ಯ ಹೊಂದಿರಲಿಲ್ಲ ಎಂಬುದಾಗಿ ಹೇಳಿದ್ದಾರೆ.
ಇದನ್ನೂ ಓದಿ | IND VS PAK | ಪಾಕ್ ವಿರುದ್ಧ ಭಾರತದ ಗೆಲುವಿನಿಂದ ಟಿ20 ವಿಶ್ವ ಸಮರಕ್ಕೆ ಮತ್ತಷ್ಟು ರಂಗು